
ಬೆಂಗಳೂರು (ಫೆ.15): ಶಿವರಾತ್ರಿಗೆ ಶಿವ ಶಿವ ಎಂದು ಚಳಿ ಹೋಗುವ ಮುನ್ನವೇ ರಾಜ್ಯದಲ್ಲಿ ಬಿರು ಬಿಸಿಲಿನ ಆರ್ಭಟ ಜೋರಾಗಿದೆ. ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ನೇಸರ ಉಗ್ರ ಪ್ರತಾಪ ತೋರುವ ಲಕ್ಷಣಗಳಿವೆ.
ಸದ್ಯ, ಉತ್ತರ ಕರ್ನಾಟಕ ಭಾಗದಲ್ಲಷ್ಟೇ ಅಲ್ಲ, ಕರಾವಳಿ, ಬೆಂಗಳೂರಿನಲ್ಲೂ ಬಿಸಿಲಿನ ಝಳ ಅಧಿಕವಾಗಲಿದ್ದು ಜನ ಬಸವಳಿಯಲಿದ್ದಾರೆ. ವಿಶೇಷವಾಗಿ ಏಪ್ರಿಲ್-ಮೇ ತಿಂಗಳಿನಲ್ಲಂತೂ ರಾಜ್ಯದಲ್ಲಿ ಬಿಸಿಲಿನ ಆರ್ಭಟ ಇನ್ನೂ ಅಧಿಕವಾಗಲಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಚರ್ಮ ಸಂಬಂಧಿ ಕಾಯಿಲೆಗಳ ಜೊತೆಗೆ ಆಯಾಸದಿಂದಲೂ ಬಳಲಬೇಕಾಗುತ್ತದೆ. ಮಕ್ಕಳು, ಹಿರಿಯ ನಾಗರಿಕರು, ಬಯಲು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವವರು ಜಾಗರೂಕತೆಯಿಂದ ಇರಬೇಕಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕಾರವಾರದಲ್ಲಿ ಶನಿವಾರ ದೇಶದಲ್ಲೇ ಅತಿ ಹೆಚ್ಚು ಅಂದರೆ, 37.6 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಸಮುದ್ರದಿಂದ ಬಿಸಿ ಗಾಳಿ ಜೊತೆಗೆ ತೇವಾಂಶವೂ ಸೇರಿಕೊಂಡು ಉಷ್ಣಾಂಶ ಅಧಿಕವಾಗಿದ್ದು ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದಲೇ ಕಾರವಾರದಲ್ಲಿ ದೇಶದಲ್ಲೇ ಅತ್ಯಧಿಕ ಉಷ್ಣಾಂಶ ದಾಖಲಾಗಿದೆ. ಅಲ್ಲಿ ವಾಡಿಕೆ ಸರಾಸರಿ ಉಷ್ಣಾಂಶ 4.3 ಡಿಗ್ರಿ ಸೆಲ್ಶಿಯಸ್ ಮಾತ್ರ ಇತ್ತು ಎಂಬುದು ಉಲ್ಲೇಖನೀಯ. ಕಲಬುರಗಿಯಲ್ಲಿ ಉಷ್ಣಾಂಶ ಅಧಿಕವಾಗಿದ್ದಾಗ ಹೇಗೆ ಆಯಾಸ ಉಂಟಾಗುವುದೋ ಅದೇ ರೀತಿಯ ಅನುಭವ ಕಾರವಾರದಲ್ಲೂ ಆಗಿದೆ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ 30 ರಿಂದ 31 ಡಿಗ್ರಿ ಸೆಲ್ಶಿಯಸ್ ತಾಪಮಾನವಿದ್ದು ಏಪ್ರಿಲ್-ಮೇ ತಿಂಗಳಿನಲ್ಲಿ 37 ಡಿಗ್ರಿ ಸೆಲ್ಶಿಯಸ್ ದಾಟಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಸದ್ಯ 34 ಡಿಗ್ರಿ ಸೆಲ್ಶಿಯಸ್ ತಾಪಮಾನವಿದ್ದು, ಏಪ್ರಿಲ್-ಮೇ ಮಾಹೆಯಲ್ಲಿ 37 ಡಿಗ್ರಿ ಸೆಲ್ಶಿಯಸ್‌ಗೆ ಮುಟ್ಟಲಿದೆ. ಅದರಲ್ಲೂ ಕಲಬುರಗಿಯಲ್ಲಿ ತಾಪಮಾನ 47 ಡಿಗ್ರಿ ಸೆಲ್ಶಿಯಸ್ ದಾಟಬಹುದು’ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಗದಗ, ಬಾಗಲಕೋಟೆ. ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲಿ ಉಷ್ಣಾಂಶ ವಾಡಿಕೆಗಿಂತ ಬಹಳಷ್ಟು ಅಧಿಕವಾಗಲಿದೆ. ಬೆಂಗಳೂರಿನಲ್ಲಿ ತಾಪಮಾನ 39 ಡಿಗ್ರಿ ಸೆಲ್ಶಿಯಸ್ ವರೆಗೂ ಹೋಗಬಹುದು. ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಕಾರವಾರಗಳಲ್ಲಿ 38 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪಬಹುದು ಎಂದು ಅವರು ಅಂದಾಜಿಸಿದ್ದಾರೆ.
ಈಗಾಗಲೇ ಜನ, ಜಾನುವಾರುಗಳ ನೆತ್ತಿ ಬಿಸಿಲ ಶಾಖದಿಂದ ಸುಡುತ್ತಿದ್ದು, ಅಧಿಕ ಪ್ರಮಾಣದ ಶಾಖ ಎದುರಿಸಲು ರಾಜ್ಯದ ಜನ ಸಜ್ಜಾಗಬೇಕಿದೆ. ಶಿವರಾತ್ರಿ ಬಳಿಕ ಏಪ್ರಿಲ್-ಮೇ ತಿಂಗಳಿನಲ್ಲಿ ಬಿಸಿಲಿನ ಪ್ರಮಾಣ ಭಾರೀ ಹೆಚ್ಚಳವಾಗಲಿದೆ. ಬಿಸಿಲು ಹಿನ್ನೆಲೆಯಲ್ಲಿ ದೇಹ ನಿರ್ಜಲೀಕರಣ ಆಗದಂತೆ ತಡೆಗಟ್ಟಬೇಕು. ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು ಕುಡಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಟೀ. ಕಾಫಿ, ಮದ್ಯಪಾನ ಕಡಿಮೆ ಮಾಡಬೇಕು. ಮಧ್ಯಾಹ್ನದ ಸಮಯದಲ್ಲಿ ಹೆಚ್ಚು ಶ್ರಮದಾಯಕ ಕೆಲಸ ಮಾಡಬಾರದು. ನೀರು ಹೆಚ್ಚಾಗಿ ಕುಡಿಯಬೇಕು. ಗಾಳಿಯಾಡುವಂತೆ ಮನೆಯ ಕಿಟಕಿ, ಬಾಗಿಲು ತೆರೆದಿರಬೇಕು. ಎಳನೀರು, ನಿಂಬೆ ಪಾನಕ, ಮಜ್ಜಿಗೆ ಮತ್ತಿತರ ಪಾನೀಯಗಳು ದೇಹವನ್ನು ತಂಪುಗೊಳಿಸಲಿದ್ದು ಇವುಗಳ ಸೇವನೆಗೆ ಆದ್ಯತೆ ನೀಡಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಆಹಾರ ಪದ್ಧತಿ ಉತ್ತಮವಾಗಿರಬೇಕು. ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಮುಂತಾದ ನೀರಿನಂಶವಿರುವ ಹಣ್ಣು-ತರಕಾರಿ ಸೇವಿಸಬೇಕು. ಎಣ್ಣೆ ಮತ್ತು ಖಾರದ ಆಹಾರಗಳನ್ನು ಕಡಿಮೆ ಮಾಡಬೇಕು. ಮುಂಜಾನೆ ಅಥವಾ ಬೆಳಗ್ಗೆಯೇ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಅನಿವಾರ್ಯತೆ ಇದ್ದಾಗ ಮಾತ್ರ ಹೊರಗೆ ಹೋಗಬೇಕು ಎಂದು ಪಾಟೀಲ್ ವಿವರಿಸಿದ್ದಾರೆ.
ಬಿಸಿಲಿನಲ್ಲಿ ಹೊರಗೆ ಹೋಗುವಾಗ ಟೋಪಿ, ಸನ್ ಗ್ಲಾಸ್ ಮತ್ತು ಛತ್ರಿ ಬಳಸಬೇಕು. ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಸನ್‌ಸ್ಕ್ರೀನ್ ಬಳಸುವುದೂ ಉತ್ತಮ. ಮಧ್ಯಾಹ್ನದ ಬಿಸಿಲಿನಲ್ಲಿ ಶ್ರಮದಾಯಕ ಕೆಲಸ ಮಾಡಬಾರದು. ಆಹಾರ ಬೇಗ ಹಾಳಾಗುವುದರಿಂದ ತಾಜಾ ಆಹಾರ ಸೇವಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕಳೆದ 30 ವರ್ಷದ ಸರಾಸರಿ ವಾಡಿಕೆ ತಾಪಮಾನವನ್ನು ಪರಿಗಣಿಸಿದರೆ ಈ ಬೇಸಿಗೆಯಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಕಾರವಾರದಲ್ಲಿ ಶನಿವಾರ ದೇಶದಲ್ಲೇ ಅತಿ ಹೆಚ್ಚು ಉಷ್ಣಾಂಶ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
-ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ