ವಿವಿಐಪಿ ಪಾಸ್‌ ಇದ್ದಿದ್ದರೆ ಹಾಸನಾಂಬೆ ಸುಗಮ ದರ್ಶನ ಆಗುತ್ತಿರಲಿಲ್ಲ: ಸಚಿವ ಕೃಷ್ಣ ಬೈರೇಗೌಡ

Published : Oct 11, 2025, 10:29 PM IST
Krishna Byre Gowda

ಸಾರಾಂಶ

ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಿರುವುದರಿಂದ ಜನರಿಗೆ ಅನುಕೂಲ ಆಗಿದೆ. ಧರ್ಮದರ್ಶನದ ಸಾಲಿನಲ್ಲಿ ನಿಂತಿರುವ ಸಾಮಾನ್ಯ ಜನರಿಗೂ ಕೂಡ ಈ ಬಾರಿ ಮೂರ್ನಾಲ್ಕು ಗಂಟೆಗಳಲ್ಲಿ ದರ್ಶನ ಆಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಹಾಸನ (ಅ.11): ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಿರುವುದರಿಂದ ಜನರಿಗೆ ಅನುಕೂಲ ಆಗಿದೆ. ಧರ್ಮದರ್ಶನದ ಸಾಲಿನಲ್ಲಿ ನಿಂತಿರುವ ಸಾಮಾನ್ಯ ಜನರಿಗೂ ಕೂಡ ಈ ಬಾರಿ ಮೂರ್ನಾಲ್ಕು ಗಂಟೆಗಳಲ್ಲಿ ದರ್ಶನ ಆಗುತ್ತಿದೆ. ಜನಪ್ರತಿನಿಧಿಗಳಿಗೆ ಇದಕ್ಕಿಂತ ಇನ್ನೇನು ಬೇಕು ಎಂದು ಈ ಬಾರಿಯ ಹಾಸನಾಂಬ ದರ್ಶನೋತ್ಸವದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಗ್ಗೆಯೇ ಹಾಸನಾಂಬೆ ದೇವಸ್ಥಾನದ ಬಳಿಗೆ ತಮ್ಮ ವಾಹನವನ್ನು ಬಿಟ್ಟು ಜಿಲ್ಲಾಡಳಿತದ ಶಿಷ್ಟಾಚಾರದ ವಾಹನದಲ್ಲೇ ಬಂದು ವ್ಯವಸ್ಥೆಗಳನ್ನು ಪರಿಶೀಲಿಸಿದ ಅವರು, ಸರತಿಯ ಸಾಲಿನಲ್ಲಿ ನಿಂತಿದ್ದ ಭಕ್ತರನ್ನು ಮಾತನಾಡಿಸಿ ವ್ಯವಸ್ಥೆಗಳ ಬಗ್ಗೆ ಕೇಳಿ ತಿಳಿದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದೂರದ ರಾಯಚೂರು, ಕೊಪ್ಪಳದಿಂದ ಬಂದಿರುವ ಭಕ್ತರನ್ನ ಮಾತನಾಡಿಸಿದೆ. ಕೆಲವರಿಗೆ ಒಂದು, ಒಂದೂವರೆ ಗಂಟೆಯಲ್ಲಿ ದರ್ಶನ ಆಗಿದೆ ಎಂದು ಹೇಳಿದ್ದಾರೆ. ನಾವು ಜನಪ್ರತಿನಿಧಿಗಳಿಗೆ ಇದಕ್ಕಿಂತ ಖುಷಿ ಇನ್ನೇನಿದೆ. ಯಾರೋ ಕೆಲವರ ಅನುಕೂಲಕ್ಕೆ ಹೆಚ್ಚಿನ ಜನರಿಗೆ ಅನಾನುಕೂಲ ಆಗಬಾರದು. ಬೆಳಿಗ್ಗೆಯಿಂದ ಈಗಾಗಲೇ ಐವತ್ತು ಸಾವಿರ ಜನರು ದರ್ಶನ ಮಾಡಿದ್ದಾರೆ. ಅದೇ ವಿವಿಐಪಿ ಪಾಸ್ ವ್ಯವಸ್ಥೆ ಇದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ಧು ಮಾಡಿರುವುದರಿಂದ ಯಾರೋ ಹತ್ತು ಪರ್ಸೆಂಟ್ ಜನರಿಗೆ ಬೇಸರ ಆಗಿರಬಹುದು. ಆದರೆ ಶೇಕಡಾ 90 ಪರ್ಸೆಂಟ್ ಜನರು ಖುಷಿಯಾಗಿದ್ದಾರೆ. ನಾಳೆಯಿಂದಲೂ ಹೀಗೆ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಇನ್ನೂ ಎರಡು ಮೂರು ದಿನ ನೋಡಬೇಕು. ಇವತ್ತು ಯಾರಿಗೂ ಸಮಸ್ಯೆ ಆಗದಂತೆ ದರ್ಶನ ಆಗಿದೆ. ಈಗ ಆಗಿರುವ ವ್ಯವಸ್ಥೆ ಬಗ್ಗೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಬೇರೆ ಬೇರೆ ಕಡೆ ಆಗಿರುವ ಘಟನೆ ನೆನಪಿಸಿಕೊಳ್ಳಿ. ಲಕ್ಷಾಂತರ ಜನರು ಸೇರುವ ಕಡೆ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಶಿಷ್ಟಾಚಾರದಲ್ಲೇ ಬಂದ ಜನಪ್ರತಿನಿಧಿಗಳು

ಸುಗಮ ದರ್ಶನಕ್ಕಾಗಿ ಈ ಬಾರಿ ಜಿಲ್ಲಾಡಳಿತ ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದು, ಆ ಪೈಕಿ ದರ್ಶನಕ್ಕೆ ಬರುವ ಗಣ್ಯರ ವಾಹನ ಮತ್ತು ಬೆಂಗಾವಲು ವಾಹನಗಳನ್ನು ದೇವಸ್ಥಾನದ ಮುಂಭಾಗಕ್ಕೆ ಬರಲು ಬಿಡದೆ, ಅವರ ವಾಹನವನ್ನು ಐಬಿ ಬಳಿಯೇ ನಿಲ್ಲಿಸಿ ಅಲ್ಲಿಂದ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಶಿಷ್ಟಾಚಾರ (ಪ್ರೋಟೋಕಾಲ್‌) ವಾಹನದಲ್ಲಿ ದೇವಸ್ಥಾನಕ್ಕೆ ಕರೆತಂದು ದರ್ಶನ ಮಾಡಿಸಿ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಈ ವ್ಯವಸ್ಥೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ಶುಕ್ರವಾರ ಅರಕಲಗೂಡು ಶಾಸಕ ಎ.ಮಂಜು, ವಿಧಾನಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಕೂಡ ಇದೇ ಶಿಷ್ಟಾಚಾರದಲ್ಲೇ ಬಂದು ದರ್ಶನ ಪಡೆದರು. ಈ ವ್ಯವಸ್ಥೆ ಬಗ್ಗೆ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್