5 ಜಿಲ್ಲೆಗಳಲ್ಲಿ ಇನ್ನೂ ಮಳೆಯಬ್ಬರ!

By Suvarna News  |  First Published Sep 22, 2020, 9:06 AM IST

5 ಜಿಲ್ಲೆಗಳಲ್ಲಿ ಇನ್ನೂ ಮಳೆಯಬ್ಬರ| ಟಿಬಿಡ್ಯಾಂನಿಂದ ಭಾರೀ ನೀರು, ಹಂಪಿ, ನವವೃಂದಾವನ ಜಲಾವೃತ| ಪ್ರವಾಹದಲ್ಲಿ ಕೊಚ್ಚಿ ಹೋದ ಮೂವರು| ಉಡುಪಿ, ಕೊಡಗಲ್ಲಿ ತಗ್ಗಿದ ಮಳೆ


ಬೆಂಗಳೂರು(ಸೆ.22): ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಾದ ಉಡುಪಿ, ದಕ್ಷಿಣಕನ್ನಡ, ಕೊಡಗು, ಚಿಕ್ಕಮಗಳೂರಲ್ಲಿ ಮಳೆ ಇಳಿಮುಖವಾಗಿದ್ದರೂ ರಾಜ್ಯದ ಐದು ಜಿಲ್ಲೆಗಳಲ್ಲಿ ಸೋಮವಾರವೂ ಮಳೆಯಬ್ಬರ ಮುಂದುವರಿದಿದೆ. ಮುಲ್ಲಾಮಾರಿ, ಡೋಣಿ, ಕಪಿಲಾ ಸೇರಿದಂತೆ ಹಲವು ನದಿಗಳು ಉಕ್ಕಿಹರಿಯುತ್ತಿವೆ. ಉಕ್ಕಿ ಹರಿಯುತ್ತಿದ್ದ ತುಂಗಭದ್ರಾ ನದಿಯಲ್ಲಿ ಇಬ್ಬರು ಯುವಕರು ಸೇರಿದಂತೆ ಪ್ರತ್ಯೇಕ ಘಟನೆಯಲ್ಲಿ ಮೂವರು ನದಿಪಾಲಾಗಿದ್ದಾರೆ. ಬೆಳಗಾವಿಯಲ್ಲಿ ಹಲವು ಸೇತುವೆಗಳು ಮುಳುಗಡೆಯಾಗಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ ತುಂಗಭದ್ರಾ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ಹಂಪಿಯ ಕೆಲ ಸ್ಮಾರಕ ಮತ್ತು ಗಂಗಾವತಿ ಸಮೀಪದ ಋುಷಿಮುಖ ಪರ್ವತ, ಕೃಷ್ಣದೇವರಾಯ ಸಮಾಧಿ, 60 ಕಾಲಿನ ಮಂಟಪ, ನವ ವೃಂದಾವನ, ವಿರೂಪಾಪುರಗಡ್ಡೆ ಮತ್ತಿತರ ಪ್ರಮುಖ ಸ್ಥಳಗಳು ಮುಳುಗಡೆಯಾಗಿವೆ.

ದಾಖಲೆ ಮಳೆಗೆ ತತ್ತರಿಸಿದ್ದ ಉಡುಪಿ ಸ್ಥಿತಿ ಈಗ ಹೇಗಿದೆ?

Tap to resize

Latest Videos

ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿನ ತುಂಗಭದ್ರಾ ನದಿಯಲ್ಲಿ ಎತ್ತುಗಳ ಮೈತೊಳೆಯಲು ತೆರಳಿದ್ದ ಬೆಟ್ಟಪ್ಪ ಮೋನಪ್ಪ ಮಿಳ್ಳಿ (25), ಜಗದೀಶ ವೆಂಕಪ್ಪ ಐರಣಿ (22) ಎಂಬಿಬ್ಬರು ಯುವಕರು ಎತ್ತಿನ ಸಮೇತ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಯಾದಪೀರಶೆಟ್ಟಿಹಳ್ಳದ ಪ್ರವಾಹಕ್ಕೆ ಶ್ರೀಚಂದ್‌ ಗ್ರಾಮದ ರೈತ ಪೀರಶೆಟ್ಟಿಪೂಜಾರಿ (29) ನೀರಲ್ಲಿ ಕೊಚ್ಚಿ ಹೋಗಿದ್ದಾರೆ.

ಯಾದಗಿರಿಯಲ್ಲಿ ಮಳೆಯಬ್ಬರ ತಗ್ಗಿದ್ದರೂ ಕಲಬುರಗಿಯಲ್ಲಿ ಕಳೆದೊಂದು ವಾರದಿಂದ ಮಳೆಯಬ್ಬರ ಯಥಾರೀತಿ ಮುಂದುವರಿದಿದೆ. ಚಿಂಚೋಳಿ ತಾಲೂಕಲ್ಲಿ ಮುಲ್ಲಾಮಾರಿ ನದಿ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಹಳ್ಳ-ಕೊಳ್ಳಗಳು ತುಂಬಿ ಜಿಲ್ಲೆಯಲ್ಲಿ 150ಕ್ಕೂಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚಿಂತಪಳ್ಳಿ ರಾಯಕೋಡ ಗ್ರಾಮದ ಬಳಿ ಹಳ್ಳ ತುಂಬಿ ಹರಿದ ಪರಿಣಾಮ ಚಿಂಚೋಳಿ-ಸೇಡಂ ರಸ್ತೆ ಸಂಪರ್ಕ ಕಡಿತವಾಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಬೆಳೆ ಹಾನಿಯಾಗಿದೆ.

ಮಲೆನಾಡು ಜಿಲ್ಲೆಗಳಾದ ಕೊಡಗು ಮತ್ತು ಚಿಕ್ಕಮಗಳೂರಲ್ಲಿ ಮಳೆಯಬ್ಬರ ಸೋಮವಾರ ಕ್ಷೀಣಿಸಿದ್ದು, ಶಿವಮೊಗ್ಗದಲ್ಲಿ ಮಾತ್ರ ಭಾರೀ ಮಳೆ ಮುಂದುವರಿದಿದೆ. ಚಾರ್ಮಾಡಿ ಘಾಟ್‌ ಪ್ರದೇಶದಲ್ಲೂ ಮಳೆ ಮುಂದುವರಿದಿದ್ದು, ಕೆಲವೆಡೆ ಧರೆ ಕುಸಿದಿದೆ. ಇನ್ನು ಶಿವಮೊಗ್ಗದ ಸಾಗರ, ತೀರ್ಥಹಳ್ಳಿ, ಆಗುಂಬೆ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ತುಂಗಾ, ಶರಾವತಿ ಮತ್ತಿತರ ನದಿಗಳು ಉಕ್ಕಿಹರಿಯುತ್ತಿವೆ. ಅದೇ ರೀತಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಭರ್ಜರಿ ಮಳೆ ಸುರಿದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿದ ಪರಿಣಾಮ ಭಾರೀ ಬೆಳೆಹಾನಿಯಾಗಿದೆ.

ರಾಜ್ಯದಲ್ಲಿ ಭಾರೀ ಮಳೆ : ಉಕ್ಕೇರುತ್ತಿದ್ದಾಳೆ ಕಾವೇರಿ

ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲೂ ಕಳೆದೆರಡು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಡೋಣಿ, ಕೃಷ್ಣಾ, ಭೀಮಾ ನದಿ ನೀರಿನಮಟ್ಟಏರಿಕೆಯಾಗುತ್ತಿದೆ. ವಿಜಯಪುರದಲ್ಲಿ ಡೋಣಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ನೂರಾರು ಎಕರೆ ಹೊಲಗಳಿಗೆ ನೀರು ನುಗ್ಗಿದೆ. ಹಡಗಿನಾಳ ಸೇತುವೆ ಮುಳುಗಿ ಅಕ್ಕಪಕ್ಕದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಬಾಗಲಕೋಟೆಯಲ್ಲಿ ಸಾಧಾರಣ ಮಳೆಯಾಗಿದೆ.

ಎಲ್ಲೆಲ್ಲಿ ಇಳಿಮುಖ?

ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಯಾದಗಿರಿ

ಎಲ್ಲೆಲ್ಲೆ ಅಬ್ಬರ

ಕಲಬುರಗಿ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ವಿಜಯಪುರ

ಕಬಿನಿಯಿಂದ ನೀರು ಬಿಡುಗಡೆ, ಕಪಿಲಾ ತಟದಲ್ಲಿ ಪ್ರವಾಹಾತಂಕ

ನಂಜನಗೂಡು- ಕೇರಳದ ವಯನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಂಜನಗೂಡಿನ ಕಬಿನಿ ಡ್ಯಾಂಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಡ್ಯಾಂನಿಂದ ಕಪಿಲಾ ನದಿಗೆ 35 ಸಾವಿರ ಕ್ಯುಸೆಕ್‌ ನೀರನ್ನು ಸೋಮವಾರ ಹೊರಬಿಡಲಾಗಿದ್ದು, ನದಿತಟದಲ್ಲಿ ಪ್ರವಾಹದ ಆತಂಕ ಶುರುವಾಗಿದೆ.

ಲಿಂಗನಮಕ್ಕಿ ಭರ್ತಿಗೆ ಕೇವಲ 7 ಅಡಿ ಬಾಕಿ

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿರುವ ಕಾರಣ ಲಿಂಗನಮಕ್ಕಿ ಜಲಾಶಯ ಭರ್ತಿಗೆ ಇನ್ನು ಕೇವಲ ಏಳು ಅಡಿಯಷ್ಟೇ ಬಾಕಿ ಇದೆ. 1819 ಅಡಿ ಗರಿಷ್ಠ ಮಟ್ಟದ ಈ ಡ್ಯಾಂ ಈಗಾಗಲೇ 1811.05 ಅಡಿಯಷ್ಟುತುಂಬಿದೆ. ಡ್ಯಾಂಗೆ 34,733 ಕ್ಯುಸೆಕ್‌ ಒಳಹರಿವಿದ್ದು, 857 ಕ್ಯುಸೆಕ್‌ ಹೊರಬಿಡಲಾಗುತ್ತಿದೆ.

ಇನ್ನೂ 2 ದಿನ ಭಾರೀ ಮಳೆ : ರೆಡ್‌ ಅಲ​ರ್ಟ್‌ ಲಿಸ್ಟ್‌ನಲ್ಲಿ ನಿಮ್ಮ ಜಿಲ್ಲೆಯೂ ಇದೆಯಾ?​

ಲಂಗರು ಹಾಕಿದ ಬೋಟುಗಳು ಡಿಕ್ಕಿಯಾಗಿ ಹಾನಿ

ಭಟ್ಕಳ- ಅರಬ್ಬೀಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ದಡದಲ್ಲಿ ಲಂಗರು ಹಾಕಿರುವ ಬೋಟ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಅಪಾರ ಹಾನಿಯಾದ ಘಟನೆ ಭಟ್ಕಳದಲ್ಲಿ ನಡೆದಿದೆ.

click me!