ನಿತ್ಯಾನಂದ ಆಶ್ರಮದ ‘ಹಿಂಸೆ’ ಬಿಚ್ಚಿಟ್ಟ ಬಾಲಕಿ!

Published : Nov 23, 2019, 07:19 AM ISTUpdated : Nov 23, 2019, 07:53 AM IST
ನಿತ್ಯಾನಂದ ಆಶ್ರಮದ ‘ಹಿಂಸೆ’ ಬಿಚ್ಚಿಟ್ಟ ಬಾಲಕಿ!

ಸಾರಾಂಶ

ನಿತ್ಯಾನಂದ ಆಶ್ರಮದ ‘ಹಿಂಸೆ’ ಬಿಚ್ಚಿಟ್ಟ ಬಾಲಕಿ!| ಜನಾರ್ದನ ಶರ್ಮಾ ಪುತ್ರಿಯ ಹೇಳಿಕೆ| 2 ತಿಂಗಳು ಕೂಡಿಟ್ಟಿದ್ದರು. ಕೆಟ್ಟಭಾಷೆಯಲ್ಲಿ ಬೈತಿದ್ದರು| ನಮ್ಮ ಅಪ್ಪ-ಅಮ್ಮನ ಬಗ್ಗೆ ಕೆಟ್ಟಮಾತು ಆಡಿಸುತ್ತಿದ್ದರು| .3 ಲಕ್ಷದಿಂದ .8 ಕೋಟಿವರೆಗೆ ದೇಣಿಗೆ ಎತ್ತಿಸುತ್ತಿದ್ದರು

ಬಿಡದಿ[ನ.23]: ರಾಮನಗರ ಜಿಲ್ಲೆ ಬಿಡದಿ ಸಮೀಪವಿರುವ ಧ್ಯಾನಪೀಠದ ವಿವಾದಿತ ಸ್ವಾಮೀಜಿ ನಿತ್ಯಾನಂದ ತಾನು ಯಾರನ್ನೂ ಅಕ್ರಮವಾಗಿ ಬಂಧನದಲ್ಲಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ ಬೆನ್ನಲ್ಲೇ, ಅದು ಸುಳ್ಳು ಎಂದು ಆತನ ಆಶ್ರಮದಿಂದಲೇ ಪಾರಾಗಿ ಬಂದಿರುವ ಬಾಲಕಿಯೊಬ್ಬಳು ಹೇಳಿದ್ದಾಳೆ.

‘ಆಧ್ಯಾತ್ಮಿಕ ಪ್ರಕ್ರಿಯೆ ಎಂದು ಹೇಳಿ ನಮ್ಮನ್ನು 2 ತಿಂಗಳು ಕೋಣೆಯಲ್ಲಿ ಕೂಡಿ ಹಾಕಲಾಗುತ್ತಿತ್ತು. ಕೆಟ್ಟಭಾಷೆ ಬಳಸಿ ಬೈಯಲಾಗುತ್ತಿತ್ತು. ಅಪ್ಪ- ಅಮ್ಮಂದಿರ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ಬಲವಂತ ಮಾಡಲಾಗುತ್ತಿತ್ತು. ಮಧ್ಯರಾತ್ರಿ ಎಬ್ಬಿಸಿ, ಚಿತ್ರೀಕರಣ ಮಾಡಲಾಗುತ್ತಿತ್ತು’ ಎಂದು ನಿತ್ಯಾನಂದ ವಿರುದ್ಧ ದೂರು ನೀಡಿರುವ ಬೆಂಗಳೂರು ಮೂಲದ ಜನಾರ್ದನ ಶರ್ಮಾ ಅವರ ಪುತ್ರಿ ಬಹಿರಂಗಪಡಿಸಿದ್ದಾಳೆ. ಇದರಿಂದಾಗಿ ನಿತ್ಯಾನಂದನ ಆಶ್ರಮದಲ್ಲಿರುವ ಮಕ್ಕಳು ಸುರಕ್ಷಿತವಾಗಿಲ್ಲ ಎಂಬ ಆರೋಪಕ್ಕೆ ಮತ್ತಷ್ಟುಬಲ ಬಂದಂತಾಗಿದೆ.

ನಿತ್ಯಾನಂದ ನಮ್ಮನ್ನು ಅಪಹರಿಸಿಲ್ಲ, ಅಪ್ಪನ ವಿರುದ್ಧ ಜನಾರ್ದನ ಶರ್ಮಾ ಪುತ್ರಿ ವಿಡಿಯೋ

ಜನಾರ್ದನ ಶರ್ಮಾ ಅವರಿಗೆ ನಾಲ್ವರು ಪುತ್ರಿಯರಿದ್ದು, ಇವರಲ್ಲಿ ಇಬ್ಬರು ಪುತ್ರಿಯರನ್ನು ಅವರು ಒಂದು ತಿಂಗಳ ಹಿಂದೆ ಗುಜರಾತ್‌ನ ಅಹಮದಾಬಾದ್‌ ಹೊರವಲಯದ ಮಣಿನಗರದಲ್ಲಿರುವ ನಿತ್ಯಾನಂದನ ಆಶ್ರಮದಿಂದ ಬಿಡಿಸಿಕೊಂಡು ಬಂದಿದ್ದರು. ಆದರೆ ಇನ್ನಿಬ್ಬರು ಪುತ್ರಿಯರು ನಿತ್ಯಾನಂದನ ‘ಅಕ್ರಮ’ ವಶದಲ್ಲೇ ಇದ್ದು, ಅವರನ್ನು ತಮ್ಮ ವಶಕ್ಕೆ ನೀಡುವಂತೆ ಗುಜರಾತ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಶರ್ಮಾ ಅವರು ಬಿಡಿಸಿಕೊಂಡು ಬಂದಿರುವ ಇಬ್ಬರು ಪುತ್ರಿಯರ ಪೈಕಿ 15 ವರ್ಷ ವಯಸ್ಸಿನ ಒಬ್ಬ ಪುತ್ರಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ನಿತ್ಯಾನಂದನ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾಳೆ.

'ಯಾರನ್ನೂ ಬಂಧಿಸಿಟ್ಟಿಲ್ಲ, ಸನ್ಯಾಸಿಯರ ಭೇಟಿಗೆ ಕುಟುಂಬಗಳಿಗೆ ತಡೆ ಒಡ್ಡಿಲ್ಲ'

ಶರ್ಮಾ ಪುತ್ರಿ ಹೇಳಿದ್ದೇನು?:

‘ನಾನು 2013ರ ಮೇ ತಿಂಗಳಲ್ಲಿ ಗುರುಕುಲ ಸೇರಿಕೊಂಡೆ. ನಾವು ಮೊದಮೊದಲು ಮೋಜಿನ ಚಟುವಟಿಕೆ ಮಾಡುತ್ತಿದ್ದೆವು. ಆದರೆ 2017ರಲ್ಲಿ ಪರಿಸ್ಥಿತಿ ಬದಲಾಯಿತು. ನಮ್ಮನ್ನು ಸ್ವಾಮೀಜಿ ಹೆಸರಿನಲ್ಲಿ ದೇಣಿಗೆ ಎತ್ತಲು ಕಳಿಸಲಾರಂಭಿಸಲಾಯಿತು. ಅದೇನೂ ಕೇವಲ ಸಾವಿರ ರುಪಾಯಿಗಳಲ್ಲ. ಲಕ್ಷಾಂತರ ರುಪಾಯಿಗಳಲ್ಲಿ ದೇಣಿಗೆ ಎತ್ತುವಂತೆ ಸೂಚಿಸಲಾಯಿತು. 3 ಲಕ್ಷ ರು.ನಿಂದ ಆರಂಭವಾಗಿ 8 ಕೋಟಿ ರು.ವರೆಗೆ ದೇಣಿಗೆ ಎತ್ತಿಸಲಾಯಿತು. ನಾವು ಹಣ ಅಥವಾ ಭೂಮಿಯ ರೂಪದಲ್ಲಿ ದೇಣಿಗೆ ರೂಪದಲ್ಲಿ ತೆಗೆದುಕೊಂಡು ಬರಬೇಕಿತ್ತು’ ಎಂದಿದ್ದಾಳೆ.

‘ಮಧ್ಯರಾತ್ರಿ ನಮ್ಮನ್ನು ಎಬ್ಬಿಸಲಾಗುತ್ತಿತ್ತು. ಸ್ವಾಮೀಜಿಗಾಗಿ ವಿಡಿಯೋ ಚಿತ್ರೀಕರಣದಲ್ಲಿ ಪಾಲ್ಗೊಳ್ಳಿ ಎಂದು ಬಲವಂತಪಡಿಸಲಾಗುತ್ತಿತ್ತು. ಭಾರೀ ಮೇಕಪ್‌ ಮಾಡಿ, ಮೈತುಂಬ ಬೆಳ್ಳಿ-ಬಂಗಾರದ ಆಭರಣ ತೊಡಿಸಲಾಗುತ್ತಿತ್ತು. ಸ್ವಾಮೀಜಿ ಸೂಚನೆಯ ಮೇರೆಗೇ ವಿಡಿಯೋ ಚಿತ್ರೀಕರಣ ನಡೆಯುತ್ತಿತ್ತು. ನನ್ನ ಅಕ್ಕನಿಗೆ ಈ ಜಾಲದಿಂದ ಹೊರಬರಲು ಆಗಲಿಲ್ಲ. ನಾನೇ ಇದಕ್ಕೆ ಸಾಕ್ಷಿ’ ಎಂದು ಹೇಳಿದ್ದಾಳೆ.

ಮಕ್ಕಳಿಗೆ ನಿತ್ಯಾ ಏನ್ಮಾಡ್ತಾನೆ? ವಿಡಿಯೋದಲ್ಲಿ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಶಿಷ್ಯೆ

‘ನಮ್ಮ ಅಪ್ಪ- ಅಮ್ಮಂದಿರ ಬಗ್ಗೆ ಕೆಟ್ಟದಾಗಿ ಮಾತಾಡಲು ಬಲವಂತ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ನಾನು ನಿರಾಕರಿಸಿದೆ’ ಎಂದೂ ತಿಳಿಸಿದ್ದಾಳೆ.

‘ಆಧ್ಯಾತ್ಮಿಕ ಪ್ರಕ್ರಿಯೆಯ ಭಾಗವಿದು ಎಂಬ ನೆಪ ಹೇಳಿ, ನಮ್ಮನ್ನು 2 ತಿಂಗಳುಗಟ್ಟಲೇ ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಆಶ್ರಮದಲ್ಲಿದ್ದವರು ಕೆಟ್ಟಭಾಷೆ ಬಳಸಿ ಬೈಯುತ್ತಿದ್ದರು’ ಎಂದು ಜನಾರ್ದನ ಶರ್ಮಾ ಅವರ 15 ವರ್ಷದ ಪುತ್ರಿ ಸುದ್ದಿಸಂಸ್ಥೆ ಜತೆ ಮಾತನಾಡಿ ಆರೋಪಿಸಿದ್ದಾಳೆ.

ನಿತ್ಯಾನಂದನೇ ಅಪ್ಪ- ಅಮ್ಮ ಎಂದು ಮಕ್ಕಳಿಗೆ ಹೇಳಿದ್ದರು!

2013ರಲ್ಲಿ ಬಿಡದಿ ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದ ಮಕ್ಕಳ ಕಲ್ಯಾಣ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ವರದಿ ಈಗ ಬಹಿರಂಗಗೊಂಡಿದೆ.

ಬಿಡದಿ ಪೊಲೀಸರ ಜತೆ ಭೇಟಿ ನೀಡಿದ್ದ ಸಮಿತಿ, ಆಗ ನಿತ್ಯಾಶ್ರಮದಲ್ಲಿದ್ದ 110 ಮಕ್ಕಳನ್ನು ಭೇಟಿ ಮಾಡಿ ಮಾತನಾಡಿಸಿತ್ತು. ಅಲ್ಲಿನ ಮಕ್ಕಳ ಸ್ಥಿತಿಗತಿಯ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ‘ಆಶ್ರಮದಲ್ಲಿ ವಯಸ್ಸಿಗೆ ಅನುಸಾರವಾಗಿ ಪ್ರತ್ಯೇಕ ಸೂಕ್ತ ಶಿಕ್ಷಣ ನೀಡುತ್ತಿಲ್ಲ. ವಯಸ್ಸಿನ ಭೇದವಿಲ್ಲದೇ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಕೊಡಲಾಗುತ್ತಿದೆ. ‘ನಿತ್ಯಾನಂದ ದೇವರು’ ಎಂದು ಮಕ್ಕಳನ್ನು ನಂಬಿಸಿ ಆತನ ವಿಗ್ರಹದ ಎದುರಿಗೆ ಮಕ್ಕಳಿಗೆ ಪ್ರಾರ್ಥನೆ ಸಲ್ಲಿಸಲು ಸೂಚಿಸಲಾಗುತ್ತಿತ್ತು. ನಿತ್ಯಾನಂದನೇ ನಿಮ್ಮ ಅಪ್ಪ-ಅಮ್ಮ ಎಂದು ತಿಳಿಸಲಾಗುತ್ತಿತ್ತು. ಮಕ್ಕಳು ಹೇಗೆ ವಸ್ತ್ರ ಧರಿಸಬೇಕು ಎಂಬುದನ್ನು ಆಶ್ರಮವೇ ಸೂಚಿಸುತ್ತಿತ್ತು’ ಎಂದು ವರದಿಯಲ್ಲಿದೆ.

ಕಾಣೆಯಾದ ನಿತ್ಯಾನಂದ : ಹುಡುಕಿಕೊಟ್ಟರೆ ಸೂಕ್ತ ಬಹುಮಾನ

ನಿತ್ಯಾಶ್ರಮಕ್ಕೆ ಜಾಗ ಕೊಟ್ಟ ದಿಲ್ಲಿ ಪಬ್ಲಿಕ್‌ ಶಾಲೆ ಪ್ರಾಚಾರ‍್ಯನ ಸೆರೆ

ಗುಜರಾತ್‌ನ ಅಹಮದಾಬಾದ್‌ ಹೊರವಲಯದಲ್ಲಿ ನಿತ್ಯಾನಂದ ಆಶ್ರಮಕ್ಕೆ ಅಕ್ರಮವಾಗಿ ಶಾಲೆಯ ಜಾಗ ಕೊಟ್ಟಆರೋಪದಲ್ಲಿ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ಪ್ರಾಚಾರ್ಯ ಹಿತೇಶ್‌ ಪುರಿ ಅವರನ್ನು ಬಂಧಿಸಲಾಗಿದೆ. ಶಿಕ್ಷಣಕ್ಕೆ ಮೀಸಲಾದ ಜಾಗವನ್ನು ಆಶ್ರಮಕ್ಕೆ ಹೇಗೆ ಲೀಸ್‌ ಆಧಾರದಲ್ಲಿ ಕೊಡಲಾಗಿದೆ ಎಂದು ಸಿಬಿಎಸ್‌ಇ ಗುರುವಾರವಷ್ಟೇ ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಪುರಿ ಅವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ಪ್ರತಿಕ್ರಿಯೆ ನೀಡಿ, ‘ತನಿಖೆಗಾಗಿ ಸಹಕರಿಸಲಾಗುತ್ತಿದೆ’ ಎಂದಿದೆ. ಆದರೆ ಆಶ್ರಮದ ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣದ ಬಗ್ಗೆ ‘ಇದರ ಕುರಿತು ಗುಜರಾತ್‌ ಹೈಕೋರ್ಟ್‌ ತನಿಖೆ ನಡೆಸುತ್ತಿದೆ’ ಎಂದಷ್ಟೇ ಹೇಳಿದೆ.

ನಿತ್ಯಾ ಆಶ್ರಮದ ಮೇಲೆ ದಾಳಿ: ಲ್ಯಾಪ್‌ಟಾಪ್‌ ಸೀಡಿ ವಶ

ಅಹಮದಾಬಾದ್‌ನ ನಿತ್ಯಾನಂದನ ಆಶ್ರಮದ ಮೇಲೆ ಶುಕ್ರವಾರ ಪೊಲೀಸರು ದಾಳಿ ನಡೆಸಿದ್ದು, 39 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಲಾಕರ್‌ಗಳಲ್ಲಿ ಕೆಲವು ಸಿ.ಡಿ.ಗಳು ಇದ್ದು, ಇವುಗಳ ಮೂಲಕ ರಹಸ್ಯ ಸಂಗತಿಗಳು ಹೊರಬೀಳುವ ಸಾಧ್ಯತೆ ಇದೆ ಎಂದು ‘ರಿಪಬ್ಲಿಕ್‌ ಟೀವಿ’ ವರದಿ ಮಾಡಿದೆ.

ಸಿಸಿಬಿಗೆ ಬೆಚ್ಚಿಬಿದ್ದ ಸ್ವಾಮಿ ನಿತ್ಯಾನಂದ!: ಅಷ್ಟಕ್ಕೂ ಮಾಡಿದ್ದೇನು?

ನಿತ್ಯಾನಂದ, ಬಾಲಕಿ ತತ್ವಪ್ರಿಯಾ ಈಕ್ವೆಡಾರ್‌ನಲ್ಲಿ: ಕೆನಡಾ ಶಿಕ್ಷಕಿ

ನವದೆಹಲಿ: ವಿವಾದಿತ ಧರ್ಮಗುರು ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ಈ ಹಿಂದೆ ಶಿಕ್ಷಕಿಯಾಗಿದ್ದ ಕೆನಡಾ ಮೂಲದ ಸಾರಾ ಸ್ಟೆಫಾನಿ ಲ್ಯಾಂಡ್ರಿ ಶುಕ್ರವಾರ ಮತ್ತಷ್ಟುಆರೋಪ ಮಾಡಿದ್ದಾಳೆ.

‘ನಿತ್ಯಾನಂದ ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಇದ್ದಾನೆ. ಈಗ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಜನಾರ್ದನ ಶರ್ಮಾ ಅವರ ಪುತ್ರಿ ತತ್ವಪ್ರಿಯಾ ಕೂಡ ನಿತ್ಯಾನಂದನ ಜತೆ ಈಕ್ವೆಡಾರ್‌ ಅಥವಾ ಟ್ರಿನಿಡಾಡ್‌-ಟೊಬ್ಯಾಗೋದಲ್ಲಿ ಇರುವ ಸಾಧ್ಯತೆ ಇದೆ. ನಿತ್ಯಾನಂದ ತನ್ನ ಭಕ್ತರಿಗೆ ಬ್ರೇನ್‌ವಾಷ್‌ ಮಾಡುತ್ತಾನೆ’ ಎಂದು ವಿಡಿಯೋ ಹೇಳಿಕೆಯಲ್ಲಿ ಸಾರಾ ಆಪಾದಿಸಿದ್ದಾಳೆ.

‘ನಿತ್ಯಾನಂದ ಈಕ್ವೆಡಾರ್‌ನಲ್ಲಿ ಹೊಸ ಆಶ್ರಮ ಸ್ಥಾಪಿಸುತ್ತಿದ್ದಾನೆ. ಈ ಕಾರ್ಯಕ್ಕೆ ಈತನಿಗೆ ಮೂವರು ಮಹಿಳೆಯರು ಸಾಥ್‌ ನೀಡುತ್ತಿದ್ದಾರೆ. ದಕ್ಷಿಣ ಭಾರತದ ಸಾಫ್ಟ್‌ವೇರ್‌ ತಂತ್ರಜ್ಞೆ ಗಾಯತ್ರಿ, ರಂಜಿತಾ ಮೆನನ್‌ ಹಾಗೂ ವನಿಸ್ಸಾ ಪೇಯ್‌- ಅವರೇ ಈಕ್ವೆಡಾರ್‌ನಲ್ಲಿರುವ ನಿತ್ಯಾನಂದ ಆಪ್ತೆಯರು. ಇವರ ಜತೆಗೇ ತತ್ವಪ್ರಿಯ ಇರುವ ಸಾಧ್ಯತೆ ಕೂಡ ಇದೆ. ಆಗೊಮ್ಮೆ ಈಗೊಮ್ಮೆ ತತ್ವಪ್ರಿಯಾ ಟ್ರಿನಿಡಾಡ್‌ಗೂ ಹೋಗಿ ಬರುತ್ತಾಳೆ’ ಎಂದಿದ್ದಾಳೆ ಸಾರಾ.

‘ನಿತ್ಯಾನಂದ ತನ್ನ ಇರುವಿಕೆಯ ಸ್ಥಳ ಯಾರಿಗೂ ಗೊತ್ತಾಗಬಾರದು ಎಂದು ಹಸಿರು ಬಣ್ಣದ ಪರದೆ ಇರುವ ಸ್ಥಳದ ಮುಂದೆ ಕುಳಿತು ವಿಡಿಯೋ ಹೇಳಿಕೆ ನೀಡುತ್ತಾನೆ’ ಎಂದೂ ಸಾರಾ ಆಪಾದಿಸಿದ್ದಾಳೆ.

ಬಿಡದಿ ದೇವಮಾನವನ ಅಸಲಿ ರೂಪ, ನಿತ್ಯಾನಿಗೆ ಶಿಷ್ಯನಿಂದಲೇ ಡಿಚ್ಚಿ!

ಬೆಲಿಝ್‌ನಲ್ಲಿ ನಿತ್ಯಾಗೆ ಡಾಕ್ಟರೆಟ್‌

ಮಧ್ಯ ಅಮೆರಿಕದ ಬೆಲಿಝ್‌ ದೇಶದ ಕಾಮನ್ವೆಲ್ತ್‌ ವಿವಿ 2018ರ ಮೇನಲ್ಲೇ ನಿತ್ಯಾನಂದನಿಗೆ ಗೌರವ ಡಾಕ್ಟರೆಟ್‌ ನೀಡಿತ್ತು. ಬಹುಶಃ ಈಕ್ವೆಡಾರ್‌ನಲ್ಲಿರುವ ನಿತ್ಯಾನಂದ ಅಲ್ಲಿಂದಲೇ ಬೆಲಿಝ್‌ ದೇಶಕ್ಕೆ ತೆರಳಿ ಡಾಕ್ಟರೆಟ್‌ ಸ್ವೀಕರಿಸಿರಬಹುದು ಎಂದು ‘ರಿಪಬ್ಲಿಕ್‌ ಟೀವಿ’ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ