ದಿವ್ಯಾಂಗರ ಸಬಲೀಕರಣಕ್ಕೆ ಸರ್ಕಾರ ಮಾಸ್ಟರ್ ಪ್ಲಾನ್, ಬೃಹತ್ ಉದ್ಯೋಗ ಮೇಳಕ್ಕೆ ಸಜ್ಜು, ಸಚಿವ ಶರಣಪ್ರಕಾಶ್ ಪಾಟೀಲ್ ಮಹತ್ವದ ಘೋಷಣೆ

Published : Jan 29, 2026, 05:33 PM IST
Govt master plan for disabled Min Sharanprakash Patil announces mega job fair

ಸಾರಾಂಶ

ಕರ್ನಾಟಕ ಸರ್ಕಾರವು ದಿವ್ಯಾಂಗರ ಸಬಲೀಕರಣಕ್ಕಾಗಿ ಮುಂದಿನ ಮೂರು ತಿಂಗಳೊಳಗೆ ಬೆಂಗಳೂರಿನಲ್ಲಿ ವಿಶೇಷ ಉದ್ಯೋಗ ಮೇಳವನ್ನು ಆಯೋಜಿಸಲಿದೆ. ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಘೋಷಿಸಿದರು.

ಬೆಂಗಳೂರು, (ಜ. 29): ದಿವ್ಯಾಂಗರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಬಲೀಕರಣಗೊಳಿಸುವ ಉದ್ದೇಶದಿಂದ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ದಿವ್ಯಾಂಗರಿಗಾಗಿಯೇ ವಿಶೇಷ ಉದ್ಯೋಗ ಮೇಳವನ್ನು ಮುಂದಿನ ಮೂರು ತಿಂಗಳೊಳಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಹಭಾಗಿತ್ವದಲ್ಲಿ ದಿವ್ಯಾಂಗರಿಗಾಗಿ ವಿಶೇಷವಾಗಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಇದು ರಾಜ್ಯ ಸರ್ಕಾರದ ವಿನೂತನ ಮತ್ತು ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ದಿವ್ಯಾಂಗರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಹಾಗೂ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪ್ರಸಕ್ತ ಸಾಲಿನಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ, ಮಾರುಕಟ್ಟೆ ಬೇಡಿಕೆಗೆ ಅನುಗುಣವಾದ ವೃತ್ತಿಪರ ತರಬೇತಿಯನ್ನು ರಾಜ್ಯದ ದಿವ್ಯಾಂಗರಿಗೆ ನೀಡಲಾಗುತ್ತಿದ್ದು, ಒಟ್ಟು 1,000 ಅಭ್ಯರ್ಥಿಗಳಿಗೆ 3 ಕೋಟಿ ರೂ. ವೆಚ್ಚದಲ್ಲಿ ಕೌಶಲ್ಯ ತರಬೇತಿ, ಟೂಲ್ ಕೀಟ್ ವಿತರಣೆ ಹಾಗೂ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಾ. ಪಾಟೀಲ್ ವಿವರಿಸಿದರು.

ಇದಲ್ಲದೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದ ಮೂಲಕ ದಿವ್ಯಾಂಗರಿಗೆ ಉದ್ಯಮಶೀಲತಾಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ. ಸರ್ಕಾರದ ಆದೇಶದಂತೆ ದಿವ್ಯಾಂಗರಿಗೆ ತರಬೇತಿಗಳಲ್ಲಿ ಇದ್ದ ಶೇ.3ರ ಮೀಸಲಾತಿಯನ್ನು ಶೇ.5ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

2017–18ರಿಂದ 2024–25ನೇ ಸಾಲಿನವರೆಗೆ ನೋಂದಣಿಯಾದ ಅಭ್ಯರ್ಥಿಗಳ ಪೈಕಿ 540 ದಿವ್ಯಾಂಗರು ವಿವಿಧ ಜಾಬ್ ರೋಲ್‌ಗಳಡಿ ವಿವಿಧ ತರಬೇತಿದಾರ ಸಂಸ್ಥೆಗಳ ಮೂಲಕ ತರಬೇತಿ ಪಡೆದಿದ್ದಾರೆ. ಇವರಲ್ಲಿ 83 ಜನರಿಗೆ ಉದ್ಯೋಗಾವಕಾಶ ದೊರೆತಿದೆ. ಮುಖ್ಯಮಂತ್ರಿ ಅವರ ‘ಕೌಶಲ್ಯ ಕರ್ನಾಟಕ’ ಯೋಜನೆಯಡಿ 10 ದಿವ್ಯಾಂಗರಿಗೆ ತರಬೇತಿ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇತ್ತೀಚೆಗೆ ಬಿಎಂಎಸ್ ಕಾಲೇಜಿನಲ್ಲಿ ಆಯೋಜಿಸಲಾದ ಉದ್ಯೋಗ ಮೇಳದಲ್ಲಿ 1,200 ಅಭ್ಯರ್ಥಿಗಳು ಭಾಗವಹಿಸಿದ್ದು, 75 ಜನರಿಗೆ ಉದ್ಯೋಗ ದೊರೆತಿದೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅಂಕಿ-ಅಂಶಗಳೊಂದಿಗೆ ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಶಿಕ್ಷಕಿಯರಿಗೆ ಋತುಚಕ್ರ ರಜೆ: ಸರ್ಕಾರದ ಮಹತ್ವದ ಆದೇಶ
ಮಾರತ್ತಹಳ್ಳಿ 'ಮಿನಿ ಆಂಧ್ರ': ಯುವತಿಯ ವಿಡಿಯೋ ವೈರಲ್, ಕನ್ನಡಿಗರ ಕೆಂಗಣ್ಣು; 'ವಲಸೆ ನಿಯಂತ್ರಣ ಕಾಯ್ದೆ'ಗೆ ಒತ್ತಾಯ