
ಮೈಸೂರು (ಆ.21): ರಾಜ್ಯ ಸರ್ಕಾರದ ಐದು ಮಹಾತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಆ.30ರಂದು ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಚಾಲನೆ ನೀಡಲಾಗುತಿದ್ದು, ರಾಜ್ಯದ 1.10 ಕೋಟಿ ಕುಟುಂಬಗಳ ಯಜಮಾನಿಯರ ಖಾತೆಗಳಿಗೆ ತಲಾ .2 ಸಾವಿರ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಪುಟದ ಸದಸ್ಯರು ಭಾಗವಹಿಸುತ್ತಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದರು. ಅಂದು ಸುಮಾರು 1.5 ಲಕ್ಷ ಮಹಿಳೆಯರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾಗಿಯಾಗುವುದರೊಂದಿಗೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಅಲ್ಲದೆ, ಗೃಹಲಕ್ಷ್ಮಿ ಯೋಜನೆಗೆ ಶೇ.80 ರಷ್ಟುನೋಂದಣಿ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ನೋಂದಣಿ ಪ್ರಕ್ರಿಯೆಯು ನಿರಂತರವಾಗಿರುತ್ತದೆ ಎಂದು ಅವರು ಹೇಳಿದರು.
ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್: ಡಿಕೆಶಿ
ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರು. ನೀಡಲಾಗುವ ‘ಗೃಹಲಕ್ಷ್ಮೇ‘ ಯೋಜನೆಯ ಫಲಾನುಭವಿಗಳಿಗೆ ಕ್ಯುಆರ್ ಕೋಡ್ ಇರುವ ಸ್ಮಾರ್ಚ್‌ಕಾರ್ಡ್ ವಿತರಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ, ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಗುಲಾಬಿ ವರ್ಣದ ಕಾರ್ಡ್ ಪ್ರದರ್ಶಿಸಿ ಮಾತನಾಡಿದ ಅವರು, ಈ ಸ್ಮಾರ್ಟ್ ಕಾರ್ಡ್ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ಭಾವಚಿತ್ರ ಇರಲಿದೆ. ಜೊತೆಗೆ .2000 ಎಂದು ಬರೆದಿರಲಿದೆ. ಹಿಂಭಾಗದಲ್ಲಿ ಫಲಾನುಭವಿ ಮಹಿಳೆಯ ಭಾವಚಿತ್ರ ಹಾಗೂ ಕ್ಯುಆರ್ ಕೋಡ್ ಇರಲಿದೆ. ಇದನ್ನು ಸ್ಕ್ಯಾನ್ ಮಾಡಿದರೆ ಫಲಾನುಭವಿಯ ಸಂಪೂರ್ಣ ವಿವರ , ಯಾವಾಗ ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿಯೂ ಲಭ್ಯವಾಗಲಿದೆ ಎಂದು ವಿವರಿಸಿದರು.
ಸ್ವೈಪ್ ಮಾಡಿ ಬಸ್ ಹತ್ತುವ ‘ಶಕ್ತಿ ಕಾರ್ಡ್’
‘ಶಕ್ತಿ’ ಯೋಜನೆಯಡಿಯೂ ಗೃಹಲಕ್ಷ್ಮಿಯ ಸ್ಮಾರ್ಟ್ ಕಾರ್ಡ್ ಮಾಡಲಾಗುತ್ತಿದೆ. ಇದನ್ನು ಸ್ವೈಪ್ ಮಾಡಿ ಹತ್ತಬೇಕಾಗುತ್ತದೆ. ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಲು ಈ ವ್ಯವಸ್ಥೆ ಅನುಕೂಲವಾಗಲಿದೆ. ಜೊತೆಗೆ ಸುಳ್ಳು ಮಾಹಿತಿ ರವಾನೆ ಆಗುವುದಕ್ಕೆ ತಡೆ ಬೀಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ