ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕಠಿಣ ಕ್ರಮ: ಹೈಕೋರ್ಟ್ ಎಚ್ಚರಿಕೆ, ಏನಿದು ಪ್ರಕರಣ?

Kannadaprabha News   | Kannada Prabha
Published : Dec 17, 2025, 06:50 AM IST
HC Warns Action Against Officials for Not Providing Info to Govt Lawyers

ಸಾರಾಂಶ

HC Warns Action Against Officials for Not Providing Info to Govt Lawyers: ಪ್ರಕರಣಗಳಲ್ಲಿ ಸರ್ಕಾರಿ ವಕೀಲರು ಕೇಳಿದ ಮಾಹಿತಿ ನೀಡಲು ವಿಳಂಬ ಮಾಡುವ ಅಥವಾ ನೀಡದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಹೈಕೋರ್ಟ್‌ ನೀಡಿದೆ. ಏನಿದು ಪ್ರಕರಣ? ತಿಳಿಯಿರಿ

ಬೆಂಗಳೂರು (ಡಿ.17): ಯಾವುದೇ ಪ್ರಕರಣದಲ್ಲಿ ಸರ್ಕಾರಿ ವಕೀಲರು ಕೋರಿದ ಮಾಹಿತಿ ನೀಡದ ಅಥವಾ ಮಾಹಿತಿ ನೀಡಲು ವಿಳಂಬಿಸುವ ಸರ್ಕಾರದ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ ಸೇವೆಯಿಂದ ವಜಾಗೊಳಿಸಲು ಆದೇಶಿಸಲಾಗುವುದು ಎಂದು ಹೈಕೋರ್ಟ್‌ ಕಠಿಣ ಎಚ್ಚರಿಕೆ ನೀಡಿದೆ.

ಚಿತ್ರದುರ್ಗದ ಹಿರಿಯ ನಾಗರಿಕರಾದ ವಿಶ್ವನಾಥನ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರ ಪೀಠ ಈ ಎಚ್ಚರಿಕೆ ನೀಡಿದೆ.

ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ವಿಶ್ವನಾಥನ್‌, ತಮ್ಮ ಸೇವಾವಧಿಯಲ್ಲಿ ಗಳಿಸಿದ್ದ ಹಣದಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿದ್ದಾರೆ. ಆ ಮನೆ ಸದ್ಯ ಅವರ ಮಗ ಮತ್ತು ಮಗಳ ಸುಪರ್ದಿಯಲ್ಲಿದೆ. ಅವರು ತಮ್ಮ ತಂದೆಯನ್ನು ಪಾಲನೆ ಮಾಡುತ್ತಿಲ್ಲ. ಇದರಿಂದ ಕೂಡಲೇ ಮನೆಯನ್ನು ತಂದೆಗೆ ಬಿಟ್ಟುಕೊಡಬೇಕು ಎಂದು ವಿಶ್ವನಾಥ್‌ ಅವರ ಮಗಳು ಮತ್ತು ಮಗನಿಗೆ ನಿರ್ದೇಶಿಸಿ 2023ರ ಫೆ.22ರಂದು ಚಿತ್ರುದುರ್ಗದ ಉಪ ವಿಭಾಗಾಧಿಕಾರಿ ಆದೇಶಿಸಿದ್ದರು. ಈ ಆದೇಶ ಜಾರಿಯಾಗಿಲ್ಲ ಎಂದೇಳಿ ವಿಶ್ವನಾಥನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪ್ರಕರಣದ ಕುರಿತು ಮಾಹಿತಿ ಪಡೆದು ತಿಳಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿತ್ತು. ಡಿ.8ರಂದು ಸರ್ಕಾರಿ ವಕೀಲರು, ಹಲವು ಬಾರಿ ಮನವಿ ಮಾಡಿದ್ದರೂ ಚಿತ್ರದುರ್ಗದ ತಹಸೀಲ್ದಾರ್ ಮಾಹಿತಿ ನೀಡುತ್ತಿಲ್ಲ ಎಂದು ಸರ್ಕಾರಿ ವಕೀಲರು ಹೈಕೋರ್ಟ್‌ಗೆ ಸೂಚಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್‌, ಚಿತ್ರದುರ್ಗದ ತಹಸೀಲ್ದಾರ್‌ಗೆ 50 ಸಾವಿರ ರು. ದಂಡ ಸಹಿತ ವಾರೆಂಟ್‌ ಜಾರಿಗೊಳಿಸಿತ್ತು. ಡಿ.16ರಂದು ವಿಚಾರಣೆಗೆ ಖುದ್ದು ಹಾಜರಿರುವಂತೆ ನಿರ್ದೇಶಿಸಿತ್ತು. ಅದರಂತೆ ಮಂಗಳವಾರ ತಹಸೀಲ್ದಾರ್‌ ವಿಚಾರಣೆಗೆ ಹಾಜರಿದ್ದರು.

ಆಗ ನ್ಯಾಯಮೂರ್ತಿಗಳು, ಏನ್ರಿ ತಹಸೀಲ್ದಾರ್‌... ಏಕೆ ನೀವು ಸರ್ಕಾರಿ ವಕೀಲರಿಗೆ ಮಾಹಿತಿ ನೀಡುತ್ತಿಲ್ಲ? ಎಂದು ಪ್ರಶ್ನಿಸಿದರು. ತಹಸೀಲ್ದಾರ್‌ ಉತ್ತರಿಸಿ, ಸ್ವಾಮಿ.. ಮಾಹಿತಿ ನೀಡಲಾಗಿದೆ ಎಂದರು.

ಅದಕ್ಕೆ ನ್ಯಾಯಮೂರ್ತಿಗಳು, ಏಕೆ ಸುಳ್ಳು ಹೇಳುತ್ತೀರಿ? ಸರ್ಕಾರಿ ವಕೀಲರು ಪದೇ ಪದೇ ತಿಳಿಸಿದ್ದರೂ ನೀವು ಮಾಹಿತಿ ನೀಡಿಲ್ಲ. ಅವರು ಯಾವಾಗ ಮಾಹಿತಿ ಕೇಳಿದರು? ನೀವು ಯಾವಾಗ ನೀಡಿದ್ದೀರಿ? ಎಂಬ ಬಗ್ಗೆ ದಿನಾಂಕ, ಸಮಯ ಸಹಿತ ದಾಖಲೆ ಸಿಗುತ್ತವೆ. ಆ ಬಗ್ಗೆ ವಿಚಾರಣೆ ನಡೆಸಲು ಆದೇಶಿಸಬೇಕೆ? ವಿಚಾರಣೆಯಲ್ಲಿ ವಿಳಂಬವಾಗಿ ಮಾಹಿತಿ ನೀಡಿರುವುದು ದೃಢಪಟ್ಟರೆ, ನಿಮ್ಮನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಲಾಗುವುದು ಎಂದು ಮಾರ್ಮಿಕವಾಗಿ ಹೇಳಿದರು.

ಆಗ ಸರ್ಕಾರಿ ವಕೀಲರು, ಸದ್ಯ ಉಪ ವಿಭಾಗಾಧಿಕಾರಿಯ ಆದೇಶದಂತೆ ಕಳೆದ ಭಾನುವಾರ ಮನೆಯನ್ನು ಅರ್ಜಿದಾರರ ಸ್ವಾಧೀನಾನುಭವಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿ ಮೆಮೊ ಸಲ್ಲಿಸಿದರು.

ಅದಕ್ಕೆ ನ್ಯಾಯಮೂರ್ತಿಗಳು, ಯಾವುದೇ ಪ್ರಕರಣದಲ್ಲಿ ಸರ್ಕಾರಿ ವಕೀಲರು ಮಾಹಿತಿ ಕೋರಿದರೆ, ತಡ ಮಾಡದೆ ಸರ್ಕಾರಿ ಅಧಿಕಾರಿಗಳು ಒದಗಿಸಬೇಕು. ಒಂದೊಮ್ಮೆ ತಡ ಮಾಡಿದರೆ ಅಥವಾ ಮಾಹಿತಿ ನೀಡದೆ ಹೋದರೆ, ಆ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಸರ್ಕಾರಿ ವಕೀಲರ ಮೊಮೊ ದಾಖಲಿಸಿಕೊಂಡು, ಉಪ ವಿಭಾಗಾಧಿಕಾರಿಯ ಆದೇಶ ಪಾಲನೆ ಆಗಿರುವುದರಿಂದ ಪ್ರಕರಣದ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

HD Kumaraswamy Birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ