Covid 19: ಕೋವಿಡ್‌ ಮಾಹಿತಿಗೆ ಸರ್ಕಾರದಿಂದಲೇ ವೈದ್ಯರ ನೇಮಕ: ಡಾ.ಸುಧಾಕರ್‌

By Kannadaprabha NewsFirst Published Jan 20, 2022, 3:35 AM IST
Highlights

ಕೊರೋನಾ ಸೋಂಕಿನ ಕುರಿತು ಲಘುವಾಗಿ ಮಾತನಾಡಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವ ವೈದ್ಯರುಗಳ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಜ.20): ಕೊರೋನಾ ಸೋಂಕಿನ (Coronavirus) ಕುರಿತು ಲಘುವಾಗಿ ಮಾತನಾಡಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವ ವೈದ್ಯರುಗಳ (Doctors) ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೊದಲ ಮತ್ತು ಎರಡನೇ ಅಲೆಗಳಿಂದಲೂ ಹಲವು ವೈದ್ಯರು ಮಾತಿನ ಭರದಲ್ಲಿ ಸೋಂಕಿನ ಬಗ್ಗೆ ಲಘುವಾದ, ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿ, ಸೋಂಕಿನ ಬಗ್ಗೆ ನಿರ್ಲಕ್ಷ್ಯ ಭಾವ ಮೂಡಿಸಿ ಸೋಂಕು ಹರಡಲು ಹಾದಿಯಾಗುತ್ತಿದೆ. ಹೀಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ವೈದ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ಬೇಡ. ಸಾಂಕ್ರಾಮಿಕ ಸಂದರ್ಭದಲ್ಲಿ ಜನರ ದಾರಿತಪ್ಪಿಸುವ ವೈದ್ಯರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ಸಾರ್ವಜನಿಕರಿಗೆ ಮಾಹಿತಿ ನೀಡಲೆಂದು ಸೋಂಕಿನ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ವೈದ್ಯರನ್ನು ರಾಜ್ಯ ಸರ್ಕಾರದಿಂದಲೇ ಅಧಿಕೃತವಾಗಿ ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿ 15 ವೈದ್ಯರು, ಜಿಲ್ಲಾವಾರು 2-3 ವೈದ್ಯರು ಇರಲಿದ್ದಾರೆ. ಅವರುಗಳು ನೀಡುವ ಹೇಳಿಕೆಯನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಬೇಕು. ನಿಯೋಜಿತ ವೈದ್ಯರ ಪಟ್ಟಿಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

Covid Self Test Kit: ಕೊರೋನಾ ಸ್ವ ಪರೀಕ್ಷಾ ಕಿಟ್‌ ಖರೀದಿಗೆ ಹೆಸರು, ವಿಳಾಸ ಕಡ್ಡಾಯ!

ಲಸಿಕೆಯಿಂದ ತೀವ್ರತೆ ಕಡಿಮೆ: ಶೇ.100 ರಷ್ಟುಲಸಿಕೆ ಗುರಿಸಾಧನೆಯಾಗಿರುವ ಜಿಲ್ಲೆಗಳಲ್ಲಿಯೂ ಸೋಂಕು ಹೆಚ್ಚಿದೆ ಎಂಬ ಕುರಿತು ಪ್ರತಿಕ್ರಿಯಿಸಿದ ಸಚಿವರು, ಲಸಿಕೆ (Vaccine) ಪಡೆದವರಿಗೆ ಸೋಂಕು ತಗುಲುವುದಿಲ್ಲ ಎಂದು ಎಲ್ಲಿಯೂ ಹೇಳಿಕೆ ನೀಡಿಲ್ಲ. ಸೋಂಕಿನ ತೀವ್ರತೆ ಕಡಿಮೆ ಮಾಡುವ ಉದ್ದೇಶದಿಂದ ಮಾತ್ರ ಲಸಿಕೆ ಕೊಡಲಾಗುತ್ತಿದೆ. ಈ ಹಿಂದೆ 10 ರಿಂದ 15 ದಿನ ಕಾಡುತ್ತಿದ್ದ ಸೋಂಕು ಈ ಬಾರಿ 3-4ದಿನಕ್ಕೆ ಗುಣಮುಖವಾಗುತ್ತಿದ್ದು, ಸೋಂಕಿತರ ಪರೀಕ್ಷೆ ವರದಿಯೂ ಕೂಡಾ ನೆಗೆಟಿವ್‌ ಬರುತ್ತಿದೆ. ಸಾವಿನ ಪ್ರಮಾಣ ಸಾಕಷ್ಟುಕಡಿಮೆ ಇದೆ. 

ಇದು ಲಸಿಕೆಯಿಂದಾದ ಅನುಕೂಲವಾಗಿದೆ. ಹೀಗಾಗಿ, ಎರಡನೇ ಡೋಸ್‌ ಬಾಕಿ ಉಳಿಸಿಕೊಂಡವರು ಮತ್ತು ಮೂರನೇ ಪಡೆಯಲು ಅರ್ಹರು ತಪ್ಪದೆ ಲಸಿಕೆ ಪಡೆಯಬೇಕು ಎಂದರು. ಮಕ್ಕಳಲ್ಲಿ ಸೋಂಕು ಹೆಚ್ಚಳಕ್ಕೆ ಲಸಿಕೆಯಿಂದ ದೂರ ಉಳಿದಿರುವುದು ಕಾರಣವಾಗಿದೆ. ಮಕ್ಕಳಲ್ಲಿ ಸೋಂಕು ಬಂದರೂ ಸಾಕಷ್ಟುಹಾನಿ ಮಾಡಿಲ್ಲ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವನ್ನು ಪೋಷಕರು ವಹಿಸಬೇಕು ಎಂದು ಸಲಹೆ ನೀಡಿದರು.

ಶುಕ್ರವಾರ ನಿರ್ಬಂಧ ನಿರ್ಧಾರ: ವಾರಾಂತ್ಯ ಮತ್ತು ರಾತ್ರಿ ಕಫ್ರ್ಯೂ (Night Curfew) ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಿರ್ಬಂಧ ವಿನಾಯ್ತಿ ವಿಚಾರದಲ್ಲಿ ತಜ್ಞರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಶುಕ್ರವಾರ ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಸಾಧಕ ಬಾಧಕಗಳನ್ನು ಗಮನಿಸಿ ತೀರ್ಮಾನಿಸಲಾಗುತ್ತದೆ. ನಮ್ಮದು ಜನಪರ ಸರ್ಕಾರವಾಗಿದ್ದು, ಜನರ ಆರೋಗ್ಯಕ್ಕೆ ಆದ್ಯತೆ ನೀಡುತ್ತದೆ. ಜನರ ಪ್ರಾಣಕ್ಕೆ ಹಾನಿಯಾಗಂತೆ ನಿರ್ಧಾರ ಕೈಗೊಳ್ಳಲಾಗುವುದು. ಶುಕ್ರವಾರ ಬೆಳಿಗ್ಗೆಯೇ ಮುಂದಿನ ನಿರ್ಬಂಧಗಳ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಸಚಿವ ಡಾ. ಸುಧಾಕರ್‌ ಸ್ಪಷ್ಟಪಡಿಸಿದರು.

Corona Vaccine in Karnataka: ರಾಜ್ಯದ 99% ಮಂದಿಗೆ ಮೊದಲ ಡೋಸ್‌

3ನೇ ಡೋಸ್‌ ಅಭಿಯಾನ ನಿರೀಕ್ಷೆಯಂತೆ ಸಾಗುತ್ತಿಲ್ಲ: ರಾಜ್ಯದಲ್ಲಿ ಮುಂಚೂಣಿ ಕಾರ್ಯಕರ್ತರ ಮುನ್ನೆಚ್ಚರಿಕೆ ಲಸಿಕೆ ಅಭಿಯಾನಕ್ಕೆ ನಿರೀಕ್ಷೆ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮುಂಚೂಣಿ ಕಾರ್ಯಕರ್ತರು ತಪ್ಪದೇ ಈ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮನವಿ ಮಾಡಿದರು. ಮಂಗಳವಾರ ಮುಖ್ಯಮಂತ್ರಿಗಳು ಜಿಲ್ಲಾ​ಧಿಕಾರಿಗಳೊಂದಿಗೆ ನಡೆಸಿದ ಸಭೆ ಬಳಿಕ ಮಾತನಾಡಿದ ಅವರು, ಮುನ್ನೆಚ್ಚರಿಕೆ ಲಸಿಕೆ ಡೋಸ್‌ ಅನ್ನು ಮುಂಚೂಣಿ ಕಾರ್ಯಕರ್ತರು ಎಲ್ಲರೂ ಪಡೆಯಬೇಕು. ಸದ್ಯ ರಾಜ್ಯದಲ್ಲಿ ಶೇ.39ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ಆದ್ದರಿಂದ ಮುನ್ನೆಚ್ಚರಿಕೆ ಡೋಸ್‌ ಲಸಿಕಾರಣವನ್ನು ದೊಡ್ಡ ಅಭಿಯಾನದಂತೆ ಮಾಡಲು ತೀರ್ಮಾನಿಸಲಾಗಿದ್ದು, ಅರ್ಹ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟಸಹ ಅಸ್ವಸ್ಥತೆ ಹೊಂದಿರುವವರು ಲಸಿಕೆ ಪಡೆಯಬೇಕು ಎಂದರು.

click me!