Bengaluru Jewellers: ಚಿನ್ನದ ಅಂಗಡಿಗಳಲ್ಲಿ ಬುರ್ಖಾ ನಿಷೇಧ; ಫೇಸ್ ಮಾಸ್ಕ್, ಹೆಲ್ಮೆಟ್ ಹಾಕಿದ್ದರೂ ಪ್ರವೇಶವಿಲ್ಲ!

Published : Jan 14, 2026, 11:14 AM IST
Gold Jewellery Shops Banned Burqa and Hijab

ಸಾರಾಂಶ

ರಾಜ್ಯದಲ್ಲಿ ಹೆಚ್ಚುತ್ತಿರುವ ಚಿನ್ನಾಭರಣ ದರೋಡೆ ಪ್ರಕರಣ ತಡೆಯಲು, ಕರ್ನಾಟಕದ ಚಿನ್ನದ ವ್ಯಾಪಾರಿಗಳ ಒಕ್ಕೂಟವು ಮಳಿಗೆಗಳಿಗೆ ಪ್ರವೇಶಿಸುವ ಗ್ರಾಹಕರಿಗೆ ಬುರ್ಖಾ, ಹೆಲ್ಮೆಟ್ ಮತ್ತು ಮಾಸ್ಕ್ ನಿಷೇಧಿಸಲು ಚಿಂತನೆ ನಡೆಸಿದೆ. ಭದ್ರತಾ ದೃಷ್ಟಿಯಿಂದ ಈ 'ನೋ ಫೇಸ್ ಮಾಸ್ಕ್, ನೋ ಎಂಟ್ರಿ' ನಿಯಮ ಜಾರಿಯಾಗಲಿದೆ.

ಬೆಂಗಳೂರು (ಜ.14): ರಾಜ್ಯದಲ್ಲಿ ಹೆಚ್ಚುತ್ತಿರುವ ಚಿನ್ನಾಭರಣ ಕಳ್ಳತನ, ದರೋಡೆ ಹಾಗೂ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಚಿನ್ನದ ವ್ಯಾಪಾರಿಗಳ ಒಕ್ಕೂಟ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ಬೆನ್ನಲ್ಲೇ ಈಗ ಕರ್ನಾಟಕದಲ್ಲೂ ಚಿನ್ನದಂಗಡಿ ಪ್ರವೇಶಿಸುವಾಗ ಗ್ರಾಹಕರ ಮುಖ ಚಹರೆ ಸ್ಪಷ್ಟವಾಗಿ ಕಾಣಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿನ್ನದಂಗಡಿಗೆ ಬರುವ ಗ್ರಾಹಕರಿಗೆ ಬುರ್ಖಾ ಧರಿಸಿ ಬರುವುದನ್ನು ಬ್ಯಾನ್ ಮಾಡಲು ತೀರ್ಮಾನಿಸಲಾಗಿದೆ.

ಏನಿದು ಹೊಸ ನಿಯಮ?

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ಬಂದಿರುವಂತೆ, ಚಿನ್ನದ ಮಳಿಗೆಗಳಿಗೆ ಬರುವ ಗ್ರಾಹಕರು ತಮ್ಮ ಮುಖವನ್ನು ಮರೆಮಾಚುವ ಯಾವುದೇ ಉಡುಪು ಅಥವಾ ಸಾಧನಗಳನ್ನು ಧರಿಸುವಂತಿಲ್ಲ. ಹೆಲ್ಮೆಟ್, ಮಾಸ್ಕ್ ಅಥವಾ ಮುಖ ಚಹರೆ ಗುರುತಿಸಲಾಗದಂತೆ ಧರಿಸುವ ಬುರ್ಖಾ ಮಾದರಿಯ ಬಟ್ಟೆಗಳಿಗೆ ನಿರ್ಬಂಧ ಹೇರುವ ಕುರಿತು ವ್ಯಾಪಾರಿಗಳ ಒಕ್ಕೂಟ ಗಂಭೀರವಾಗಿ ಆಲೋಚಿಸುತ್ತಿದೆ. ಇತ್ತೀಚೆಗೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿಕೊಂಡು ಬಂದ ಗ್ಯಾಂಗ್‌ ಒಂದು 8 ಕೆಜಿ ಚಿನ್ನ ಹಾಗೂ ವಜ್ರಗಳನ್ನು ದರೋಡೆ ಮಾಡಿಕೊಂಡು ಹೋಗಿತ್ತು. ಪ್ರಕರಣ ನಡೆದು ಒಂದು ತಿಂಗಳಾದರೂ ಇನ್ನೂ ಆರೋಪಿಗಳ ಸುಳಿವು ಸಿಕ್ಕಿಲ್ಲ.

ಭದ್ರತೆಯೇ ಪ್ರಮುಖ ಆದ್ಯತೆ

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಇದೇ ಕಾರಣಕ್ಕೆ ಜುವೆಲ್ಲರಿ ಮಳಿಗೆಗಳ ಮೇಲೆ ದರೋಡೆಕೋರರ ಕಣ್ಣು ಬಿದ್ದಿದೆ. ದರೋಡೆ ಅಥವಾ ಕಳ್ಳತನ ಮಾಡುವವರು ಉದ್ದೇಶಪೂರ್ವಕವಾಗಿ ಹೆಲ್ಮೆಟ್ ಅಥವಾ ಮಾಸ್ಕ್ ಧರಿಸಿ ಬರುತ್ತಾರೆ. ಇದರಿಂದ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಸಹ ಆರೋಪಿಗಳ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಹಾಗೂ ಮಳಿಗೆ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ, 'ನೋ ಫೇಸ್ ಮಾಸ್ಕ್, ನೋ ಎಂಟ್ರಿ' ಎಂಬ ನಿಯಮ ಅನಿವಾರ್ಯವಾಗಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಜುವೆಲರ್ಸ್ ಅಸೋಸಿಯೇಶನ್ ತೀರ್ಮಾನ

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಜುವೆಲರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಚೇತನ್ ಕುಮಾರ್ ಮೆಹ್ತಾ, 'ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ ವರ್ತಕರು ಮುಖ ಚಹರೆ ಕಾಣದಂತೆ ಬರುವ ಗ್ರಾಹಕರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಕರ್ನಾಟಕದಲ್ಲೂ ಇದೇ ಮಾದರಿಯ ನಿಯಮ ಜಾರಿಗೆ ತರುವ ಬಗ್ಗೆ ಶೀಘ್ರದಲ್ಲೇ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.

ಯಾವುದೇ ಧರ್ಮಕ್ಕೆ ಸೀಮಿತವಲ್ಲ

ಈ ನಿಯಮವು ಯಾವುದೇ ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಇದು ಕೇವಲ ಸುರಕ್ಷತೆಯ ಉದ್ದೇಶವನ್ನು ಹೊಂದಿದೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ. ಪುರುಷರು ಹೆಲ್ಮೆಟ್ ಅಥವಾ ಮಾಸ್ಕ್ ಧರಿಸಿ ಬರುವಂತಿಲ್ಲ, ಹಾಗೆಯೇ ಮಹಿಳೆಯರು ಸಹ ಮುಖ ಕಾಣದಂತೆ ಬಟ್ಟೆ ಮುಚ್ಚಿಕೊಂಡು ಬರುವಂತಿಲ್ಲ. ಪ್ರತಿಯೊಬ್ಬ ಗ್ರಾಹಕನ ಮುಖ ಚಹರೆ ಮಳಿಗೆಯ ಭದ್ರತಾ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಬೇಕು ಎಂಬುದು ಇದರ ಹಿಂದಿನ ಮೂಲ ಉದ್ದೇಶ. ಒಟ್ಟಾರೆಯಾಗಿ, ಚಿನ್ನದ ವ್ಯಾಪಾರಿಗಳ ಈ ನಡೆ ಗ್ರಾಹಕರಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಬಹುದಾದರೂ, ವ್ಯವಹಾರದ ಭದ್ರತೆ ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳ ರಕ್ಷಣೆಯ ದೃಷ್ಟಿಯಿಂದ ಇದು ಅಗತ್ಯ ಎಂದು ವ್ಯಾಪಾರ ವಲಯ ಪ್ರತಿಪಾದಿಸುತ್ತಿದೆ.

8 ಕೆಜಿ ಚಿನ್ನ ದೋಚಿ ತಿಂಗಳಾದರೂ ಸಿಗದ ಆರೋಪಿಗಳು: 

ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಡಿಸೆಂಬರ್ 28ರಂದು ಸಿನಿಮಾ ಶೈಲಿಯ ಭೀಕರ ದರೋಡೆಯೊಂದು ನಡೆದಿದೆ. ನಗರದ ಬಿಎಂ ರಸ್ತೆಯಲ್ಲಿರುವ ಪ್ರಸಿದ್ಧ 'ಸ್ಕೈ ಗೋಲ್ಡ್ ಅಂಡ್ ಡೈಮಂಡ್' (Sky Gold & Diamond) ಆಭರಣ ಮಳಿಗೆಗೆ ನುಗ್ಗಿದ ಐದಾರು ಜನರ ಸಶಸ್ತ್ರ ದರೋಡೆಕೋರರ ತಂಡ, ಗನ್ ತೋರಿಸಿ ಅಂದಾಜು 7 ರಿಂದ 8 ಕೆಜಿ ಚಿನ್ನ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಾಭರಣಗಳನ್ನು ದೋಚಿ ಪರಾರಿಯಾಗಿದೆ.  ಡಿಸೆಂಬರ್ 28ರ ಮಧ್ಯಾಹ್ನ ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಪ್ರವೇಶಿಸಿದ ದರೋಡೆಕೋರರು, ಒಮ್ಮೆಲೆ ತಮ್ಮ ಬಳಿಯಿದ್ದ ಮಾರಕಾಸ್ತ್ರ ಹಾಗೂ ಪಿಸ್ತೂಲ್‌ಗಳನ್ನು ಹೊರತೆಗೆದಿದ್ದಾರೆ. ಸಿಬ್ಬಂದಿ ಹಾಗೂ ಮಳಿಗೆಯಲ್ಲಿದ್ದವರನ್ನು ಗುರಿಯಾಗಿಸಿ ಗನ್ ತೋರಿಸಿ ಬೆದರಿಸಿದ ಕಿರಾತಕರು, ಕೆಲವೇ ನಿಮಿಷಗಳಲ್ಲಿ ಶೋಕೇಸ್‌ನಲ್ಲಿದ್ದ ಚಿನ್ನದ ಒಡವೆಗಳು ಹಾಗೂ ಬೆಲೆಬಾಳುವ ವಜ್ರಗಳನ್ನು ಬ್ಯಾಗ್‌ಗೆ ತುಂಬಿಸಿಕೊಂಡಿದ್ದಾರೆ. ತಡೆಯಲು ಬಂದವರ ಮೇಲೆ ಗುಂಡಿನ ದಾಳಿ ನಡೆಸುವ ಬೆದರಿಕೆ ಹಾಕಿ, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿ ಬೈಕ್ ಹಾಗೂ ಕಾರುಗಳಲ್ಲಿ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದ್ದಾರೆ. ಈವರೆಗೂ ದರೋಡೆಕೋರರು ಸಿಕ್ಕಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಶದ ನಂಬರ್ 1 ಶಿಕ್ಷಣ ಸಂಸ್ಥೆ IISc ನಲ್ಲಿ ಭದ್ರತಾ ಹುದ್ದೆ, SSLC ಪಾಸಾದವರಿಗೆ ಸುವರ್ಣಾವಕಾಶ!
ಬೆಂಗಳೂರಿನಲ್ಲಿದ್ದಾರೆ 2 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು; ಟಾಸ್ಕ್‌ ಫೋರ್ಸ್ ರಚನೆಗೆ ಆರ್.ಅಶೋಕ್ ಆಗ್ರಹ!