
ಬೆಂಗಳೂರು (ಆ.2): ಆಗಸ್ಟ್ 5, 2025ರಂದು ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಅಕ್ರಮ ಮತ್ತು ಬಿಜೆಪಿಯ ಅಧಿಕಾರ ದುರುಪಯೋಗದ ವಿರುದ್ಧ ನಡೆಸಲಿರುವ ಪ್ರತಿಭಟನೆಗೆ ಅಡ್ಡಿಯಾಗುವ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಹತ್ತಾರು ವರ್ಷಗಳಿಂದ ಬೆಳೆಸಿದ್ದ ಮರಗಳನ್ನು ಕಡಿದು ಹಾಕಿದ ಗಂಭೀರ ಆರೋಪ ಕೇಳಿಬಂದಿದೆ.
ಉಪ್ಪಾರ್‌ಪೇಟೆ ಪೊಲೀಸ್ ಠಾಣೆಯ ಮಹದೇವಸ್ವಾಮಿ ಸೂಚನೆಯಂತೆ ಮರಗಳನ್ನು ಕಡಿಯಲಾಗಿದ್ದು, ಅವರ ಸಮ್ಮುಖದಲ್ಲೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಘಟನೆಯ ವಿವರ:
ರಾಹುಲ್ ಗಾಂಧಿಯವರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಿದ್ದಾರೆ. ಆದರೆ, ಪ್ರತಿಭಟನೆಗೆ ಮರಗಳು ಅಡ್ಡಿಯಾಗಲಿವೆ ಎಂಬ ನೆಪವೊಡ್ಡಿ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಪೊಲೀಸರ ಸಮ್ಮುಖದಲ್ಲೇ ಮರಗಳನ್ನು ಕಡಿದು ನಾಶಪಡಿಸಿದ್ದಾರೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ನಡೆದರೂ ಈ ಕೃತ್ಯಕ್ಕೆ ಬಿಬಿಎಂಪಿಯ ಡೆಪ್ಯೂಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್ (DCF) ಏನು ಕ್ರಮ ಕೈಗೊಳ್ಳಲಿದ್ದಾರೆ? ಮಹದೇವಸ್ವಾಮಿ ವಿರುದ್ಧ ಬಿಬಿಎಂಪಿ ದೂರು ಕೊಡ್ತಾರಾ? ಅಥವಾ ಜಾಣ ಕುರುಡರಂತೆ ಸುಮ್ಮನಾಗ್ತಾರಾ? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಪ್ರತಿಭಟನೆಗೆ ಬಿಜೆಪಿ ತಿರುಗೇಟು:
ಚುನಾವಣೆಯಲ್ಲಿ ಹೀನಾಯ ಸೋಲನ್ನು ಮರೆಮಾಚಲು ರಾಹುಲ್ ಗಾಂಧಿ ಇಂತಹ ಹತಾಶ ಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ. ಕಳೆದ ಚುನಾವಣೆಯಲ್ಲಿ ವಂಶಪಾರಂಪರ್ಯಕ್ಕಿಂತ ದೇಶದ ಅಭಿವೃದ್ಧಿಗೆ ಜನರು ಮತ ಚಲಾಯಿಸಿದ್ದಾರೆ. ಚುನಾವಣಾ ಅಕ್ರಮದ ಆರೋಪಗಳಿಗೆ 100% ಪುರಾವೆ ಇದ್ದರೆ, ಬೀದಿ ನಾಟಕದ ಬದಲು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ.
ಮರಗಳ ಮಾರಣಹೋಮಕ್ಕೆ ಬೆಂಗಳೂರಿಗರು ಕಿಡಿ:
ಹತ್ತಾರು ವರ್ಷಗಳಿಂದ ಬೆಳೆಸಿದ್ದ ಮರಗಳನ್ನು ಕಡಿದಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ಬಿಬಿಎಂಪಿ ಮತ್ತು ಸಂಬಂಧಪಟ್ಟ ಇಲಾಖೆಗಳು ಯಾವ ಕಾನೂನಾತ್ಮಕ ಕ್ರಮ ಕೈಗೊಳ್ಳಲಿವೆ ಎಂಬುದು ಕಾದುನೋಡಬೇಕಾಗಿದೆ. ಫ್ರೀಡಂ ಪಾರ್ಕ್‌ನ ಈ ಘಟನೆ ರಾಜಕೀಯ ಮತ್ತು ಪರಿಸರ ಸಂಬಂಧಿತ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ