ಮಳೆಯಬ್ಬರಕ್ಕೆ ಕಂಗೆಟ್ಟ ಕಲ್ಯಾಣ ಕರ್ನಾಟಕ; ಬದುಕು ನೀರುಪಾಲು..!

By Kannadaprabha NewsFirst Published Oct 16, 2020, 7:23 AM IST
Highlights

ಮಹಾರಾಷ್ಟ್ರದ ಪಶ್ಚಿಮಘಟ್ಟಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಜನರು ಬದುಕು ಬೀದಿಗೆ ಬಂದಂತಾಗಿದ್ದು, ಅಪಾರ ಆಸ್ತಿ ಹಾನಿ ಸಂಭವಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಅ.16): ಕಳೆದೆರಡು ದಿನಗಳ ಮಳೆಯಬ್ಬರ ಗುರುವಾರ ಕೊಂಚ ಇಳಿಮುಖವಾದರೂ ಮಹಾರಾಷ್ಟ್ರದ ಜಲಾಶಯಗಳಿಂದ 5 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಭೀಮಾ ಸೇರಿ ಉತ್ತರ ಕರ್ನಾಟಕದ ಹಲವು ನದಿಗಳು ಅಪಾಯಮಟ್ಟಮೀರಿ ಹರಿಯುತ್ತಿವೆ. ಪ್ರವಾಹದಿಂದಾಗಿ ಕಲಬುರಗಿ, ಯಾದಗಿರಿ, ವಿಜಯಪುರ ಭಾಗದಲ್ಲಿ ನೂರಾರು ಗ್ರಾಮಗಳ ಜನರ ಬದುಕು ನೀರುಪಾಲಾಗಿದ್ದು, ಅಗತ್ಯವಸ್ತುಗಳು, ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆ ಕೊಚ್ಚಿಹೋಗಿವೆ. ಈಗಾಗಲೇ ನದಿತೀರದ 10 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದು, ಈ ಪೈಕಿ 9 ಸಾವಿರ ಮಂದಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ನೆರೆ ನೀರಲ್ಲಿ ಸಿಲುಕಿದ್ದ 300ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅಲ್ಲಿನ ಜಲಾಶಯಗಳಿಂದ ಭೀಮಾ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣ 7.50 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಲಬುರಗಿಯಲ್ಲಿ ನದಿಪಾತ್ರದ 148 ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ.

ಏತನ್ಮಧ್ಯೆ, ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಮಳೆ ತುಸು ಇಳಿಮುಖಗೊಂಡಿದ್ದು, ಈ ಜಿಲ್ಲೆಗಳಲ್ಲಿ ಆವರಿಸಿದ್ದ ಪ್ರವಾಹದ ಆತಂಕ ಸದ್ಯಕ್ಕೆ ನಿವಾರಣೆಯಾಗಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗಿದ್ದು, ಈ ಭಾಗದ ನಿವಾಸಿಗಳಲ್ಲಿ ಆತಂಕ ಮೂಡುವಂತೆ ಮಾಡಿದೆ.

ಸಪ್ತನದಿಗಳಬ್ಬರ: ಕಲಬುರಗಿಯಲ್ಲಿ ಮಳೆ ಕ್ಷೀಣವಾಗಿದ್ದರೂ ಭೀಮಾ, ಅಮರ್ಜಾ, ಗಂಡೋರಿನಾಲಾ, ಬೆಣ್ಣೆತೊರೆ, ಮುಲ್ಲಾಮಾರಿ, ಕಾಗಿಣಾ ಹಾಗೂ ಕಮಲಾವತಿ ಹೀಗೆ ಸಪ್ತ ನದಿಗಳು ಇನ್ನೂ ಅಪಾಯಮಟ್ಟಮೀರಿ ಹರಿಯುತ್ತಿವೆ. ಅಫಜಲ್ಪುರ ತಾಲೂಕಿನ ಸೊನ್ನ ಜಲಾಶಯದಿಂದ ಭೀಮಾ ನದಿಗೆ 5.11 ಲಕ್ಷ ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿದ್ದು, ಅಫಜಲ್ಪುರ, ಚಿತ್ತಾಪುರ, ಕಲಬುರಗಿ ಹಾಗೂ ಜೇವರ್ಗಿ ತಾಲೂಕುಗಳಲ್ಲಿ ಪ್ರವಾಹದ ತೀವ್ರತೆ ಹೆಚ್ಚಾಗಿದೆ. ಈ ಮಧ್ಯೆ, ಅಫಜಲ್ಪುರ ಪಟ್ಟಣದ ಕೆರೆ ಕೂಡ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲೂ ಕೋಡಿ ಹರಿದು ತಗ್ಗುಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ಹೀಗೆ ಪ್ರವಾಹಕ್ಕಂಜಿ ಜನ ಅಗತ್ಯವಸ್ತುಗಳೊಂದಿಗೆ ಊರು ತೊರೆಯುತ್ತಿರುವ ದೃಶ್ಯ ಈ ಭಾಗದಲ್ಲಿ ಅಲ್ಲಲ್ಲಿ ಕಣ್ಣಿಗೆ ಬೀಳುತ್ತಿದೆ. ಈಗಾಗಲೇ ಹೀಗೆ ಊರು ತೊರೆದ 8 ಸಾವಿರಕ್ಕೂ ಹೆಚ್ಚು ಮಂದಿಗೆ 48 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಪ್ರವಾಹದಬ್ಬರಕ್ಕೆ ಜಿಲ್ಲೆಯ ಏಳು ತಾಲೂಕುಗಳ 30 ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು, 100ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಅಪಾಯದಲ್ಲಿ ಸಿಲುಕಿದ್ದ 150ಕ್ಕೂ ಹೆಚ್ಚು ಮಂದಿಯನ್ನು ಎನ್‌ಡಿಆರ್‌ಎಫ್‌ ನೆರವಿನೊಂದಿಗೆ ರಕ್ಷಿಸಲಾಗಿದೆ. ನೆರೆಯ ಯಾದಗಿರಿಯಲ್ಲಿ 97 ಕುಟುಂಬಗಳನ್ನು ಈಗಾಗಲೇ ರಕ್ಷಣೆ ಮಾಡಲಾಗಿದ್ದು, ನದಿ ತೀರದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

'ನೆರೆ ಹಾನಿಗೆ ತಕ್ಷಣ ವಿಶೇಷ ಅನುದಾನ'

50 ಕುಟುಂಬ ಸ್ಥಳಾಂತರ: ಕಲಬುರಗಿ ರೀತಿಯಲ್ಲೇ ಪ್ರವಾಹದ ಆತಂಕದಲ್ಲಿರುವ ವಿಜಯಪುರದಲ್ಲೂ ಡೋಣಿ ಮತ್ತು ಭೀಮಾ ನದಿಗಳೂ ಪ್ರವಾಹಮಟ್ಟದಲ್ಲೇ ಹರಿಯುತ್ತಿವೆ. ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಿಂದಗಿ ತಾಲೂಕಿನ ತಾರಾಪುರ ಗ್ರಾಮದ 50ಕ್ಕೂ ಮಂದಿಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಅಗತ್ಯಬಿದ್ದರೆ ಇನ್ನಷ್ಟು ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪ್ರವಾಹದ ಹೊಡೆತಕ್ಕೆ ಜಿಲ್ಲೆಯಲ್ಲಿ ಒಟ್ಟಾರೆ 5 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶ ಕಬ್ಬು ಸೇರಿದಂತೆ ವಿವಿಧ ಬೆಳೆಹಾನಿಯಾಗಿದೆ.

ಕೊಚ್ಚಿಹೋದ ವ್ಯಕ್ತಿ: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಬಳಿ ಹಳ್ಳ ದಾಟಲು ಹೋದ ಶಿವಪುತ್ರ ನಾಟೀಕರ್‌(40) ಎಂಬಾತ ಪ್ರವಾಹ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.

click me!