
ಬೆಂಗಳೂರು[ನ.21]: ಸಾರ್ವಜನಿಕರಿಂದ ನೂರಾರು ಕೋಟಿ ಹಣ ಹೂಡಿಕೆ ಮಾಡಿ ವಂಚಿಸಿರುವ ಆ್ಯಂಬಿಡೆಂಟ್ ಕಂಪನಿಯ ಆಸ್ತಿ ಜಪ್ತಿ ಮಾಡಿ ಸಾರ್ವಜನಿಕರ ಹಣ ಹಿಂದಿರುಗಿಸುವ ಸಂಬಂಧ ಸರ್ಕಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಕಾರಣದಿಂದ ಹೂಡಿಕೆದಾರರ ಹಿತ ಕಾಪಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ‘ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿದ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ ಸೆಕ್ಷನ್ 5’ರ ಅಡಿಯಲ್ಲಿ ಸರ್ಕಾರ ತನ್ನ ಅಧಿಕಾರವನ್ನು ಚಲಾಯಿಸಲು ನಿರ್ಧರಿಸಿದೆ. ಇದಕ್ಕಾಗಿ ಉತ್ತರ ಉಪ ವಿಭಾಗದ ಉಪವಿಭಾಗಾಧಿಕಾರಿಯನ್ನು ಈ ಕಾಯ್ದೆಯ ಸಮರ್ಪಕ ಜಾರಿಗೆ ನಿಯುಕ್ತಿಗೊಳಿಸಲಾಗಿದೆ.
ಆ್ಯಂಬಿಡೆಂಟ್ ಮಾರ್ಕೆಟಿಂಗ್ ಕಂಪನಿಯ ಹಾಗೂ ಕಂಪನಿ ಪಾಲುದಾರರು, ನಿರ್ದೇಶಕರು, ವ್ಯವಸ್ಥಾಪಕರು, ಪ್ರೊಮೋಟರ್‌ಗಳು ಮತ್ತು ಮ್ಯಾನೇಜರ್‌ಗಳು ಸೇರಿದಂತೆ ಈ ಕಾಯ್ದೆಯ ಸೆಕ್ಷನ್ 3(2) ರ ಅಡಿಯಲ್ಲಿ ಕಂಪನಿ ಜತೆಗೆ ವ್ಯವಹರಿಸಿರುವ ಇತರರ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಿಕೊಂಡು ಸಾರ್ವಜನಿಕರ ಹಣವನ್ನು ಹಿಂದಿರುಗಿಸುವ ಹೊಣೆ ಈ ಉಪವಿಭಾಗಾಧಿಕಾರಿಯ ಮೇಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆ್ಯಂಬಿಡೆಂಟ್ ಕಂಪನಿಯ ಜತೆ ವ್ಯವಹಾರ ಇಟ್ಟುಕೊಂಡು ಆಸ್ತಿಪಾಸ್ತಿ ಮಾಡಿರುವವರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದ ನೆಪದಲ್ಲಿ ಕಂಪನಿಯಿಂದ ಹಣ ಪಡೆದಿರುವವರ ಬಗ್ಗೆ 080-22210076 ಹಾಗೂ 9916505331, 9480331096 ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ