ಪ್ರವಾಸಿಗರಿಗೆ ಗುಡ್‌ನ್ಯೂಸ್‌: ವೀಕ್ಷಣೆಗೆ ಮುಕ್ತಗೊಂಡ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಜಲಪಾತಗಳು

By Sathish Kumar KH  |  First Published Jul 31, 2023, 1:36 PM IST

ಭಾರಿ ಮಳೆ ಹಾಗೂ ಗುಡ್ಡ ಕುಸಿತದಿಂದ ಚಿಕ್ಕಮಗಳೂರಿನ ಜಲಪಾತ ಹಾಗೂ ಗಿರಿ ಪ್ರದೇಶಗಳಿಗೆ ವಿಧಿಸಲಾಗಿದ್ದ ಪ್ರವಾಸಿಗರ ಪ್ರವೇಶ ನಿರ್ಬಂಧವನ್ನು ತೆರವು ಮಾಡಲಾಗಿದ್ದು, ಇಂದಿನಿಂದ ಮುಕ್ತವಾಗಿ ಪ್ರವಾಸ ಮಾಡಬಹುದು.  


ಚಿಕ್ಕಮಗಳೂರು (ಜು.31): ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಎಡಬಿಡದೇ ಸುರಿಯುತ್ತಿದ್ದ ಮಳೆಯಿಂದಾಗಿ ಚಿಕ್ಕಮಗಳೂರಿನ ವಿವಿಧ ಜಲಪಾತ ಹಾಗೂ ಗಿರಿ ಪ್ರದೇಶಗಳಿಗೆ ಪ್ರವಾಸಿಗರ ನಿರ್ಬಂಧವನ್ನು ವಿಧಿಸಿದ ಚಿಕ್ಕಮಗಳೂರು ಜಿಲ್ಲಾಡಳಿತವು ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿದೆ. 

ರಾಜ್ಯದಲ್ಲಿ ಕಳೆದ 15 ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆಯಿಂದಾಗಿ ಹಳ್ಳ-ಕೊಳ್ಳ, ನದಿಗಳು ಹಾಗೂ ಜಲಪಾತಗಳು ತುಂಬಿ ಹರಿಯುತ್ತಿದ್ದವು. ಈ ವೇಳೆ ಹಲವು ಅವಘಡಗಳು ಕೂಡ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ವಿವಿಧ ಪ್ರವಾಸಿ ಕ್ಷೇತ್ರಗಳಿಗೆ ಪ್ರವಾಸಿಗರು ಆಗಮಿಸದಂತೆ ಜಿಲ್ಲಾಡಳಿತವು ನಿಷೇಧವನ್ನು ಹೇರಿತ್ತು. ಆದರೆ, ಈಗ ಕಳೆದ ಎರಡು ದಿನಗಳಿಂದ  ಮಲೆನಾಡಿನಲ್ಲಿ ಮಳೆ ತಗ್ಗಿರುವ ಹಿನ್ನೆಲೆಯಲ್ಲಿ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತ ಅವಕಾಶವನ್ನು ಮಾಡಿಕೊಟ್ಟಿದೆ. 

Tap to resize

Latest Videos

undefined

ಪ್ರವಾಸಿಗರಿಗೊಂದು ಮನವಿ: ಮಳೆ ನಿಲ್ಲೋವರೆಗೂ ಚಿಕ್ಕಮಗಳೂರು ಪ್ರವಾಸಕ್ಕೆ ಬರಬೇಡಿ

ಮಧ್ಯಾಹ್ನ 12 ಗಂಟೆಯಿಂದ ಪ್ರವಾಸಿಗರ ಸಂಚಾರಕ್ಕೆ ಮುಕ್ತ ಅವಕಾಶ: ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶದ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತವು ವಾರಾಂತ್ಯದ ದಿನಗಳಾದ ಶುಕ್ರವಾರದಿಂದ ಸೋಮವಾರದವರೆಗೆ ಮೂರು ದಿನ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಈಗ ಮುಳ್ಳಯ್ಯನಗಿರಿ ಸಾಲಿನಲ್ಲಿ ಗುಡ್ಡ ಕುಸಿತದ ಹಿನ್ನೆಲೆಯಲ್ಲಿಯೂ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಗುಡ್ಡ ಕುಸಿತದ ಭಾಗವನ್ನು ತೆರವು ಮಾಡಲಾಗಿದ್ದು, ಮಳೆಯೂ ತಗ್ಗಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ಪ್ರವಾಸಿಗರ ವೀಕ್ಷಣೆಗೆ ಅನುಮತಿ ನೀಡಲಾಗಿದೆ.

ಕೈಮರ ಚೆಕ್‌ಪೋಸ್ಟ್‌ನಿಂದ ಮುಂದೆ ಹೋಗಲು ಅನುಮತಿ: ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್ ನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಈಗ ಮಳೆ ಕಡಿಮೆಯಾಗಿದ್ದು, ಅಪಾಯದ ಪ್ರಮಾಣವೂ ತಗ್ಗಿರುವ ಕಾರಣದಿಂದ ಇಂದು ಮಧ್ಯಾಹ್ನದಿಂದ ಪ್ರವಾಸಿಗರು ಗಿರಿ ಪ್ರದೇಶಗಳಿಗೆ ಹೋಗಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಆದರೆ, ಜಲಪಾತ ಸೇರಿದಂತೆ ಗಿರಿ ಪ್ರದೇಶಗಳಲ್ಲಿ ಪ್ರವಾಸಿಗರು ರೀಲ್ಸ್‌ ಮಾಡುವುದು ಹಾಗೂ ಸಾಹಸ ಪ್ರದರ್ಶನ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳಬಾರದು ಎಂದು ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ.

ಮಳೆ ನಿಲ್ಲೋವರೆಗೂ ಪ್ರವಾಸಕ್ಕೆ ಬರಬೇಡಿ ಎಂದಿದ್ದ ಪೊಲೀಸ್‌ ಇಲಾಖೆ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವ ಪ್ರವಾಸಿಗರು ತಮ್ಮ ಪ್ರವಾಸದ ಯೋಜನೆಯನ್ನು ಮಳೆ ಬಿಡುವು ನೀಡುವವರೆಗೆ ಮುಂದೂಡಬೇಕು ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ಅವರು ಮನವಿ ಮಾಡಿದ್ದರು. ಜಿಲ್ಲೆಯಾದ್ಯಂತ  ಭಾರೀ ಮಳೆಯಿಂದಾಗಿ ಭೂ ಕುಸಿತ, ರಸ್ತೆ ಸಂಪರ್ಕ ಕಡಿತದಂತಹ ಅವಘಡಗಳು ಸಂಭವಿಸುತ್ತಿದೆ. ಇದೇ ವೇಳೆ ಗಿರಿ ಶ್ರೇಣಿ, ಚಾರ್ಮಾಡಿ ಘಾಟಿ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ಮಳೆ ಹೆಚ್ಚಾದಂತೆ ಅನಾಹುತಗಳು ಹೆಚ್ಚಾಗುವ ಸಾಧ್ಯತೆಗಳೂ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುವ ತಮ್ಮ ಯೋಜನೆಯನ್ನು ಸಧ್ಯಕ್ಕೆ ಮುಂದೂಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಅವರು ರಾಜ್ಯದ ಮತ್ತು ಅಂತರರಾಜ್ಯ ಪ್ರವಾಸಿಗರಿಗೆ ಮನವಿ ಮಾಡಿದ್ದರು.

ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು: ಎಂದೂ ನೋಡಿರದ ದೃಶ್ಯಕಾವ್ಯಗಳು

ಜಲಪಾತದ ಬಳಿ ಶರತ್ ಎಂಬ ಯುವಕ ಜಾರಿಬಿದ್ದು ಸಾವು: ಜಿಲ್ಲೆಯ ಪಕ್ಕದ ಉಡುಪಿ ಜಿಲ್ಲೆಯ ಕೊಲ್ಲೂರು ಅರಿಶಿನ ಗುಂಡಿಯ ಜಲಪಾತದ ಬಳಿ ರೀಲ್ಸ್ ಮಾಡುವಾಗ ಭದ್ರಾವತಿ ಮೂಲದ ಶರತ್ ಎಂಬ ಯುವಕ ಜಾರಿಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.  ಈ ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ಎಲ್ಲ ಪ್ರವಾಸಿಗರಿಗೆ ರಕ್ಷಣೆ ಕೊಡುವುದಕ್ಕೆ ಸಮಸ್ಯೆ ಆಗಲಿದೆ ಎಂಬ ಕಾರಣದಿಂದ ಜಿಲ್ಲೆಗೆ ಭೇಟಿ ನೀಡಲು ಯೋಜಿಸಿರುವ ಪ್ರವಾಸಿಗರು ಕೆಲ ದಿನಗಳ ಕಾಲ ಪ್ರವಾಸ ಮುಂದೂಡುವುದು ಸೂಕ್ತವಾಗಿದೆ. ನಿರಂತರ ಮಳೆಯಿಂದಾಗಿ ಮುಳ್ಳಯ್ಯನಗಿರಿ, ದತ್ತಪೀಠ ಭಾಗದ ಫಾಲ್ಸ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಧುಮ್ಮಿಕ್ಕುತ್ತಿದೆ. ಅಲ್ಲದೆ ತೇವಾಂಶ ಹೆಚ್ಚಾದಂತೆ ಗಿರಿಯ ಮಣ್ಣು ಸಡಿಲಗೊಂಡು ಕುಸಿತಕ್ಕೊಳಗಾಗುವ ಆತಂಕ ಹೆಚ್ಚಿದೆ. ಇನ್ನು ಪೊಲೀಸರಿಂದ ಎಷ್ಟೇ ಭದ್ರತೆ ಒದಗಿಸಿದರೂ ಜನರು ಕೆಲ ಕ್ಷಣದ ಸಂತಸಕ್ಕಾಗಿ ಜೀವ ಪಣಕ್ಕಿಡುತ್ತಿದ್ದಾರೆ. ಇದರಿಂದ ಜನರ ರಕ್ಷಣೆಗೆ ಪೊಲೀಸರಿಂದ ಆತಂಕ ಎದುರಾಗಿತ್ತು.

click me!