ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ : ಕಿವಿ ಮೇಲೆ ಹೂ ಇಟ್ಟ ಸಚಿವ ಶ್ರೀರಾಮುಲು

By Suvarna NewsFirst Published Jan 3, 2020, 3:48 PM IST
Highlights

ಬೆಂಗಳೂರಿನಲ್ಲಿ 30 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ  ಆರೋಗ್ಯ ಸಚಿವ ಶ್ರೀ ರಾಮುಲು ಸ್ಪಷ್ಟ ಹೇಳಿಕೆ ನೀಡಲಿಲ್ಲ. ಸರ್ಕಾರದ ಜೊತೆ ಚರ್ಚಿಸಿ ಪ್ರಯತ್ನಿಸುವುದಾಗಿ ಹೇಳುವ ಮೂಲಕ ಕಿವಿ ಮೇಲೆ ಹೂ ಇಡುವ ಯತ್ನ ಮಾಡಿದ್ದಾರೆ.

ಬೆಂಗಳೂರು [ಜ.03]: ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಬೃಹತ್ ಪ್ರತಿಭಟನೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸಚಿವ ಶ್ರೀ ರಾಮುಲು ಬೇಡಿಕೆ ಈಡೇರಿಸುವ ಭರವಸೆ ನೀಡುವಾಗ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. 

ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀ ರಾಮುಲು ಈಗಾಗಲೇ ಆಶಾ ಕಾರ್ಯಕರ್ತೆಯರ ಸಂಬಳವನ್ನು 500 ರು. ಏರಿಸಲಾಗಿದೆ. 12 ಸಾವಿರಕ್ಕೆ ಏರಿಕೆ ಮಾಡಲು ಸಾಧ್ಯವಿಲ್ಲ. ಆದರೆ ಉಳಿದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದಿದ್ದಾರೆ.

ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಆಶಾ ಕಾರ್ಯಕರ್ತೆಯರ ಕ್ಷೇಮಾಭಿವೃದ್ಧಿ ಸಂಘ ಮಾಡಲು ಕಾನೂನಿನ ತೊಡಕಿದೆ. ಉಳಿದಂತೆ  10 ಬೇಡಿಕೆಗಳಲ್ಲಿ 7 ಬೇಡಿಕೆ ಈಡೇರಿಸಿದ್ದೇವೆ.  ಇನ್ನು ವೇತನವನ್ನು 10 ಸಾವಿರ ರು.ವರೆಗೆ ಏರಿಕೆ ಮಾಡಲು ಸರ್ಕಾರದ  ಬಜೆಟ್ ನಲ್ಲಿ ಸೇರಿಸಬೇಕಾಗಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

 

ಸಹೋದರಿಯರೇ, ನಿಮ್ಮೆಲ್ಲ ಬೇಡಿಕೆಗಳನ್ನು ಚರ್ಚಿಸಿ, ಈಡೇರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ಇಡೀ ರಾಜ್ಯದ ಆಶಾ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಲು ನಮ್ಮ ಸರ್ಕಾರ ಸಿದ್ಧವಿದೆ. ತಾವೆಲ್ಲರೂ ಪ್ರತಿಭಟನೆಯನ್ನು ಹಿಂಪಡೆಯಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ

— B Sriramulu (@sriramulubjp)

ಆಶಾ ಕಾರ್ಯಕರ್ತರ 10 ಬೇಡಿಕೆಗಳಲ್ಲಿ, ಏಳು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇನೆ. ವೇತನವನ್ನು 10ಸಾವಿರ ರೂ ವರೆಗೆ ಏರಿಸಲು ಸರ್ಕಾರದ ಮುಂಗಡ ಪತ್ರದಲ್ಲಿ ಸೇರಿಸಬೇಕಾಗಿದೆ. ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

— B Sriramulu (@sriramulubjp)

ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದ್ದು, ಸಮಸ್ಯೆಗೆ ಸ್ಪಂದಿಸಲಿದೆ. ಈ ನಿಟ್ಟಿನಲ್ಲಿ ಪ್ರತಿಭಟನೆ ಹಿಂಪಡೆಯಬೇಕು ಎಂದು ಸಚಿವ ಶ್ರೀ ರಾಮುಲು ಮನವಿ ಮಾಡಿದ್ದಾರೆ. 

ಬೇಡಿಕೆಗಳೇನು ? 

ರಾಜ್ಯದ ವಿವಿಧ ರಾಜ್ಯಗಳಿಂದ 30 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಬೆಂಗಳೂರಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಇಟ್ಟಿದ್ದಾರೆ.  

ಆಶಾ ಕಾರ್ಯಕರ್ತೆಯರಿಗೆ ದಸರಾ ಗಿಫ್ಟ್ ಕೊಟ್ಟ ಯಡಿಯೂರಪ್ಪ ಸರ್ಕಾರ...

ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯ ಮತ್ತು ಸೇವಾ ಭದ್ರತೆ ನೀಡುವಂತೆ ಪ್ರತಿಭಟನೆಯಲ್ಲಿ ಹಕ್ಕೊತ್ತಾಯ ಮಾಡಿದ್ದಾರೆ.  ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನ ಕನಿಷ್ಠ 12000 ನೀಡುವಂತೆ ಪ್ರತಿಭಟನೆ ಮೂಲಕ ಆಗ್ರಹಿಸಿದ್ದಾರೆ. ಸರ್ಕಾರಿ ನೌಕರರಾಗಿ ಪರಿಗಣಿಸ ಬೇಕು, ಜೀವ ವಿಮೆ, ಆರೋಗ್ಯ ವಿಮೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದ್ದಾರೆ.

ದಸರಾ ವೇಳೆ 500 ರು. ಏರಿಕೆ

ಆಶಾ ಕಾರ್ಯಕರ್ತೆಯರು 6 ಸಾವಿರ ಗೌರವ ಧನ ಪಡೆಯುತ್ತಿದ್ದು, ಕಳೆದ ದಸರಾ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ 500 ರು. ಏರಿಕೆ ಮಾಡಿತ್ತು.  2019ರ ನವೆಂಬರ್ 1 ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಲಾಗಿತ್ತು. 

ಜನವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!