ಹಾಸನಾಂಬೆ ದೇಗುಲದ ಪವಾಡ : ಅರ್ಚಕರು ಬಿಚ್ಚಿಟ್ಟ ಆ ರಹಸ್ಯವೇನು..?

By Web DeskFirst Published Oct 16, 2018, 9:56 AM IST
Highlights

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನ ನಗರದ ಅಧಿದೇವತೆ ಶ್ರೀ ಹಾಸನಾಂಬೆಯ ಪವಾಡ ಬಯಲು ವಿಚಾರ ಬಗ್ಗೆ ಪರ- ವಿರೋಧ ಚರ್ಚೆಗಳು ಇದೀಗ ತಾರಕಕ್ಕೇರಿದೆ. ಇದರ ನಡುವೆಯೇ ಇಲ್ಲಿನ ಪ್ರಧಾನ ಅರ್ಚಕರು ರಹಸ್ಯ ಬಿಚ್ಚಿಟ್ಟಿದ್ದಾರೆ.

ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನ ನಗರದ ಅಧಿದೇವತೆ ಶ್ರೀ ಹಾಸನಾಂಬೆಯ ಪವಾಡ ಬಯಲು ವಿಚಾರ ಬಗ್ಗೆ ಪರ- ವಿರೋಧ ಚರ್ಚೆಗಳು ಇದೀಗ ತಾರಕಕ್ಕೇರಿದೆ. ಪವಾಡ ಬಯಲು ಮಾಡಬೇಕೆಂದು ಪ್ರಗತಿಪರ ಸಂಘಟನೆಗಳು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿದ್ದರೆ, ಹಿಂದೂ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು ಹೋರಾಟದ ಎಚ್ಚರಿಕೆ ನೀಡಿವೆ.

ವರ್ಷಕ್ಕೊಮ್ಮೆ ದೇವಿ ಗರ್ಭಗುಡಿಯ ಬಾಗಿಲು ತೆರೆದಾಗ ಕಳೆದ ವರ್ಷ ಬಾಗಿಲು ಮುಚ್ಚುವಾದ ಹಚ್ಚಿದ್ದ ದೀಪ ಉರಿಯುತ್ತಲೇ ಇರುತ್ತದೆ. ದೇವಿಗೆ ಹಾಕಿದ್ದ ಹೂವುಗಳು ಬಾಡಿರುವುದಿಲ್ಲ ಮತ್ತು ಅನ್ನದ ನೈವೇದ್ಯ ಹಳಸಿರುವುದಿಲ್ಲ. ಇದು ದೇವಿಯ ಪವಾಡ ಎಂದೇ ಜನಜನಿತವಾಗಿದ್ದು, ಈಗ ಈ ಬಗ್ಗೆ ಪ್ರಗತಿಪರ ಸಂಘಟನೆಗಳು ಪ್ರಶ್ನೆಯೆತ್ತಿವೆ. ತೀರ ಅವೈಜ್ಞಾನಿಕವಾದ ಮೂಢನಂಬಿಕೆಯನ್ನು ಪ್ರೋತ್ಸಾಹಿಸುವ ಪವಾಡಗಳಿಗೆ ಒತ್ತು ನೀಡುವ ಮೂಲಕ ಜನತೆಗೆ ದ್ರೋಹ ಬಗೆಯಲಾಗುತ್ತಿದೆ. 

ಹೀಗಾಗಿ ದೇವಾಲಯದ ಪವಾಡವನ್ನು ಜಿಲ್ಲಾಡಳಿತ ಬಹಿರಂಗ ಪಡಿಸಬೇಕು ಎಂದು ಸಿಐಟಿಯು, ಸಿಪಿಎಂ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿ ಸೇರಿದಂತೆ ಆನೇಕ ಪ್ರಗತಿ ಪರ ಸಂಘಟನೆಗಳ ಮುಖಂಡರು ಒತ್ತಡ ಹೇರುತ್ತಿದ್ದಾರೆ. ಇದೇವೇಳೆ ಹಿಂದೂಪರ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಪವಾಡ ಬಯಲಿಗೆ ಆಗ್ರಹಿಸುತ್ತಿರುವುದು ಭಕ್ತರ ಧಾರ್ಮಿಕತೆಗೆ ಧಕ್ಕೆ ತರುವ ವಿಚಾರವಾಗಿದೆ. ಇದನ್ನು  ನಿಲ್ಲಿಸದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹಾಸನಾಂಬೆ ದೇಗುಲದಲ್ಲಿ ಪವಾಡ ನಡೆಯಲ್ಲ :  ಏತನ್ಮಧ್ಯೆ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಹೇಳಿಕೆ ನೀಡಿ, ದೇವಾಲಯದಲ್ಲಿ ಯಾವುದೇ ಪವಾಡ ನಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ಹಣತೆ ಹಚ್ಚಿಡಲಾಗುತ್ತದೆ. ಇಟ್ಟ ನೈವೇದ್ಯ ಹಳಸಲ್ಲ , ಹೂ ಬಾಡಲ್ಲ ಅನ್ನೋದು ಸುಳ್ಳು. ಅಲ್ಲಿ ಬಾಗಿಲು ಮುಚ್ಚುವಾಗ ಹೂ ಅಥವಾ ಯಾವುದೇ ನೈವೇದ್ಯ ಇಡುವುದಿಲ್ಲ.

ಬಾಗಿಲು ತೆರೆಯುವ ಮುಂಚೆ ಹೊಸದಾಗಿ ಬತ್ತಿ ಹಚ್ಚಲಾಗುತ್ತದೆ. ಅನ್ನ ಇಟ್ಟು, ಹೂ ಹಾಕಲಾಗುತ್ತದೆ. ಎಲ್ಲವೂ ಅವರವರ ಭಾವಕ್ಕೆ, ಭಕುತಿಗೆ ಮತ್ತು ನಂಬಿಕೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಈ ಎಲ್ಲಾ ವಿವಾದಗಳ ಮಧ್ಯೆ ಮಹೋತ್ಸವ ಆರಂಭವಾಗಲು ಕೇವಲ 15 ದಿನಗಳು ಮಾತ್ರ  ಇದ್ದು ಮಹೋತ್ಸವದ ಸಿದ್ಧತೆಗಳಿಗೆ ಹಿನ್ನೆಡೆಯಾಗುತ್ತದೆ. 

click me!