ಸಚಿವ ನಿರಾಣಿ ಮಹತ್ವದ ಘೋಷಣೆ: ಉಚಿತವಾಗಿ ಸಿಗಲಿದೆ ಮರಳು

By Suvarna NewsFirst Published Mar 19, 2021, 5:02 PM IST
Highlights

 ಮನೆ ನಿರ್ಮಿಸುವವರಿಗಾಗಿ ಉಚಿತ ಮರಳು ನೀಡುವ ನೀತಿ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲಿ ಅದನ್ನು ಪ್ರಕಟಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಬೆಂಗಳೂರು, (ಮಾ.19): ರಾಜ್ಯದಲ್ಲಿ ಬಡವರು ಹಾಗೂ ಜನಸಾಮಾನ್ಯರು 10 ಲಕ್ಷ ರೂ.ದೊಳಗೆ ಮನೆ ಕಟ್ಟಲು ಅನುಕೂಲವಾಗುವಂತೆ ಶೀಘ್ರದಲ್ಲೇ ನೂತನ ಉಚಿತ ಮರಳು ನೀತಿಯನ್ನು ಜಾರಿಗೆ ತರಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಶುಕ್ರವಾರ ವಿಧಾನಸಭೆಯಲ್ಲಿ ಘೋಷಿಸಿದರು. 

ಪ್ರಶ್ನೋತ್ತರ ಅವಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮರಳು ಸಮಸೆಯನ್ನು ನೀಗಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆಶ್ರಯ ಮನೆ ಹಾಗೂ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ 10 ಲಕ್ಷದೊಳಗಿನ ಮನೆಗೆ 100ರಿಂದ 200 ರೂ. ಟನ್ ದರದಲ್ಲಿ ಪೂರೈಕೆ ಮಾಡುವ ಉಚಿತ ಮರಳು ನೀತಿಯನ್ನು ಜಾರಿಗೆ ಮಾಡುತ್ತೇವೆ ಎಂದು ಪ್ರಕಟಿಸಿದರು. 

ಶೀಘ್ರ ಹೊಸ ಮರಳು ನೀತಿ ಜಾರಿ: ಸಚಿವ ಮುರುಗೇಶ ನಿರಾಣಿ

ಬಡವರು ಹೆಚ್ಚಿನ ಹಣ ಭರಿಸಿ ಮನೆ ಕಟ್ಟಲು ಮರಳು ಖರೀದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸರ್ಕಾರದಿಂದಲೇ ಉಚಿತವಾಗಿ ಮರಳು ಪೂರೈಕೆ ಮಾಡುವ ಯೋಜನೆ ಇದೆ. ಗ್ರಾಮಪಂಚಾಯ್ತಿಯಿಂದ ಹಿಡಿದು ನಗರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡುವವರೆಗೆ ಇದು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. 

ಈಗಾಗಲೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ  ಹಳ್ಳ, ತೊರೆ ಮತ್ತಿತರ ಕಡೆ ಎತ್ತಿನಗಾಡಿ ಮೂಲಕ ಮರಳು ಸಾಗಿಸಲು ಅವಕಾಶ ಕಲ್ಪಿಸಿದ್ದೇವೆ. ಪ್ರಸ್ತುತ ರಾಜ್ಯದ 193 ಮರಳು ನಿಕ್ಷೇಪ ಪ್ರದೇಶಗಳನ್ನು ಗುರುತಿಸಿ 87 ಬ್ಲಾಕ್‍ಗಳಿಗೆ  ಅಸೂಚನೆ ಹೊರಡಿಸಲಾಗಿದೆ ಎಂದರು.

1,2 ಮತ್ತು 3ನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾಪಂ ಮೂಲಕ ವಿಲೇವಾರಿ ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ 4,5 ಮತ್ತು 6ನೇ ಶ್ರೇಣಿಯ ಹೊಳೆ, ನದಿ, ಅಣೆಕಟ್ಟು, ಜಲಾಶಯ, ಬ್ಯಾರೇಜ್ ಹಾಗೂ ಅಣೆಕಟ್ಟಿನ ಇನ್ನೀರಿನ ಪ್ರದೇಶಗಳಲ್ಲಿ ಮರಳು ತೆಗೆಯಲು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಮತ್ತು ಹಟ್ಟಿ ಚಿನ್ನದ ಗಣಿಗೆ ವಹಿಸಲಾಗಿದೆ ಎಂದರು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ 46 ಹಾಗೂ ಹಟ್ಟಿ ಚಿನ್ನದ ಗಣಿಶ್ರೇಣಿಯ 43 ಮರಳು ಬ್ಲಾಕ್‍ಗಳಲ್ಲಿ  ಗಣರಿಕೆ ನಡೆಸಲು ಆಯಾ ಜಿಲ್ಲಾ ಮರಳು ಸಮಿತಿಗಳಿಂದ ಅಸೂಚನೆ ಹೊರಡಿಸಲಾಗಿದೆ.

click me!