
ಬೆಂಗಳೂರು (ಮಾ.15): ವಿದೇಶದಿಂದ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್‌ಗೆ ಜಾಮೀನು ನಿರಾಕರಿಸಿ ನಗರದ ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಸಂಬಂಧ ಜಾಮೀನು ಕೋರಿ ರನ್ಯಾರಾವ್ ಸಲ್ಲಿಸಿದ್ದ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ನ್ಯಾಯಾಧೀಶ ವಿಶ್ವನಾಥ ಸಿ.ಗೌಡರ್ ಆದೇಶಿಸಿದ್ದಾರೆ. ಆರೋಪಿ ರನ್ಯಾ 2024ರಲ್ಲಿ 27 ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ಆಕೆ ಬಳಿ ದುಬೈ ನಿವಾಸದ ಗುರುತಿನ ಚೀಟಿಯೂ ಇದೆ. ಈ ಕುರಿತು ದಾಖಲೆಗಳು ತನಿಖಾಧಿಕಾರಿಗಳ ಬಳಿ ಲಭ್ಯವಿದೆ. ಅರ್ಜಿದಾರೆ ಭಾಗಿಯಾಗಿದ್ದಾರೆನ್ನಲಾದ ಅಕ್ರಮ ಚಿನ್ನ ಸಾಗಣೆಯಿಂದ 4.83 ಕೋಟಿ ರು. ಸುಂಕ ವಂಚನೆಯಾಗಿದೆ ಎಂಬ ಆರೋಪವಿದೆ.
ಆಕೆಗೆ ಅಂತಾರಾಷ್ಟ್ರೀಯ ಸಂಪರ್ಕಗಳಿರುವುದು ಕಂಡು ಬಂದಿವೆ. ಪ್ರಕರಣದಲ್ಲಿನ ಆರೋಪಗಳು ಗಂಭೀರವಾಗಿದ್ದು, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಈ ಸಮಯದಲ್ಲಿ ಅರ್ಜಿದಾರೆ ಜಾಮೀನು ಪಡೆದು ಹೊರಬಂದರೆ, ಸಾಕ್ಷಿಗಳನ್ನು ನಾಪಡಿಸುವ ಮತ್ತು ಪ್ರಕರಣವನ್ನು ದಿಕ್ಕುತಪ್ಪಿಸುವ ಸಾಧ್ಯತೆಯಿದೆ. ಆದ್ದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ರನ್ಯಾ ಪರ ವಕೀಲರು, ಅಪರಾಧ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ವೇಳೆ ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂಬ ಬಗ್ಗೆ ಅರೆಸ್ಟ್ ಮೆಮೊದಲ್ಲಿ ತನಿಖಾಧಿಕಾರಿಗಳು ತಿಳಿಸಿಲ್ಲ.
ಬಂಧಿಸಿದ ಕೂಡಲೇ ಕಸ್ಟಮ್ಸ್ ಇಲಾಖೆಯ ಗೆಜೆಟೆಡ್ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿಲ್ಲ. ರನ್ಯಾ ಬಂಧನದ ವೇಳೆ ಕಸ್ಟಮ್ಸ್ ಕಾಯ್ದೆಯ ನಿಯಮಗಳನ್ನೂ ಅನುಸರಿಸಿಲ್ಲ. ಮೂವರು ಆರೋಪಿಗಳ ಪೈಕಿ ರನ್ಯಾರನ್ನು ಮಾತ್ರ ಬಂಧಿಸಲಾಗಿದೆ. ರನ್ಯಾ ದೇಹ, ಶೂ ಮತ್ತು ಪ್ಯಾಕೆಟ್‌ನಲ್ಲಿ ಚಿನ್ನ ಇರಿಸಿಕೊಂಡಿದ್ದರು ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಆದರೆ, ಮೆಟಲ್ ಡಿಟೆಕ್ಟರ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿಲ್ಲ. ಬಂಧನ ಪ್ರಕ್ರಿಯೆಯಲ್ಲಿ ಡಿಆರ್‌ಐ ಅಧಿಕಾರಿಗಳು ಸಾಕಷ್ಟು ಕಾನೂನು ಲೋಪ ಎಸಗಿದ್ದಾರೆ. ಮೇಲಾಗಿ ಅರ್ಜಿದಾರೆ ಮಹಿಳೆಯಾಗಿದ್ದು, ಜಾಮೀನು ನೀಡಬೇಕು ಎಂದು ಕೋರಿದರು.
ಮುಂಬೈ ಬಂಧಿತ ಸ್ಮಗ್ಲರ್‌ಗೆ ರನ್ಯಾ ರಾವ್ ನಂಟು: ಡಿಆರ್‌ಐ ತನಿಖೆಯಲ್ಲಿ ಬಹಿರಂಗ
ಈ ಮನವಿಗೆ ಆಕ್ಷೇಪಿಸಿದ ಡಿಐಆರ್ ಪರ ವಕೀಲರು, ದುಬೈನಿಂದ 14.200 ಕೆ.ಜಿಯಷ್ಟು 24 ಕ್ಯಾರೆಟ್ ಚಿನ್ನ ತರುವಾಗ ಮಾ.3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದಿದ್ದಾರೆ. ಚಿನ್ನವನ್ನು ಭಾರತಕ್ಕೆ ತರುವಾಗ ದುಬೈನಲ್ಲಿ ಸುಳ್ಳು ಹೇಳಿ, ಅಲ್ಲಿನ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿದ್ದಾರೆ. ಇದು ಪೂರ್ವಯೋಜಿತ ಕೃತ್ಯ. ರಾಜ್ಯ ಪೊಲೀಸರ ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಂಡು ಚಿನ್ನ ಅಕ್ರಮ ಸಾಗಣೆ ಕೃತ್ಯದಲ್ಲಿ ತೊಡಗಿದ ಹಿನ್ನೆಲೆಯನ್ನು ರನ್ಯಾ ಹೊಂದಿದ್ದಾರೆ. ಇದು ರಾಷ್ಟ್ರಕ್ಕೆ ಅಪಾಯಕಾರಿಯಾದ ಬೆಳವಣಿಗೆ. ಪ್ರಕರಣ ತನಿಖಾ ಹಂತದಲ್ಲಿದ್ದು, ಚಿನ್ನ ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆ ಮಾಡಬೇಕಿದೆ. ಪೂರ್ಣ ಪ್ರಮಾಣದಲ್ಲಿ ಅಕ್ರಮವನ್ನು ಬಯಲಿಗೆಳೆಯಬೇಕಿದೆ. ಈ ಹಂತದಲ್ಲಿ ರನ್ಯಾಗೆ ಜಾಮೀನು ನೀಡಬಾರದು ಎಂದು ಡಿಐಆರ್ ಅಧಿಕಾರಿಗಳು ವಾದ ಮಂಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ