ಬೆಂಗಳೂರು ನಗರದಲ್ಲಿ 1 ಲಕ್ಷ ಗಿಡಗಳ ನಾಟಿಗೆ ಸಿದ್ಧತೆ; ಪ್ರತಿ ಪಾಲಿಕೆಗೂ 30 ಸಾವಿರ ಸಸಿ ನೆಡಲು ಸೂಚನೆ!

Kannadaprabha News   | Kannada Prabha
Published : Jun 14, 2026, 10:26 AM IST
GBA preparing to plant 1 lakh trees in Bengaluru city

ಸಾರಾಂಶ

ಬೆಂಗಳೂರು ನಗರದಲ್ಲಿ ಬೀಳುವ ಮರಗಳ ಸಮಸ್ಯೆ ತಡೆಯಲು ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ. ಗುಲ್ ಮೊಹರ್, ಸ್ಪೆತೋಡಿಯಾ ಬದಲಿಗೆ ನೇರಳೆ, ಬುಗುರಿಯಂತಹ ಸುಮಾರು 1 ಲಕ್ಷ ಉಪಯುಕ್ತ ಗಿಡಗಳನ್ನು ನೆಡಲು ತೀರ್ಮಾನ, ಇವುಗಳಿಂದ ಭವಿಷ್ಯದಲ್ಲಿ ನಗರದ ನಿವಾಸಿಗಳಿಗೆ ಉಚಿತ ಹಣ್ಣು ಮತ್ತು ಔಷಧೀಯ ಲಾಭಗಳು ದೊರೆಯಲಿವೆ.

ಬೆಂಗಳೂರು (ಜೂ.14): ಇನ್ನು 10 ರಿಂದ 15 ವರ್ಷಗಳಲ್ಲಿ ನಗರದ ತುಂಬೆಲ್ಲಾ ನೇರಳೆ, ರಂಜು ಹಣ್ಣನ್ನು ಉಚಿತವಾಗಿ ನಗರದ ನಿವಾಸಿಗಳು ಸವಿಯಬಹುದು. ಇದಲ್ಲದೆ, ಆಯುರ್ವೇದದಲ್ಲಿ ಚರ್ಮದ ಖಾಯಿಲೆಗೆ ಅತ್ಯಂತ ಉಪಕಾರಿಯಾದ ಬುಗುರಿ ಮರಗಳು ತಲೆಎತ್ತಿ ಬಹು ಉಪಯೋಗವಾಗಬಲ್ಲವು. ಇಂತಹ ಮಹತ್ವದ ನಿರ್ಧಾರವನ್ನು ಜಿಬಿಎ ಅರಣ್ಯ ವಿಭಾಗ ತೆಗೆದುಕೊಂಡಿದ್ದು, ನಗರದ ತುಂಬೆಲ್ಲಾ ಸುಮಾರು 80 ಸಾವಿರದಿಂದ 1 ಲಕ್ಷ ಗಿಡ ನೆಡಲು ತೀರ್ಮಾನಿಸಿದೆ.

ಈಗಾಗಲೆ ನಗರದಲ್ಲಿ ಉರುಳಿದ ಮರಗಳಲ್ಲಿ ಗುಲ್ ಮೊಹರ್, ಸ್ಪೆತೋಡಿಯಾ, ಸುಬಾಬುಲ್ ಮರಗಳೇ ಅತಿ ಹೆಚ್ಚು ಪ್ರಮಾಣದಲ್ಲಿವೆ. ಇವುಗಳನ್ನು ರಸ್ತೆಯ ಪಕ್ಕದಲ್ಲಿ ನೆಟ್ಟಿದ್ದರಿಂದಲೇ ಧರೆಗೆ ಉರುಳಿ ಸಮಸ್ಯೆಯಾಯಿತು. ಮುಂದೆ ಈ ರೀತಿಯ ಆಗದಂತೆ ನಗರದ ನಿವಾಸಿಗಳಿಗೂ ಉಪಯೋಗಕ್ಕೆ ಬರುವ ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ. ನಗರದ ಅರಣ್ಯ ವಿಭಾಗದಿಂದ 5 ಪಾಲಿಕೆಗಳಿಗೂ ಸೂಚನೆ ನೀಡಲಾಗಿದ್ದು, ಸದ್ಯದಲ್ಲೇ ಗಿಡ ನೆಡುವ ಕಾರ್ಯಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ.

ಮಳೆಗಾಲದಲ್ಲಿ ಗಿಡ ನೆಟ್ಟರೆ ಅವು ಬೆಳೆದು ಬಲಿತುಕೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ಪ್ರತಿ ಪಾಲಿಕೆಗೂ 30 ಸಾವಿರ ಗಿಡ ನೆಡಲು ತಿಳಿಸಲಾಗಿದೆ. ಇವುಗಳನ್ನು ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಟೆಂಡರ್ ಕರೆದು ಗಿಡ ನೆಡಲು ತಿಳಿಸಲಾಗುವುದು ಎಂದು ಪಾಲಿಕೆ ಅರಣ್ಯ ವಿಭಾಗದ ಅಧಕಾರಿಗಳು ತಿಳಿಸಿದರು.

ಇನ್ನು ಮುಂದೆ ಗುಲ್ ಮೊಹರ್, ಸ್ಪೆತೋಡಿಯಾ ಗಿಡಗಳನ್ನು ರಸ್ತೆ ಪಕ್ಕದಲ್ಲಿ ನೆಡದೇ ಇರಲು ತೀರ್ಮಾನಿಸಲಾಗಿದೆ. ಇವುಗಳನ್ನು ಉದ್ಯಾನವನಗಳಿಗೆ ಸೀಮಿತಗೊಳಿಸಲಾಗಿದೆ. ರಸ್ತೆ ಪಕ್ಕದಲ್ಲಿ ನೇರಳೆ, ಬುಗುರಿ, ಹೊಂಗೆ ಗಿಡಗಳನ್ನು ನೆಡಲಾಗುವುದು. ಆಯುರ್ವೇದದಲ್ಲಿ ಚರ್ಮದ ಸಮಸ್ಯೆಗಳಿಗೆ ಅತಿ ಹೆಚ್ಚು ಬಳಸಲಾಗುವ ಬುಗುರಿ ಮರಗಳನ್ನು ಬೆಳೆಸಲಾಗುವುದು. ಈ ಗಿಡಗಳು 10 ರಿಂದ 15 ವರ್ಷಗಳ ಅವಧಿಯಲ್ಲಿ ಬೆಳೆದು ಫಲಕೊಡಲು ಆರಂಭಿಸುತ್ತವೆ. ಅಷ್ಟರ ವೇಳೆಗೆ ನಗರದ ನಿವಾಸಿಗಳು ಉಚಿತವಾಗಿ ಈ ಮರಗಳಿಂದ ಉಪಯೋಗ ಪಡೆಯಲು ಅವಕಾಶವಿದೆ.

ಶೀಘ್ರದಲ್ಲೇ ಈ ಗಿಡ ನೆಡಲು ಟೆಂಡರ್ ಕರೆಯಲಾಗುವುದು. 80 ಸಾವಿರದಿಂದ 1 ಲಕ್ಷ ಗಿಡ ನೆಡಲು ಎಲ್ಲಾ ಪಾಲಿಕೆಗಳಿಗೂ ಸೂಚಿಸಲಾಗುವುದು. ನಗರದಲ್ಲಿ ಉಪಯೋಗಕ್ಕೆ ಬರುವ ಗಿಡಗಳಾದ ನೇರಳೆ, ರಂಜು, ಹೊಂಗೆ, ಬುಗುರಿ ಗಿಡಗಳನ್ನು ನಿರ್ಧರಿಸಲಾಗಿದೆ ಎಂದು ಜಿಬಿಎ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಕನ್ನಡಪ್ರಭಕ್ಕೆ ತಿಳಿಸಿದರು.

ಬಿದ್ದ 900 ಮರ ಸಾಗಿಸಲು ಕ್ರಮ

ಈಗಾಗಲೆ ನಗರದಾದ್ಯಂತ ಉರುಳಿ ಬಿದ್ದಿರುವ 900 ಮರಗಳನ್ನು ಒಂದೆಡೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಮರಗಳ ವಿಲೇವಾರಿಗೆ ಕ್ರಮವಹಿಸಲಾಗುವುದು. ಕೆಲವು ಮರಗಳು ಅಧಿಕ ಸಮಯ ಮಳೆಯಲ್ಲಿದ್ದರೆ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ಎಷ್ಟು ಪ್ರಮಾಣದಲ್ಲಿ ಮರ ಮಾರಾಟ ಮಾಡಲು ಸಾಧ್ಯವಿದೆಯೋ ಅಷ್ಟು ಮರಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಉಳಿದ ಮರಗಳು ಡಿಪೋದಲ್ಲಿಯೇ ಉಳಿಯುತ್ತವೆ ಎಂದು ಸುದರ್ಶನ್ ತಿಳಿಸಿದರು.

ಮುಂದೆ ಬಾರದ ಹೋಟೆಲ್ ಮಾಲಿಕರು

ಅಡುಗೆ ಅನಿಲ ದೊರೆಯದೆ ಸಮಸ್ಯೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ನಗರದ ಹೋಟೆಲ್ ಮಾಲಿಕರಿಗೆ ಉರುವಲಿಗಾಗಿ ಸೌದೆ ನೀಡಲು ಮುಖ್ಯ ಕಾರ್ಯದರ್ಶಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಉರುವಲಿಗಾಗಿ ಈ ಮರಗಳನ್ನು ಬಳಸಲು ಹೋಟೆಲ್ ಮಾಲಿಕರು ಮುಂದೆ ಬರುತ್ತಿಲ್ಲ. ಸ್ಪೆತೋಡಿಯಾ, ಸುಬಾಬುಲ್ ಮರಗಳನ್ನು ಉರುವಲಿಗಾಗಿ ಬಳಸಿದರೆ ಅವುಗಳಿಂದ ಸಂಪೂರ್ಣ ಹೊಗೆ ತುಂಬಿಕೊಳ್ಳಲಿದೆ. ಇದರಿಂದ ಕಿರಿಕಿರಿ ಹೆಚ್ಚು ಎಂದು ಸುದರ್ಶನ್ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Kannada vs Hindi: ಕರ್ನಾಟಕದಲ್ಲಿ ನನ್ನ ಮೇಲೆ ದೌರ್ಜನ್ಯ ಆಗ್ತಿದೆ; ಕನ್ನಡ ಕಲಿತ ತಮಿಳು ಹುಡುಗಿ ಆರೋಪ
Karnataka News Live: ಬೆಂಗಳೂರು ನಗರದಲ್ಲಿ 1 ಲಕ್ಷ ಗಿಡಗಳ ನಾಟಿಗೆ ಸಿದ್ಧತೆ; ಪ್ರತಿ ಪಾಲಿಕೆಗೂ 30 ಸಾವಿರ ಸಸಿ ನೆಡಲು ಸೂಚನೆ!