ಅಧಿಕಾರಕ್ಕಾಗಿ ನಾವು ಪಕ್ಷ ಬಿಟ್ಟಿಲ್ಲ: ವಿಶ್ವನಾಥ್| ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಕೊನೆಗೊಳಿಸಲು ರಾಜೀನಾಮೆ ನೀಡಿದ್ದೇವೆ| ನಮ್ಮದು ಪಕ್ಷಾಂತರ ಅಲ್ಲ, ರಾಜಕೀಯ ಧ್ರುವೀಕರಣದ ಭಾಗ
ಬೆಂಗಳೂರು[ನ.15]: ನಾವು ಅಧಿಕಾರಕ್ಕಾಗಿ ಶಾಸಕ ಸ್ಥಾನ ತ್ಯಾಗ ಮಾಡಿಲ್ಲ. ರಾಜ್ಯದಲ್ಲಿನ ರಾಕ್ಷಸ ರಾಜಕಾರಣವನ್ನು ಕೊನೆಗಾಣಿಸಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕಾಯಿತು ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಪ್ರತಿಪಾದಿಸಿದ್ದಾರೆ.
ನಮ್ಮ ಬಗ್ಗೆ ಸಾಕಷ್ಟುಅಪಪ್ರಚಾರ ನಡೆಯುತ್ತಿದೆ. ನಾವು ಮಾಡಿದ್ದು ಪಕ್ಷಾಂತರ ಅಲ್ಲ. ರಾಜಕೀಯ ಧ್ರುವೀಕರಣದ ಒಂದು ಭಾಗ ಎಂದೂ ಅವರು ವ್ಯಾಖ್ಯಾನ ಮಾಡಿದ್ದಾರೆ.
undefined
ಸೋತು ಬೀಗಿದ ಅನರ್ಹರು: ಚುನಾವಣೇಲಿ ಗೆದ್ದರೆ ಸಚಿವ ಪದವಿ ಖಚಿತ!
ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ನಾವು 17 ಮಂದಿ ಪಕ್ಷಾಂತರ ಮಾಡಿದ್ದೇವೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಇದು ಪಕ್ಷಾಂತರವಲ್ಲ, ಇದೊಂದು ರಾಜಕೀಯ ಧ್ರುವೀಕರಣ. ಪಕ್ಷ ರಾಜಕಾರಣ ವಿಫಲವಾಗಿ ದೇಶದಲ್ಲಿಯೇ ಧ್ರುವೀಕರಣವಾಗುತ್ತಿದೆ. ರಾಜ್ಯದಲ್ಲಿಯೂ ಇದು ನಡೆದಿದೆ. ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಕೊನೆಗಾಣಿಸಬೇಕು ಎಂಬ ಉದ್ದೇಶದಿಂದ ರಾಜೀನಾಮೆ ನೀಡಲಾಯಿತೇ ಹೊರತು ಅಧಿಕಾರದ ಆಸೆಗಾಗಿ ಅಲ್ಲ ಎಂದರು.
ಆಡಳಿತಾರೂಢ ಪಕ್ಷಗಳ ಹದಿನೇಳು ಮಂದಿ ಶಾಸಕರು ಸರ್ಕಾರದ ವಿರುದ್ಧ ತಿರುಗಿ ಬಿದ್ದು ರಾಜೀನಾಮೆ ಕೊಡುತ್ತಾರೆ ಎನ್ನುವುದು ಸಣ್ಣ ಮಾತಲ್ಲ. ಕೆಟ್ಟಸರ್ಕಾರ ಹೋಗಬೇಕು ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡುವ ತೀರ್ಮಾನ ಕೈಗೊಳ್ಳಬೇಕಾಯಿತು. ಅತ್ಯಂತ ಸಂತೋಷದಿಂದಲೇ ಬಿಜೆಪಿ ಸೇರಿದ್ದೇವೆ. ಹಲವು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇವೆ. ಯಾವ ಸಂದರ್ಭದಲ್ಲಿ ಏನಾಗುತ್ತದೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ‘ಎಲೆ ಮನುಷ್ಯನೇ ಯಾವ ಕಾಲಕ್ಕೆ ನಿನಗೆ ಯೋಗ ಫಲಾಫಲ ಬರುತ್ತದೆಯೋ ಸೃಷ್ಟಿಕರ್ತನಾದ ನನಗೆ ಅರ್ಥವಾಗುತ್ತಿಲ್ಲ. ಬಂದ ಫಲಾನುಫಲಗಳನ್ನು ಅನುಭವಿಸು’ ಎಂಬ ಸೃಷ್ಟಿಕರ್ತನ ಮಾತಿನಂತೆ ನಾವು ಅದನ್ನೇ ಮಾಡಿದ್ದೇವೆ ಎಂದು ಹೇಳಿದರು.
17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೊಂಚ ರಿಲೀಫ್
17 ಮಂದಿಗೆ ಶಿಕ್ಷೆ ಕೊಡಲೇಬೇಕು ಎಂದು ಹಿಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಕೆಟ್ಟನಿರ್ಧಾರ ತೆಗೆದುಕೊಂಡರು. ರಾಜ್ಯ ರಾಜಕಾರಣದಿಂದಲೇ ನಮ್ಮನ್ನು ಹೊರಗಿಡುವ ಬಗ್ಗೆ ಕಾಂಗ್ರೆಸ್-ಜೆಡಿಎಸ್‌ನವರು ನಿರ್ಧರಿಸಿದರು. ಯಾವ ಅಧಿಕಾರ ಸಿಗಬಾರದು ಹಾಗೂ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಹುನ್ನಾರ ನಡೆಸಿದರು. ಆದರೆ, ಸುಪ್ರೀಂಕೋರ್ಟ್ ಅದಕ್ಕೆಲ್ಲಾ ತಡೆ ನೀಡಿದೆ. ನ್ಯಾಯಾಲಯದ ತೀರ್ಪು ಸಂತಸ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಹೊಸ ಕನಸುಗಳ ಅನ್ವೇಷಣೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ಕೈ ಜೋಡಿಸಲು, ಅವರೊಟ್ಟಿಗೆ ಹೆಜ್ಜೆ ಹಾಕಲು ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ. ರಾಜ್ಯದ ಅಭಿವೃದ್ಧಿಗಾಗಿ ದುಡಿಯುವುದರಲ್ಲಿ ನಮ್ಮದು ಒಂದು ಭಾಗವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಕೈಜೋಡಿಸಿದ್ದೇವೆ ಎಂದು ವಿಶ್ವನಾಥ್ ಎಲ್ಲ ಅನರ್ಹ ಶಾಸಕರ ಪರವಾಗಿ ಘೋಷಿಸಿದರು.