ಅಬ್ಬಬ್ಬಾ, ಕಾಂಗ್ರೆಸ್‌ಗೆ ಮತ ಹಾಕಿದ್ರೆ ನಿವೇಶನ ಕೊಡಿಸ್ತಾನಂತೆ ಪಿಡಿಒ! ರಾಜಕೀಯ ಪಕ್ಷದ ಪರವಾಗಿ ಸರ್ಕಾರಿ ಅಧಿಕಾರಿಯೇ ಆಮಿಷ!

By Ravi JanekalFirst Published Jan 26, 2024, 9:46 PM IST
Highlights

: ಗ್ರಾಮ ಪಂಚಾಯಿತಿಗಳೆಂದರೆ ಯಾವುದೇ ಪಕ್ಷ ಭೇದವಿಲ್ಲದೆ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸ್ಥಳೀಯ ಸರ್ಕಾರ ಅಲ್ಲವೆ? ಅದರಲ್ಲೂ ಸರ್ಕಾರಿ ಅಧಿಕಾರಿ ಅಂದರೆ ರಾಜಕೀಯ ರಹಿತವಾಗಿ ಜನರ ಸೇವೆ ಮಾಡಬೇಕಾದವರು. ಆದರೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. 

ಕೊಡಗು (ಜ.26) : ಗ್ರಾಮ ಪಂಚಾಯಿತಿಗಳೆಂದರೆ ಯಾವುದೇ ಪಕ್ಷ ಭೇದವಿಲ್ಲದೆ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸ್ಥಳೀಯ ಸರ್ಕಾರ ಅಲ್ಲವೆ? ಅದರಲ್ಲೂ ಸರ್ಕಾರಿ ಅಧಿಕಾರಿ ಅಂದರೆ ರಾಜಕೀಯ ರಹಿತವಾಗಿ ಜನರ ಸೇವೆ ಮಾಡಬೇಕಾದವರು. ಆದರೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. 

ಹೌದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ತಿಮ್ಮಯ್ಯ (PDO Timmaiah)ಎಂಬುವವರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇದೇ 29 ರಂದು ನಡೆಯುತ್ತಿದೆ. ಒಟ್ಟು 21 ಸ್ಥಾನಬಲ ಇರುವ ಪಂಚಾಯಿತಿಯಲ್ಲಿ 12 ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ, ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿದ್ದಾರೆ. ಆದರೆ ಸ್ವತಃ ಪಿಡಿಓ ಆರ್ಥಿಕವಾಗಿ ಹಿಂದುಳಿದಿರುವ ಸದಸ್ಯರನ್ನು ಕರೆದು ಅವರಿಗೆ ವಿವಿಧ ಆಮಿಷಗಳನ್ನು ಒಡ್ಡಿ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರ ಪರವಾಗಿ ಮತ ಚಲಾಯಿಸುವಂತೆ ಆಮಿಷವೊಡ್ಡಿದ್ದಾರೆ. 

ಪೂರ್ವಾಪರ ವಿಚಾರಿಸಿ ಯೋಗ್ಯರನ್ನೇ ಪಕ್ಷಕ್ಕೆ ಕರೆತನ್ನಿ ; ಶೆಟ್ಟರ್ ಹೆಸರೆತ್ತದೆ ಮಲ್ಲಿಕಾರ್ಜುನ ಖರ್ಗೆ ಕಿಡಿ

ಕಾಂಗ್ರೆಸ್‌ಗೆ ಮತ ಹಾಕಿದ್ರೆ ನಿವೇಶನ!

ಪಂಚಾಯಿತಿ ಸದಸ್ಯರಾದ ಗೀತ ಅವರಿಗೆ ತಮಗೆ ನಿವೇಶನ, ಮನೆ ಹಾಗೂ ಪಟ್ಟಣ ಪಂಚಾಯಿತಿ ಆದಲ್ಲಿ ನಿಮಗೆ ಸ್ಥಾನ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಅವರೊಂದಿಗೆ ಮಾತನಾಡಿರುವುದಾಗಿ ಆಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಪಿಡಿಓ ತಿಮ್ಮಯ್ಯ ಅವರ ಈ ವರ್ತನೆಗೆ ಬಿಜೆಪಿ ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಅವರಿಗೆ ದೂರು ನೀಡಿದ್ದಾರೆ. 

ಪಿಡಿಒ ಸರ್ಕಾರಿ ಅಧಿಕಾರಿಯಾಗಿ ಒಂದು ಪಕ್ಷದ ಪರವಾಗಿ, ಪಕ್ಷದ ವಕ್ತಾರನಂತೆ ಕೆಲಸ ಮಾಡುವುದು ಎಷ್ಟು ಸರಿ. ಜೊತೆಗೆ ಪಂಚಾಯಿತಿಯಲ್ಲಿ ಅವರ ಇಷ್ಟದಂತೆ ವರ್ತಿಸುತ್ತಿದ್ದಾರೆ. ಪಂಚಾಯಿತಿ ಸದಸ್ಯರಿಗೆ ಸ್ವಲ್ಪವೂ ಗೌರವ ಕೊಡುವುದಿಲ್ಲ ಎಂದು ಸದಸ್ಯರಾದ ಗೀತಾ ಮತ್ತು ಭೋಜಮ್ಮ ಗಂಭೀರ ಆರೋಪ ಮಾಡಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆಗೆ ಮೀಸಲಾಗಿದ್ದು ಹೆಚ್ಚಿನ ಬಲ ಹೊಂದಿರುವ ಬಿಜೆಪಿ ಬೆಂಬಲಿತರು ಆಡಳಿತದ ಚುಕ್ಕಾಣಿ ಹಿಡಿಯಲು ಅವಕಾಶವಿದೆ. 9 ಸದಸ್ಯರ ಬಲ ಇರುವ ಕಾಂಗ್ರೆಸ್ ಪರವಾಗಿ ಬಿಜೆಪಿಯ ಮೂವರು ಮತ ಚಲಾಯಿಸುವಂತೆ ಕಾಂಗ್ರೆಸ್ ಬೆಂಬಲಿತರ ಪರವಾಗಿ ಮತ ಹಾಕುವಂತೆ ಆಮಿಷವೊಡ್ಡುತ್ತಿದ್ದಾರೆ. 

ಜಮೀನಿಗಾಗಿ ಎರಡು ಕುಟುಂಬಗಳು ಮಾರಮಾರಿ; ರೈತರ ನಡುವೆ ಜಗಳ ತಂದಿಟ್ಟು ತಮಾಷೆ ನೋಡ್ತಿರೋ ಅಧಿಕಾರಿಗಳು!

ಬಿಜೆಪಿ ಬೆಂಬಲಿತ ಸದಸ್ಯೆ ಗೀತಾ ಅವರಿಗೆ ಆಮಿಷವೊಡ್ಡಿದ ಹಿನ್ನೆಲೆ ಅವರು ಪಿಡಿಒ ತಿಮ್ಮಯ್ಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಪಿಡಿಒ ವಿರುದ್ಧ ಕ್ರಮ ಕೈಗೊಂಡು ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ತಿಮ್ಮಯ್ಯ ಅವರು ಕೇಳಿದರೆ ಇದ್ಯಾವುದೇ ವಿಷಯಗಳು ನನ್ನ ಗಮನಕ್ಕೆ ಬಂದಿಲ್ಲ. ಚುನಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ನುಣಿಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡಬೇಕಾಗಿರುವ ಪಿಡಿಓ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ನಿಜಕ್ಕೂ ವಿಪರ್ಯಾಸವೇ ಸರಿ.

click me!