ಬೆಂಗಳೂರಿನಲ್ಲಿ ಭಾರೀ ಟ್ರಾಫಿಕ್ ಜಾಂ

By Web DeskFirst Published Nov 6, 2018, 8:47 AM IST
Highlights

ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಂ ಸಮಸ್ಯೆ ಎದುರಾಗಿತ್ತು. ತಮ್ಮ ತಮ್ಮ ಊರುಗಳಿಗೆ ಜನರು ತೆರಳುತ್ತಿದ್ದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. 

ಬೆಂಗಳೂರು :  ದೀಪಾವಳಿ ರಜೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೋಮವಾರ ಸಂಜೆಯಿಂದಲೇ ಊರುಗಳಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಮೆಜೆಸ್ಟಿಕ್ ಪ್ರದೇಶಕ್ಕೆ ಆಗಮಿಸಿದ ಪರಿಣಾಮ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು. 

ನಗರದ ನಾನಾ ಭಾಗಗಳಲ್ಲಿ ನೆಲೆಸಿರುವ ಉದ್ಯೋಗಿಗಳು, ಕಾರ್ಮಿಕರು ಹಾಗೂ ಕೆಲಸಗಾರರು ರಾಜ್ಯ ಹಾಗೂ ಹೊರರಾಜ್ಯದ ತಮ್ಮ ಊರುಗಳಿಗೆ ತೆರಳಲು ಸಂಜೆಯಿಂದಲೇ ಬಸ್, ರೈಲು ನಿಲ್ದಾಣಗಳತ್ತ ದೊಡ್ಡ ಪ್ರಮಾಣದಲ್ಲಿ ಆಗಮಿಸಿದರು. 

ಇದರಿಂದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಮೌರ್ಯ ವೃತ್ತ, ಆನಂದರಾವ್ ವೃತ್ತ,  ಕೆ.ಜಿ.ರಸ್ತೆಗಳಲ್ಲಿ ವಾಹನ ಹಾಗೂ ಜನದಟ್ಟಣೆ ಉಂಟಾಯಿತು. ಇದರಿಂದ ರಸ್ತೆಗಳಲ್ಲಿ ವಾಹನ ಸಂಚಾರ ನಿಧಾನಗತಿಯಾಗಿ ಸವಾರರು ಪರದಾಡುವಂತಾಯಿತು. 

ಸಾಲು ರಜೆಗಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯು ಪ್ರಯಾಣಿಕರ ಅನುಕೂಲಕ್ಕಾಗಿ 1500 ಹೆಚ್ಚುವರಿ ಬಸ್ ಸೇವೆ ಕಲ್ಪಿಸಿದ್ದರಿಂದ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತ ಭಾರಿ ಸಂಖ್ಯೆಯ ಪ್ರಯಾಣಿಕರು ನೆರೆದಿದ್ದರು. ಸಂಜೆ 8ರ ಸುಮಾರಿಗೆ ಮೆಜೆಸ್ಟಿಕ್ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಸವಾರರು ಹಾಗೂ ಪ್ರಯಾಣಿಕರು ನಲುಗಿದರು. 

ಇತ್ತ ಖಾಸಗಿ ಬಸ್‌ಗಳಿಂದಾಗಿ ಮೌರ್ಯ ವೃತ್ತ ಹಾಗೂ ಆನಂದರಾವ್ ವೃತ್ತಗಳಲ್ಲೂ ಸಂಚಾರ ದಟ್ಟಣೆ ಉಂಟಾಯಿತು. ಮಧ್ಯರಾತ್ರಿವರೆಗೂ ಮೆಜೆಸ್ಟಿಕ್ ಪ್ರದೇಶ ಪ್ರಯಾಣಿಕರು ಹಾಗೂ ವಾಹನಗಳ ದಟ್ಟಣೆಯಿಂದ ಕೂಡಿತ್ತು. ಈ ಟ್ರಾಫಿಕ್ ಜಾಮ್ ನಿಯಂತ್ರಿಸುವಲ್ಲಿ ಸಂಚಾರ ಪೊಲೀಸರು ಹರಸಾಹಸಪಟ್ಟರು. ಮಂಗಳವಾರವೂ ಸಾಕಷ್ಟು ಮಂದಿ ಊರುಗಳಿಗೆ ತೆರಳುವ ಸಾಧ್ಯತೆಯಿರುವುದರಿಂದ ಸಂಜೆ ವೇಳೆಗೆ ಮೆಜೆಸ್ಟಿಕ್ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು.

click me!