
ಬೆಂಗಳೂರು (ಜು.17): ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ವೈದ್ಯರು ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದು, ಭುವನೇಶ್ವರಿ ತಾಯಿಯೇ ಅವರನ್ನು ಕಾಪಾಡಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ದೇವೇಗೌಡರು ಭಾವುಕರಾಗಿದ್ದರು.
ಬುಧವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೆನ್ನಮ್ಮ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಹೆಚ್.ಡಿ. ದೇವೇಗೌಡರು, 'ಉಸಿರಾಟದ ತೊಂದರೆ ಇರುವುದರಿಂದ ಬುಧವಾರ ಆಸ್ಪತ್ರೆಗೆ ದಾಖಲಿಸಿದ್ದೇವೆ. ಮೊನ್ನೆ, ನಿನ್ನೆ ಮತ್ತು ಇಂದು ನಾನು ಅವರನ್ನು ವಿಚಾರಿಸಿದ್ದೇನೆ. ಅವರಿಗೆ ಉಸಿರಾಟದ ಸಮಸ್ಯೆ ಹೊರತುಪಡಿಸಿ ಹೃದಯ, ಕಿಡ್ನಿ ಸೇರಿದಂತೆ ಉಳಿದೆಲ್ಲಾ ಅಂಗಾಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಶ್ವಾಸಕೋಶದ (Lungs) ಸಮಸ್ಯೆ ಇರುವುದರಿಂದ ಗುಣಮುಖರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ' ಎಂದು ನುಡಿದರು. 'ಅವರು ಶೀಘ್ರವೇ ಚೇತರಿಸಿಕೊಳ್ಳಬಹುದು (She may recover)' ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಲೇ ಗೌಡರು ಭಾವುಕರಾದರು.
ಇದೇ ವೇಳೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು, ತಾಯಿಯ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. 'ಮಣಿಪಾಲ್ ಆಸ್ಪತ್ರೆಯ ವೈದ್ಯರು ಅತ್ಯುತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಅವರು ನಂಬಿದ ದೇವರ ದಯೆಯೂ ಇರಬೇಕು. ಸುಮಾರು 25 ವರ್ಷಗಳ ಹಿಂದೆ ಅವರ ಮೇಲೆ ಆ್ಯಸಿಡ್ ದಾಳಿ (Acid Attack) ನಡೆದಾಗ ಬದುಕುಳಿಯುವ ಸಾಧ್ಯತೆಗಳೇ ಇರಲಿಲ್ಲ. ಅಂದು ಅವರು ನಂಬಿದ ದೇವರೇ ಅವರನ್ನು ಕಾಪಾಡಿದ್ದರು. ಈಗಲೂ ಆ ಭುವನೇಶ್ವರಿ ತಾಯಿಯೇ ಅವರನ್ನು ರಕ್ಷಿಸಬೇಕು' ಎಂದು ಹಳೆಯ ಕರಾಳ ನೆನಪುಗಳನ್ನು ಮೆಲುಕು ಹಾಕಿದರು.
ಧೈರ್ಯ ತುಂಬುತ್ತಿರುವ ಕುಟುಂಬ ಮತ್ತು ಅಭಿಮಾನಿಗಳು:
ಪ್ರತಿದಿನ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಳ್ಳುವ ಚೆನ್ನಮ್ಮ ಅವರು, ತಾಯಿಯ ಆಶೀರ್ವಾದದಿಂದ ಮತ್ತೆ ಸುಕ್ಷೇಮವಾಗಿ ಮನೆಗೆ ಬರುತ್ತಾರೆ ಎಂಬ ನಂಬಿಕೆ ಕುಟುಂಬದ ಸದಸ್ಯರಲ್ಲಿದೆ. ವೈದ್ಯರ ತಂಡವು ಶಕ್ತಿ ಮೀರಿ ಶ್ರಮಿಸುತ್ತಿದ್ದು, ಅಭಿಮಾನಿಗಳು ಮತ್ತು ಹಿತೈಷಿಗಳು ಚೆನ್ನಮ್ಮ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆ ನಿಧಾನವಾಗಿ ಹತೋಟಿಗೆ ಬರಲಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ