
ಬೆಂಗಳೂರು (ಮೇ.12): ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬರುವ ರಸ್ತೆಯಲ್ಲೇ ಜಿಲೆಟಿನ್ ಕಡ್ಡಿಯಷ್ಟೇ ಅಲ್ಲದೇ ಇದೀಗ ಅದೇ ಜಾಗದಲ್ಲಿಯೇ ಟೈಮರ್ ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಜಿಲೆಟಿನ್ ಕಡ್ಡಿ ಜೊತೆಗೆ ಈ ಟೈಮರ್ ಹೇಗೆ ಬಂತು, ಪತ್ತೆ ಹಚ್ಚಿದ್ದು ಹೇಗೆ? ಇದೊಂದು ಉಗ್ರ ಸಂಚೋ? ಈ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಬಾಂಬ್ ಇಟ್ಟಿದ್ದಾರೆಂದು ಕರೆ ಮಾಡಿದ ವ್ಯಕ್ತಿಯನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದ್ದು, ತನಿಖೆ ಚುರುಕುಗೊಂಡಿದೆ ಎಂದು ಗೃಹ ಸಚಿವರು ಹೇಳಿದರು.
ಪ್ರಧಾನಿ ಮೋದಿ ಅವರ ಭೇಟಿಯ ಕೇವಲ ಎರಡು ಗಂಟೆಗಳ ಮುಂಚೆ ಈ ಜಿಲೆಟಿನ್ ಪತ್ತೆಯಾಗಿದೆ. ಈ ಪ್ರಕರಣದ ಗಂಭೀರತೆ ಅರಿತು ಎನ್ ಐ ಎ (NIA)' ಕೂಡ ತನಿಖೆಗೆ ಮುಂದಾಗಿದ್ದಾರೆ, ಇದಕ್ಕೆ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡತ್ತದೆ ಎಂದು ಭರವಸೆ ನೀಡಿದರು.
ಪ್ರಧಾನಿ ಬರೋ ಕಾರ್ಯಕ್ರಮಕ್ಕೆ ಹೈ ಲೆವಲ್ ಸೆಕ್ಯೂರಿಟಿ ಇರುತ್ತೆ. ನಾವು ಹಾಗೂ ಕೇಂದ್ರ ಸೆಕ್ಯೂರಿಟಿ ಕೊಡುತ್ತೇವೆ. ರಾಜ್ಯ ಸರ್ಕಾರಕ್ಕೂ ಸೂಚನೆ ಬಂದಿರುತ್ತದೆ. ಭದ್ರತೆ ನೀಡಿರುತ್ತೇವೆ. ಕಾರ್ಯಕ್ರಮಕ್ಕೆ ಬರುವ ಎರಡು ಗಂಟೆ ಮುಂಚೆ ಅಂದರೆ ಬೆಳಿಗ್ಗೆ 9 ಗಂಟೆಗೆ ಜಿಲೆಟಿನ್ ಕಂಡು ಹಿಡಿದಿದ್ದಾರೆ. ಇದು ಒಳ್ಳೆಯ ಕೆಲಸ. ಆದರೆ ಟೆರರಿಸಂಗೆ ಲಿಂಕ್ ಇರುವ ವಿಚಾರ ಈಗಲೇ ಹೇಳೋದಕ್ಕೆ ಬರಲ್ಲ. ತನಿಖೆ ಬಳಿಕ ನೋಡೋಣ ಎಂದರು.
ಮರು ಎಣಿಕೆ ಮಾಡಿದಾಗ 250 ಮತಗಳು ಹೆಚ್ಚು ಬರುತ್ತವೆ ಎಂದರೆ ಏನರ್ಥ? ಇನ್ನು ಶೃಂಗೇರಿ ಚುನಾವಣೆ ಅಕ್ರಮ ವಿಚಾರವಾಗಿ ಮಾತನಾಡಿದ ಗೃಹ ಸಚಿವರು, ಶೃಂಗೇರಿಯಲ್ಲಿ ಶಾಸಕ ರಾಜೇಗೌಡರ ಗೆಲುವಿನ ವಿಚಾರ ಈಗ ಹೊಸ ತಿರುವು ಪಡೆದಿದೆ. 'ಮರು ಎಣಿಕೆ ಮಾಡಿದಾಗ 250 ಮತಗಳು ಹೆಚ್ಚು ಬರುತ್ತವೆ ಎಂದರೆ ಅದರ ಅರ್ಥವೇನು? ಅಲ್ಲಿ ಕೌಂಟಿಂಗ್ ಸರಿಯಾಗಿ ನಡೆದಿಲ್ಲ ಎಂದೇ ಅರ್ಥವಲ್ಲವೇ? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಮತಯಂತ್ರಗಳ ಟ್ಯಾಂಪರಿಂಗ್ ಆಗಿರುವ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಮತ್ತು ಎಫ್‌ಎಸ್‌ಎಲ್ ತಂಡ ತನಿಖೆ ನಡೆಸುತ್ತಿದೆ. ಅಧಿಕಾರಿಗಳ ಲೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಸಿದ್ದಾರೆ.
ಜಿಬಿಎ ಚುನಾವಣೆ ವಿಳಂಬ:ಸೋಲುವ ಭೀತಿ ನಮಗಿಲ್ಲ
ಸೋಲುವ ಭೀತಿಯಿಂದ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಸಚಿವರು. ಊರಿಗೆ ಮುಂಚೆಯೇ ಕುಲಾವಿ ಹೊಲಿಸಿದರೆ ಹೇಗೆ? ಚುನಾವಣೆಗೂ ಮುನ್ನವೇ ಫಲಿತಾಂಶದ ಬಗ್ಗೆ ಮಾತನಾಡುತ್ತಿರುವವರು ಮೊದಲು ವಾಸ್ತವ ಅರಿಯಲಿ, ಎಂದು ಲೇವಡಿ ಮಾಡಿದ್ದಾರೆ.
ಜನಗಣತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಅಧಿಕಾರಿಗಳ ಕೊರತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡಳಿತಾತ್ಮಕ ತೊಂದರೆಗಳನ್ನು ಸರಿಪಡಿಸಿ ಆದಷ್ಟು ಬೇಗ ಚುನಾವಣೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ.
ನಮ್ಮ ಮೆಟ್ರೋ ಇನ್ನು ತುಮಕೂರು ತನಕ!
ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ತುಮಕೂರು ಮೆಟ್ರೋ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಕುರಿತು ಮಾತನಾಡಿದ ಸಚಿವರು, ಇನ್ನು ಒಂದು ವಾರದಲ್ಲಿ ಡಿಪಿಆರ್ (DPR) ಸಿದ್ಧವಾಗಲಿದೆ. 60-70 ಕಿ.ಮೀ ದೂರ ಮೆಟ್ರೋ ವಿಸ್ತರಣೆಯಾದರೆ ಲಕ್ಷಾಂತರ ಜನರು ತುಮಕೂರು-ಬೆಂಗಳೂರು ನಡುವೆ ಸುಲಭವಾಗಿ ಓಡಾಡಬಹುದು, ಎಂದಿದ್ದಾರೆ. ಅಲ್ಲದೆ ಮೆಟ್ರೋ ದರಗಳು ಇತರ ರಾಜ್ಯಗಳಿಗೆ ಹೋಲಿಸಿದರೆ ನ್ಯಾಯೋಚಿತವಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಉದ್ಯೋಗ ಖಾತರಿ ಯೋಜನೆಗೆ ಕೇಂದ್ರದ ಕೊಕ್ಕೆ?
ಗ್ರಾಮೀಣ ಭಾಗದ ಜೀವನಾಡಿಯಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. 'ಭ್ರಷ್ಟಾಚಾರದ ನೆಪವೊಡ್ಡಿ ಯೋಜನೆಯನ್ನೇ ಹತ್ತಿಕ್ಕುವುದು ಸರಿಯಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಿ, ಆದರೆ ಇಡೀ ಯೋಜನೆಯನ್ನು ನಿಲ್ಲಿಸುವುದು ಸರಿಯಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜುಲೈ 1 ರಿಂದ ವಿಬಿಜಿ ರಾಮ್ ಜಿ ಕಾಯ್ದೆ ಅನುಷ್ಠಾನ ಮಾಡ್ತಿದ್ದಾರೆ. ಆದರೆ ಈಗಾಗಲೇ ಉದ್ಯೋಗ ಖಾತ್ರಿ ಜಾರಿಯಲ್ಲಿತ್ತು. ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಲ್ಲಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ರು.. ಗ್ರಾಮೀಣ ಭಾಗದಲ್ಲಿ ಉದ್ಯೋಗ ಇಲ್ಲದವರಿಗೆ ಉದ್ಯೋಗ ಒದಗಿಸುವ ಯೋಜನೆ ಇದು. ಜನರ ಕೆಲಸ ಕಾರ್ಯ ಮತ್ತು ಅಭಿವೃದ್ಧಿ ಕೆಲಸ ಈ ಯೋಜನೆಯಡಿ ಆಗುತ್ತಿತ್ತು. ಆ ಯೋಜನೆಯನ್ನ ಕೇಂದ್ರ ಸರ್ಕಾರ ಬೆಂಬಲಿಸುತ್ತಲೇ ಬಂದಿತ್ತು. ಆದ್ರೆ ಈಗ ಬೆಂಬಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ಇದ್ರೆ ಆಡಳಿತಾತ್ಮಕವಾಗಿ ಸರಿಪಡಿಸೋಕೆ ಆಗಲ್ವ?
ನ್ಯಾಷನಲ್ ಪ್ರೋಗ್ರಾಂ , ಫ್ಲಾಗ್ ಶಿಪ್ ಪ್ರೋಗ್ರಾಂ ಇದು. ಎಲ್ಲ ರಾಜ್ಯಗಳಿಗೆ ಕೊಡುವ ಪ್ರೋಗ್ರಾಂ ನ್ನ ಯಾವ ದುರುದ್ದೇಶ ಇಟ್ಟುಕೊಂಡು ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ ರಾಜ್ಯದಲ್ಲಿ ನಾವೇ ಈ ಯೋಜನೆಗೆ ಸಪೋರ್ಟ್ ಮಾಡಬೇಕು ಅಂತ ಚರ್ಚಿಸಿದ್ದೇವೆ. ಅದಕ್ಕೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ. ಈ ಯೋಜನೆಯನ್ನ ನಿಲ್ಲಿಸೋಕೆ ಭ್ರಷ್ಟಾಚಾರ ಕಾರಣ ಅಂತ ಹೇಳ್ತಾರೆ. ಇದ್ರ ಜೊತೆಗೆ ದುರುಪಯೋಗ ಸೇರಿ ಹಲವು ಕಾರಣ ನೀಡಿದ್ದಾರೆ. ಆದ್ರೆ ಇದನ್ನ ಆಡಳಿತಾತ್ಮಕವಾಗಿ ಸರಿಪಡಿಸಲು ಆಗೋದಿಲ್ವ.? ಭ್ರಷ್ಟಾಚಾರ ಮಾಡಿದ್ರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಆಗಲ್ವಾ.? ಎಲ್ಲ ರಾಜ್ಯದಲ್ಲೂ ಇಂತಹ ಘಟನೆ ನಡೆದಿರಬಹುದು. ಅದನ್ನ ಆಡಳಿತಾತ್ಮಕವಾಗಿ ಸರಿಪಡಿಬೇಕೆ ಹೊರತು ಇಡೀ ಕಾರ್ಯಕ್ರಮವನ್ನ ಹತ್ತಿಕ್ಕುವ ಕೆಲಸ ಆಗಬಾರದು ಎಂದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ