• ದನಕರುಗಳಿಗೆ ಮೇವು ಹಾಕಲು ಹೋದ ಬಾಲಕನ ಮೇಲೆ ಕುಸಿದ ಗೋಡೆ
• ಖಾನಾಪುರ ತಾಲೂಕಿನ ಹಳ್ಳಕೊಳ್ಳಗಳೆಲ್ಲ ಭರ್ತಿ, ಮಲಪ್ರಭಾ ನದಿ ಒಳಹರಿವು ಹೆಚ್ಚಳ
• ಖಾನಾಪುರ ಪೊಲೀಸ್ ತರಬೇತಿ ಶಾಲೆಗೂ ಪ್ರವಾಹ ಭೀತಿ, ಮುಂಜಾಗ್ರತೆ ಕ್ರಮ
ಬೆಳಗಾವಿ (ಜುಲೈ 15): ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯ ಪೈಕಿ ಖಾನಾಪುರ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಅದರಲ್ಲೂ ಕಣಕುಂಬಿ ಅರಣ್ಯ ವಲಯ ವ್ಯಾಪ್ತಿಯಲ್ಲಿ 15 ಸೆಂಟಿಮೀಟರ್‌ಗೂ ಹೆಚ್ಚು ಮಳೆಯ ಪ್ರಮಾಣ ದಾಖಲಾಗಿದೆ. ಪರಿಣಾಮ ಖಾನಾಪುರ ತಾಲೂಕಿನ ಹಳ್ಳ ಕೊಳ್ಳಗಳೆಲ್ಲವೂ ಸಂಪೂರ್ಣ ಭರ್ತಿಯಾಗಿದ್ದು ಕೆಳಹಂತದ ಸೇತುವೆಗಳು ಜಲಾವೃತಗೊಂಡಿದೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ಮನೆಗೋಡೆ ಕುಸಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚುಂಚವಾಡ ಗ್ರಾಮದ 16 ವರ್ಷದ ಅನಂತರಾಜ ಧರ್ಮೇಂದ್ರ ಪಾಶೆಟ್ಟಿ ಕಳೆದ ರಾತ್ರಿ ಮನೆ ಗೋಡೆ ಕುಸಿದು ಮೃತಪಟ್ಟಿದ್ದಾನೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ದನ ಕಟ್ಟುತ್ತಿದ್ದ ಹಳೆಯ ಮನೆಯ ಗೋಡೆ ಕುಸಿದಿದೆ. ಪರಿಣಾಮ ದನಗಳಿಗೆ ಮೇವು ಹಾಕಲು ಹೋಗಿದ್ದ ಬಾಲಕ ಅನಂತರಾಜ ಮೇಲೆ ಗೋಡೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಖಾನಾಪುರ ತಾಲೂಕಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಬಾಲಕನ ಶವ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಘಟನೆಗೆ ತ್ವರಿತವಾಗಿ ಸ್ಪಂದಿಸಿದ ಬೆಳಗಾವಿ ಡಿಸಿ ನಿತೇಶ ಪಾಟೀಲ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಖಾನಾಪುರ ತಹಶಿಲ್ದಾರ್ ಪಿಡಿ ಖಾತೆಯಿಂದ ಆರ್‌ಟಿಜಿಎಸ್ ಮೂಲಕ ಬಾಲಕನ ತಂದೆಯ ಖಾತೆಗೆ ಜಮಾ ಮಾಡಲಾಯಿತು.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ (Anjali Nimbalkar) ಮೃತ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ಖಾನಾಪುರ ತಾಲೂಕಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಗೋಡೆ ಪಕ್ಕ ಮಲಗಬೇಡಿ, ಗೋಡೆ ಪಕ್ಕ ಏನೂ ಕೆಲಸ ಮಾಡಲು ಹೋಗಬೇಡಿ. ತಂದೆ-ತಾಯಿಗಿದ್ದ ಒಬ್ಬನೇ ಮಗ. ಹೆಣ್ಣು ಮಕ್ಕಳಿದ್ದಾರೆ ಇಂತಹ ಪರಿಸ್ಥಿತಿ ಯಾರಿಗೆ ಬರಬಾರದು. ಖಾನಾಪುರ ತಾಲೂಕಿನ ಜನ ಹುಷಾರಾಗಿರಿ ಎಂದು ಕೈಮುಗಿದು ಮನವಿ ಮಾಡ್ತೇನೆ. ನಿಮ್ಮ ಮನೆಯವರ ಬಗ್ಗೆ ಕಾಳಜಿ ತಗೆದುಕೊಳ್ಳಲಿ. ನಿಮಗೆ ಏನೂ ತೊಂದರೆ ಇದ್ದರೆ ತಿಳಿಸಿ. ಖಾನಾಪುರ ಪಟ್ಟಣದಲ್ಲಿ ಟೀಮ್ ರೆಡಿ ಇದೆ ಎಂದು ಹೇಳಿದ್ದಾರೆ.
ಮಂತುರ್ಗಾ ಬಳಿ ಸೇತುವೆ ಮುಳುಗಡೆ; 30ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಟ್: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ಹಾಲಾತ್ರಿ ಹಳ್ಳ ಉಕ್ಕಿ ಹರಿಯುತ್ತಿದೆ. ಮಂತುರ್ಗಾ ಗ್ರಾಮದ (Manturga village ) ಬಳಿ ಸೇತುವೆ (Bridge) ಮುಳುಗಡೆಯಾಗಿದ್ದು ಸಿಂಧನೂರು - ಹೆಮ್ಮಡಗಾ ಅಂತರ್‌ರಾಜ್ಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದೆ. ಖಾನಾಪುರ (Khanapur) ಪಟ್ಟಣದಿಂದ 30 ಹಳ್ಳಿಗಳ ಸಂಪರ್ಕ ಕಟ್ ಆಗಿದ್ದು ಜೀವಭಯದಲ್ಲೇ ಮುಳುಗಡೆಯಾದ ಸೇತುವೆ ಮೇಲೆ ಬೈಕ್ ಸವಾರರ ಸಂಚಾರ ಮಾಡುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳನ್ನು ವ್ಯಕ್ತಿಯೋರ್ವ ಹೆಗಲ ಮೇಲೆ ಹೊತ್ತಿಕೊಂಡು ಹೋಗುವ ದೃಶ್ಯವೂ ಕಂಡು ಬಂತು. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮಂತೂರ್ಗಾ, ಅಶೋಕ ನಗರ, ನೆರಸಾ, ಕೊಂಗಳಾ, ಪಾಶ್ಚೋಳಿ, ಗೋವಾಳಿ, ಟಿವೋಳಿ, ಶಿರೋಳೆ , ಜಾಮಗಾಂವ, ಅಬನಾಳಿ, ಹೆಮ್ಮಡಗಾ, ಡೊಂಗರಗಾಂವ, ಪಾಲಿ, ದೇಗಾಂವ ಸೇರಿ 30ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಐತಿಹಾಸಿಕ ಹಬ್ಬಾನಟ್ಟಿ ಮಾರುತಿ ದೇವಸ್ಥಾನ ಭಾಗಶಃ ಮುಳುಗಡೆ: ಇನ್ನು ಪಶ್ಚಿಮ ಘಟ್ಟ ಪ್ರದೇಶ, ಖಾನಾಪುರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಮಲಪ್ರಭಾ ನದಿ ನೀರಿನಲ್ಲಿ ಒಳಹರಿವು ಹೆಚ್ಚಳವಾಗಿದೆ. ಮಲಪ್ರಭಾ ನದಿಗೆ 14 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಇದರಿಂದ ಹಬ್ಬಾನಟ್ಟಿ ಗ್ರಾಮದ ಸ್ವಯಂಭೂ ಮಾರುತಿ ಮಲಪ್ರಭಾ ತೀರ್ಥಕ್ಷೇತ್ರದ ಮಾರುತಿ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ. ಮಲಪ್ರಭಾ (Malaprabha River) ನದಿಯ ದಡದಲ್ಲಿರುವ ಹಬ್ಬಾನಟ್ಟಿ ಮಾರುತಿ ದೇವಸ್ಥಾನ ಭಾಗಶಃ ಮುಳುಗಡೆ. ವರ್ಷದ ಮೂರು ತಿಂಗಳು ಮಳೆಗಾಲ ವೇಳೆ ಹಬ್ಬಾನಟ್ಟಿ ದೇವಸ್ಥಾನ ಬಂದ್ ಆಗಿರುತ್ತೆ. ಮಾರುತಿ ದೇವಸ್ಥಾನ ಹಿಂಬದಿಯಲ್ಲಿರುವ ಶಿವ ಮಂದಿರವೂ ಮುಳುಗಡೆಯಾಗಿದೆ. ಖಾನಾಪುರ ತಾಲೂಕಿನಲ್ಲಿ ಮಳೆಯ ಅಬ್ಬರದಿಂದ ಕಾಡಂಚಿನ ಗ್ರಾಮಸ್ಥರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ: ಸಂತೋಷ ಆತ್ಮಹತ್ಯೆ: ರಾಜ್ಯಪಾಲರ ಮೊರೆ ಹೋದ ಕುಟುಂಬ
ಖಾನಾಪುರ ಪೊಲೀಸ್ ತರಬೇತಿ ಕೇಂದ್ರಕ್ಕೂ ನೀರು ನುಗ್ಗುವ ಭೀತಿ: ವಿಪರೀತ ಮಳೆಯಿಂದ ಖಾನಾಪುರ ಪೋಲಿಸ್ ತರಬೇತಿ ಕೇಂದ್ರಕ್ಕೂ ಪ್ರವಾಹದ ಭೀತಿ ಎದುರಾಗಿದೆ. ಖಾನಾಪುರ ಪೊಲೀಸ್ ತರಬೇತಿ ಕೇಂದ್ರದಲ್ಲಿ 300ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳಿದ್ದು, 20 ಕುಟುಂಬಗಳು ವಾಸವಿವೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ತರಬೇತಿ ಕೇಂದ್ರದಿಂದ ಖಾನಾಪುರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹಾಗೂ ತಹಶಿಲ್ದಾರ್ ಗೆ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರು ಪತ್ರ ಬರೆದಿದ್ದಾರೆ. ಪೊಲೀಸ್ ತರಬೇತಿ ಕೇಂದ್ರಕ್ಕೆ ಮಳೆ ನೀರು ನುಗ್ಗಿ ಸ್ಥಳಾಂತರಗೊಳ್ಳುವ ಪರಿಸ್ಥಿತಿ ಬಂದರೆ ಕಲ್ಯಾಣ ಮಂಟಪ ಸೇರಿ ಕೆಲ ಕಟ್ಟಡ ಕಾಯ್ದಿರಿಸಲು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಎರಡು ವರ್ಷಗಳ ನಂತರ ಗೋಕಾಕ ಫಾಲ್ಸ್‌ನಲ್ಲಿ ಪ್ರವಾಸಿಗರ ಸಂಭ್ರಮ..!
ಎರಡು ವಾರಗಳಿಂದ ಮಳೆ ಬಿಟ್ಟೂಬಿಡದೇ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಜನರು ಕಂಗೆಟ್ಟಿದ್ದಾರೆ. ಇದೇ ರೀತಿ ಇನ್ನೂ 15 ದಿನಗಳ ಕಾಲ ಮಳೆ ಮುಂದುವರಿದರೆ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುವ ಆತಂಕ ಇದೆ. ಮುಳುಗಡೆಯಾದ ಸೇತುವೆ ಮೇಲೆ ಜನ ಸಂಚಾರ ನಿಷೇಧಿಸುವ ಅಗತ್ಯತೆ ಇದ್ದು ಈ ಸಂಬಂಧ ಬೆಳಗಾವಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ