
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಡಿ.18): ಬಿಬಿಎಂಪಿಯು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಬದಲಾಗುತ್ತಿದ್ದಂತೆಯೇ ಆರ್ಥಿಕ ಸಂಕಷ್ಟದಲ್ಲಿರುವರಿಗೆ ನೀಡಲಾಗುತ್ತಿದ್ದ ವೈದ್ಯಕೀಯ ಪರಿಹಾರ ತಡೆಹಿಡಿಯಲಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ಅರ್ಜಿ ಸಲ್ಲಿಸಿದ ರೋಗಿಗಳು ವೈದ್ಯಕೀಯ ಪರಿಹಾರಕ್ಕೆ ಪರದಾಡುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಅರ್ಜಿ ಸಲ್ಲಿಸುವುದಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಬಿಬಿಎಂಪಿಯ ಆಡಳಿತಾವಧಿಯಲ್ಲಿ ಮೇಯರ್ ವಿವೇಚನೆಯಡಿ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ರೋಗಿಗಳು ವೈದ್ಯಕೀಯ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಒಂದಿಷ್ಟು ಪರಿಹಾರವನ್ನು ನೀಡಲಾಗುತ್ತಿತ್ತು. ಅದಕ್ಕಾಗಿ ಬಜೆಟ್‌ನಲ್ಲಿಯೂ ಅನುದಾನವನ್ನು ಮೀಸಲಿಡಲಾಗುತ್ತದೆ. ಪ್ರಸಕ್ತ 2025-26ನೇ ಸಾಲಿನಲ್ಲಿ ಬಿಬಿಎಂಪಿಯ ಬಜೆಟ್ ಮಂಡನೆ ವೇಳೆ ಮೇಯರ್ ಹಾಗೂ ಸದಸ್ಯರ ವಿವೇಚನೆಯಡಿ ವೈದ್ಯಕೀಯ ಪರಿಹಾರಕ್ಕೆ ಸುಮಾರು 3 ಕೋಟಿ ರು. ಮೀಸಲಿಡಲಾಗಿತ್ತು.
ಮೇಯರ್ ಹಾಗೂ ಪಾಲಿಕೆ ಸದಸ್ಯರು ಇಲ್ಲದಿರುವುದರಿಂದ ಆಡಳಿತಾಧಿಕಾರಿಯ ಅನುಮೋದನೆ ಪಡೆದು ಪರಿಹಾರ ನೀಡಲಾಗುತ್ತಿತ್ತು. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಹೊಸ ನಗರಪಾಲಿಕೆಗಳು ರಚನೆಯಾಗುತ್ತಿದಂತೆ ವೈದ್ಯಕೀಯ ಪರಿಹಾರ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
ಅರ್ಜಿ ಸ್ವೀಕಾರವೇ ಇಲ್ಲ: ಐದು ನಗರಪಾಲಿಕೆಗಳು ರಚನೆಯಾದ ಬಳಿಕ ವೈದ್ಯಕೀಯ ಪರಿಹಾರಕ್ಕೆ ರೋಗಿಗಳು ಅರ್ಜಿ ತೆಗೆದುಕೊಂಡು ಬಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಚೇರಿ ಹಾಗೂ ನಗರ ಪಾಲಿಕೆಯ ಕಚೇರಿಗಳಲ್ಲಿ ಅರ್ಜಿಗಳನ್ನು ಸ್ವೀಕಾರವೇ ಮಾಡುತ್ತಿಲ್ಲ. ಪ್ರತಿ ದಿನ ಹತ್ತಾರು ರೋಗಿಗಳು ಅರ್ಜಿಗಳನ್ನು ಹಿಡಿದು ನಗರ ಪಾಲಿಕೆಗಳ ಕಚೇರಿ, ಜಿಬಿಎ ಕೇಂದ್ರ ಕಚೇರಿಯಲ್ಲಿ ಅಲೆದಾಟ ನಡೆಸುತ್ತಿರುವುದು ಕಂಡು ಬರುತ್ತಿದ್ದು, ಅರ್ಜಿ ಸಲ್ಲಿಸುವ ಬಗ್ಗೆ ಆರೋಗ್ಯ ವಿಭಾಗ, ಸಮಾಜ ಕಲ್ಯಾಣ ವಿಭಾಗದ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ದೂರು ಕೇಳುತ್ತಿವೆ.
ವಿಲೇವಾರಿ ಆಗದ ಅರ್ಜಿ ಪಾಲಿಕೆಗೆ ಹಸ್ತಾಂತರ: ಬಿಬಿಎಂಪಿಯ ಅವಧಿಯಲ್ಲಿ (ಸೆಪ್ಟಂಬರ್‌ಗಿಂತ ಮೊದಲು) ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಸಾಕಷ್ಟು ಅರ್ಜಿಗಳು ವಿಲೇವಾರಿ ಆಗದೇ ಉಳಿದುಕೊಂಡಿವೆ. ಮಾಹಿತಿ ಪ್ರಕಾರ, ಕೇಂದ್ರ ನಗರಪಾಲಿಕೆ ಹಾಗೂ ಪಶ್ಚಿಮ ನಗರಪಾಲಿಕೆ ವ್ಯಾಪ್ತಿಯ ತಲಾ 28 ಅರ್ಜಿ, ದಕ್ಷಿಣ ನಗರ ಪಾಲಿಕೆಯ 23, ಉತ್ತರ ನಗರಪಾಲಿಕೆಯ ಆರು ಹಾಗೂ ಪೂರ್ವ ನಗರಪಾಲಿಕೆ ವ್ಯಾಪ್ತಿಗೆ ಸೇರಿದ ಒಂದು ಅರ್ಜಿ ಸೇರಿದಂತೆ ಒಟ್ಟು 86 ಕಡತಗಳನ್ನು ಆಯಾ ನಗರ ಪಾಲಿಕೆಗಳಿಗೆ ಹಸ್ತಾಂತರ ಮಾಡಲಾಗಿದೆ. ಆಯಾ ನಗರಪಾಲಿಕೆ ಆಯುಕ್ತರು ಪರಿಹಾರ ನೀಡುವುದಕ್ಕೆ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ನಗರಪಾಲಿಕೆಗಳ ದೈನಂದಿನ ಖರ್ಚು, ವೆಚ್ಚಗಳಿಗೆ ಅನುದಾನ ಹಂಚಿಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಅದರೊಂದಿಗೆ ವೈದ್ಯಕೀಯ ಪರಿಹಾರ ನೀಡುವುದಕ್ಕೂ ಹಣ ಮೀಸಲಿಟ್ಟಲ್ಲ. ಈ ಪರಿಸ್ಥಿತಿಯಲ್ಲಿ ವೈದ್ಯಕೀಯ ಪರಿಹಾರಕ್ಕೆ ಅರ್ಜಿ ಪಡೆದುಕೊಂಡರೆ ಹಣ ನೀಡುವುದು ಹೇಗೆ ಎಂಬ ಕಾರಣಕ್ಕೆ ಅರ್ಜಿಗಳನ್ನು ಪಡೆಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ. ನಗರ ಪಾಲಿಕೆವಾರು 2026-27ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟ ಬಳಿಕ ಪರಿಹಾರ ನೀಡಬಹುದು. ಅಲ್ಲಿವರೆಗೆ ಪರಿಹಾರ ಇಲ್ಲ ಎನ್ನಲಾಗುತ್ತಿಲ್ಲ.
ಮೇಯರ್ ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ವಾರ್ಷಿಕವಾಗಿ ಬರೋಬ್ಬರಿ 8 ರಿಂದ 10 ಕೋಟಿ ರು. ವರೆಗೆ ವೈದ್ಯಕೀಯ ಪರಿಹಾರವನ್ನು ಅರ್ಹ ರೋಗಿಗಳಿಗೆ ನೀಡಲಾಗುತ್ತಿತ್ತು. ಆಡಳಿತಾಧಿಕಾರಿಯ ಅವಧಿಯಲ್ಲಿ ಪರಿಹಾರ ಬಜೆಟ್ ಅನ್ನು 3 ಕೋಟಿ ರು.ಗೆ ಇಳಿಕೆ ಮಾಡಲಾಗಿದೆ. ಪರಿಹಾರಕ್ಕೆ ಅರ್ಜಿ ಸಲ್ಲಿಸುವ ರೋಗಿಯು ಆಸ್ಪತ್ರೆಯ ಬಿಲ್ಲು ಪಡೆದು ಆರು ತಿಂಗಳ ಒಳಗೆ ಸಲ್ಲಿಸಬೇಕು. ಬಿಪಿಎಲ್ ಕಾರ್ಡ್ ಇರಬೇಕು ಸೇರಿದಂತೆ ಮೊದಲಾದ ಷರತ್ತುಗಳನ್ನು ವಿಧಿಸಲಾಗಿದೆ. ಹೀಗಾಗಿ, ಪರಿಹಾರ ಕೇಳಿಕೊಂಡು ಬರುವವರ ಸಂಖ್ಯೆ ಕಡಿಮೆ ಆಗಿದೆ. ಮತ್ತೊಂದೆಡೆ ಪ್ರಭಾವಿಗಳಿಗೆ ಮೇಲಾಧಿಕಾರಿ ಮಟ್ಟದಲ್ಲಿಯೇ ಪರಿಹಾರ ಬಿಡುಗಡೆಗೆ ಕ್ರಮವಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ