ಬೆಂಗಳೂರು: ಪ್ರತಿಭಟನಕಾರರಿಗೆ ನರಕವಾದ ಫ್ರೀಡಂಪಾರ್ಕ್!

By Kannadaprabha NewsFirst Published Jan 29, 2023, 8:57 AM IST
Highlights

ಐತಿಹಾಸಿಕ ಮಹತ್ವ ಪಡೆದುಕೊಂಡಿರುವ ಸ್ವಾತಂತ್ರ್ಯ ಉದ್ಯಾನದಲ್ಲಿ ವಿದ್ಯುತ್‌, ನೀರು ಮತ್ತು ಶೌಚಾಲಯದ ಸಮಸ್ಯೆಯಿಂದ ಬಯಲು ಬಹಿರ್ದೆಸೆ ತಾಣದಂತಾಗಿದ್ದು, ಪ್ರತಿಭಟನಾಕಾರರಿಗೆ ಜೈಲಿನ ನಿಜ ದರ್ಶನ ಮಾಡಿಸುತ್ತಿದೆ.

ಬೆಂಗಳೂರು (ಜ.29) :\ ಐತಿಹಾಸಿಕ ಮಹತ್ವ ಪಡೆದುಕೊಂಡಿರುವ ಸ್ವಾತಂತ್ರ್ಯ ಉದ್ಯಾನದಲ್ಲಿ ವಿದ್ಯುತ್‌, ನೀರು ಮತ್ತು ಶೌಚಾಲಯದ ಸಮಸ್ಯೆಯಿಂದ ಬಯಲು ಬಹಿರ್ದೆಸೆ ತಾಣದಂತಾಗಿದ್ದು, ಪ್ರತಿಭಟನಾಕಾರರಿಗೆ ಜೈಲಿನ ನಿಜ ದರ್ಶನ ಮಾಡಿಸುತ್ತಿದೆ.

ನಿತ್ಯವೂ ಹಲವಾರು ಸಂಘಟನೆಗಳ ಸಾವಿರಾರು ಮಂದಿ ಪ್ರತಿಭಟನಾಕಾರರಿಂದ ತುಂಬಿ ತುಳುಕುವ ಸ್ವಾತಂತ್ರ್ಯ ಉದ್ಯಾನ ಈಗ ಬಯಲು ಬಹಿರ್ದೆಸೆಯಿಂದಾಗಿ ದುರ್ನಾತ ಬೀರುತ್ತಿದೆ. ಹಗಲಿನಲ್ಲಿ ಮರ-ಗಿಡಗಳ ಮರೆಯಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವವರು, ಕತ್ತಲಾದೊಡನೆ ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದು ಐತಿಹಾಸಿಕ ಹಿನ್ನೆಲೆಯ ಸ್ವಾತಂತ್ರ್ಯ ಉದ್ಯಾನ ಸಾರ್ವಜನಿಕ ಶೌಚಾಲಯದಂತೆ ಆಗಿದೆಯೇನೋ ಎಂಬ ಅನುಮಾನ ಹುಟ್ಟಿಸುತ್ತಿದೆ.

 

ಸುಳ್ಳು ಜಾತಿ ಪ್ರಮಾಣ ಪತ್ರದ ವಿರುದ್ಧ ಜು.28 ರಂದು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ

ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಬೇಕೆಂಬ ಹೈಕೋರ್ಚ್‌ನ ಆದೇಶದಿಂದ ವಿವಿಧ ಸಂಘಟನೆಗಳಿಗೆ ಸೇರಿದ ಸಾವಿರಾರು ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಸುಮಾರು 22 ಎಕರೆಯಷ್ಟುವಿಶಾಲ ಜಾಗದಲ್ಲಿ ಶೇ.60ಕ್ಕೂ ಹೆಚ್ಚು ಪ್ರದೇಶದಲ್ಲಿ 8ರಿಂದ 9 ಸಾವಿರದಷ್ಟುಗಿಡ ಮರಗಳಿವೆ. ಉಳಿದ ಜಾಗದಲ್ಲಿ ಪ್ರತಿಭಟನೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರತಿಭಟನಾಕಾರರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಲೀ, ರಾಜ್ಯ ಸರ್ಕಾರವಾಗಲೀ ಹೆಚ್ಚಿನ ಗಮನ ಹರಿಸುತ್ತಿಲ್ಲ. ಇಲ್ಲಿರುವುದು 10 ಶೌಚಾಲಯಗಳ ಪೈಕಿ 5 ಪುರುಷರಿಗೆ, ಉಳಿದ 5 ಮಹಿಳೆಯರಿಗೆ ಮೀಸಲಿಡಲಾಗಿದೆ. ಕೆಲವೊಮ್ಮೆ 25 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರತಿಭಟನಾಕಾರರೇ ಇಲ್ಲಿರುತ್ತಾರೆ. ಹೀಗಿರುವಾಗ ಇರುವ ಐದು ಶೌಚಾಲಯಗಳು ಸಾಲುವುದಿಲ್ಲ. ಹೀಗಾಗಿ ಅಲ್ಲಿರುವ ಮರ-ಗಿಡಗಳು, ಉದ್ಯಾನದ ಪಕ್ಕದಲ್ಲಿ ನಿಂತಿರುವ ಕಾರು, ಬಸ್ಸು, ಲಾರಿಗಳ ಮರೆಗಳಲ್ಲೇ ಮಲ, ಮೂತ್ರ ವಿಸರ್ಜನೆಗೆ ತೊಡಗುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಕುಡಿಯುವ ನೀರಿಗೂ ಹಾಹಾಕಾರ

ಕುಡಿಯುವ ನೀರಿನ ವ್ಯವಸ್ಥೆಯನ್ನಂತೂ ಕೇಳುವವರೇ ಇಲ್ಲ. ಉದ್ಯಾನದಲ್ಲಿ ಇರುವ ನಾಲ್ಕು ಕೊಳವೆ ಬಾವಿಗಳ ಪೈಕಿ 2 ಕೊಳವೆ ಬಾವಿಗಳಲ್ಲಿ ಹನಿ ನೀರಿಲ್ಲ. ಉಳಿದ ಎರಡಲ್ಲಿ ಒಂದು ರಿಪೇರಿಯಲ್ಲಿದ್ದು, ಮೋಟರ್‌ ಬಿಚ್ಚಿಕೊಂಡು ಹೋದವರು ವಾಪಸ್‌ ತಂದು ಅಳವಡಿಸಿಲ್ಲ. ಒಂದರಲ್ಲಿ ಮಾತ್ರ ನೀರು ಬರುತ್ತಿದ್ದು, ಅದರಿಂದ ಉದ್ಯಾನದ ಗಿಡ-ಮರಗಳಿಗೆ ನೀರು ಹಾಯಿಸಲಾಗುತ್ತದೆ. ಶೌಚಾಲಯಕ್ಕೆ ಹೋಗುವವರಿಗೆಂದು ಸ್ವಾತಂತ್ರ್ಯ ಉದ್ಯಾನವನ ಉಳಿಸಿ ಹೋರಾಟ ಸಮಿತಿಯವರು ಮೂರ್ನಾಲ್ಕು ಡ್ರಮ್‌ಗಳನ್ನು ತಂದಿಟ್ಟಿದ್ದು, ಅದು ಯಾವುದಕ್ಕೂ ಸಾಲುತ್ತಿಲ್ಲ.

ಪ್ರತಿಭಟನೆಗೆ ಬಂದವರು ಕುಡಿಯಲು ನೀರು ಸಿಗದೆ ಪರಿತಪಿಸುವ ಸ್ಥಿತಿ. ಅನುಕೂಲಸ್ಥರು ಬಾಟಲಿ ನೀರುಗಳನ್ನು ತಂದಿಟ್ಟು ಕೊಂಡಿರುತ್ತಾರೆ. ನೀರು ಖಾಲಿಯಾದ ಕೂಡಲೇ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದು ಸ್ವಾತಂತ್ರ್ಯ ಉದ್ಯಾನ ತ್ಯಾಜ್ಯ ಪ್ಲಾಸ್ಟಿಕ್‌ ತೊಟ್ಟಿಯಂತಾಗುತ್ತಿದೆ.

ಕಾಡುವ ವಿದ್ಯುತ್‌ ಸಮಸ್ಯೆ

ಸಾವಿರಾರು ಜನರು ಹಗಲು, ರಾತ್ರಿ ಎನ್ನದೆ ಪ್ರತಿಭಟನೆ ನಡೆಸುವ ಸ್ವಾತಂತ್ರ್ಯ ಉದ್ಯಾನದಲ್ಲಿ ಯಾವಾಗ ವಿದ್ಯುತ್‌ ಇರುತ್ತದೆಯೋ, ಇಲ್ಲವೋ ಒಂದೂ ಗೊತ್ತಾಗಲ್ಲ. ಮಹಿಳೆಯರು, ಮಕ್ಕಳು, ವೃದ್ಧರೂ ಸಹ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಏನಾದರು ಅನಾಹುತ ಸಂಭವಿಸಿದರೆ ಜವಾಬ್ದಾರಿ ಯಾರದ್ದು? ಸ್ವಾತಂತ್ರ್ಯ ಉದ್ಯಾನದಲ್ಲಿ ವಿದ್ಯುತ್‌ ನಿರ್ವಹಣೆಗೆಂದು ಗುತ್ತಿಗೆ ಪಡೆದಿರುವ ಗುತ್ತಿಗೆದಾರ ತಿಂಗಳಿಗೆ ಮೂರ್ನಾಲ್ಕು ಲಕ್ಷ ವಿದ್ಯುತ್‌ ಬಿಲ್‌ ಪಡೆಯುತ್ತಿದ್ದಾನೆ. ಆದರೆ, ನಿರ್ವಹಣೆ ಮಾತ್ರ ಶೂನ್ಯ. ಅಗತ್ಯವಿದ್ದಾಗ ವಿದ್ಯುತ್‌ ವ್ಯವಸ್ಥೆ ಸರಿಪಡಿಸಲು ಮುಂದಾಗುವುದಿಲ್ಲ ಎಂಬ ಆರೋಪವು ಇದೆ.

ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಬಂಧನಕ್ಕೆ ಆಕ್ರೋಶ

ಇಷ್ಟೆಲ್ಲಾ ಸಮಸ್ಯೆಗಳ ನಡುವೆ, ಕುಡುಕರದ್ದು ಇನ್ನೊಂದು ಕಾಟ. ಕತ್ತಲಾಗುತ್ತಿದ್ದಂತೆ ಸ್ವಾತಂತ್ರ್ಯ ಉದ್ಯಾನವನ್ನೇ ಕುಡುಕರ ಅಡ್ಡೆ ಮಾಡಿಕೊಳ್ಳುತ್ತಿದ್ದಾರೆ. ಅನೈತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ ಎಂಬ ದೂರುಗಳು ಕೇಳಿಬರುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು. ಮೂಲಸೌಕರ್ಯ ಒದಗಿಸಿ, ಮೊಬೈಲ್‌ ಶೌಚಾಲಯಗಳ ವ್ಯವಸ್ಥೆಯನ್ನಾದರೂ ಮಾಡಬೇಕು. ಕುಡಿಯುವ ನೀರಿನ ಸೌಕರ್ಯ ಒದಗಿಸುವ ಜರೂರತ್ತು ಇದೆ ಎಂದು ಹಲವರು ಆಗ್ರಹಿಸಿದ್ದಾರೆ.

ಇರುವ ಐದು ಶೌಚಾಲಯಗಳು ಯಾವುದಕ್ಕೂ ಸಾಲುತ್ತಿಲ್ಲ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಜೊತೆಗೆ ಅನಾರೋಗ್ಯಕ್ಕೆ ತುತ್ತಾಗುವ ಮಹಿಳೆಯರಿಗೆ ಪ್ರಥಮ ಚಿಕಿತ್ಸೆ ವ್ಯವಸ್ಥೆಯೂ ಇಲ್ಲ. ಸುತ್ತಮುತ್ತ ಪೇ ಆ್ಯಂಡ್‌ ಯೂಸ್‌ ಶೌಚಾಲಯಗಳಿದ್ದರೂ ಮಹಿಳೆಯರಿಂದ ತಲಾ .10 ವಸೂಲಿ ಮಾಡುತ್ತಿದ್ದಾರೆ.

-ರಶ್ಮಿ, ತೇಜಸ್ವಿನಿ, ಆಲೂರು, ಹಾಸನ

ಉದ್ಯಾನದಲ್ಲಿ ಮೂಲಸೌಕರ್ಯ ಸಮಸ್ಯೆ ತುಂಬಾ ಇದೆ. ಬಿಬಿಎಂಪಿ ಸೂಕ್ತ ಕ್ರಮಕೈಗೊಂಡಿಲ್ಲ. ಸರ್ಕಾರ ಕೂಡಲೇ ಮೂಲಭೂತ ಸೌಕರ್ಯ ಒದಗಿಸಿ ಪ್ರತಿಭಟನಾಕಾರರಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಬೇಕು.

-ವರಲಕ್ಷ್ಮಿ, ಸಿಐಟಿಯು.

ಸ್ವಾತಂತ್ರ್ಯ ಉದ್ಯಾನಕ್ಕೆ ಮೂಲಸೌಕರ್ಯ ಒದಗಿಸುವಂತೆ ಈಗಾಗಲೇ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಪಾಲಿಕೆ ಮುಖ್ಯ ಆಯುಕ್ತರು ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ನಿತ್ಯವೂ ಪ್ರತಿಭಟನಾಕಾರರು ಕುಡಿಯುವ ನೀರು, ಶೌಚಾಲಯಕ್ಕಾಗಿ ಪರಿದಾಡುವ ಪರಿಸ್ಥಿತಿ ಇದೆ.

-ಗಂಡಸಿ ಸದಾನಂದ ಸ್ವಾಮಿ, ಸ್ವಾತಂತ್ರ್ಯ ಉದ್ಯಾನವನ ಉಳಿಸಿ ಹೋರಾಟ ಸಮಿತ

click me!