ಏಡ್ಸ್‌ ಪೀಡಿತರಿಗೆ ಉಚಿತ ಔಷಧಿ : ಸರ್ಕಾರದ ಮಹತ್ವದ ಘೋಷಣೆ

By Kannadaprabha News  |  First Published Dec 2, 2020, 7:46 AM IST

ರಾಜ್ಯದಲ್ಲಿ ಏಡ್ಸ್ ಪೀಡಿತರಿಗೆ ಉಚಿತ ಔಷಧಿ ನೀಡಲು ಕರ್ನಾಟಕ ಸರ್ಕಾರ ಮಹತ್ವದ  ಘೋಷಣೆಯೊಂದನ್ನು ಹೊರಡಿಸಿದೆ. 


ಬೆಂಗಳೂರು (ಡಿ.02):  ರಾಜ್ಯದಲ್ಲಿರುವ ಎಲ್ಲ ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ರು.ವರೆಗೂ ಉಚಿತ ಔಷಧಿ ನೀಡಲು ಆರೋಗ್ಯ ಕೇಂದ್ರಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ವಿಶ್ವ ಏಡ್ಸ್‌ ದಿನದ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿ ಸಹಯೋಗದಲ್ಲಿ ಮಂಗಳವಾರ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಐದು ಕೋಟಿ ರು. ಹೆಚ್ಚುವರಿ ಅನುದಾನ ಲಭ್ಯವಿದೆ. ಹೀಗಾಗಿ ಬಿಪಿಎಲ್‌ ಹಾಗೂ ಎಪಿಎಲ್‌ ಸೇರಿದಂತೆ ಎಲ್ಲ ವರ್ಗದ ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ರು. ವರೆಗೂ ಉಚಿತ ಔಷಧಿ ನೀಡಲು ಸೂಚಿಸಲಾಗಿದೆ ಎಂದರು.

Tap to resize

Latest Videos

ಪ್ರಸ್ತುತ ರಾಜ್ಯದಲ್ಲಿ 1.68 ಲಕ್ಷ ಏಡ್ಸ್‌ ರೋಗಿಗಳು ಎಆರ್‌ಟಿ ಸೆಂಟರ್‌ಗಳಲ್ಲಿ ನೋಂದಣಿಯಾಗಿದ್ದು, ಚಿಕಿತ್ಸೆ ಮತ್ತು ಔಷಧಿ ಪಡೆಯುತ್ತಿದ್ದಾರೆ. ಇನ್ನೂ ಒಂದು ಲಕ್ಷ ಎಚ್‌ಐವಿ ಸೋಂಕಿತರು ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದು, ಅಂಥವರನ್ನು ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸುವ ಅಗತ್ಯವಿದೆ ಎಂದರು.

ಕೊರೋನಾ ಔಷಧ ಕಂಡು ಹಿಡಿಯುವ ಪೈಪೋಟಿ ಮಧ್ಯೆ ಸಿಕ್ತು ಏಡ್ಸ್‌ಗೆ ಮದ್ದು! ...

ರಾಜ್ಯದಲ್ಲಿ ಈವರೆಗೆ 280 ಮಂದಿ ಏಡ್ಸ್‌ ರೋಗಿಗಳಿಗೆ ಕೊರೋನಾ ಸೋಂಕು ತಗುಲಿದ್ದು, ಈ ಪೈಕಿ ಐದು ಮಂದಿ ಮಾತ್ರ ಮೃತಪಟ್ಟಿದ್ದಾರೆ. ಕೊರೋನಾ ನಡುವೆ ಏಡ್ಸ್‌ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮೂರು ತಿಂಗಳ ಔಷಧಿಗಳನ್ನು ರೋಗಿಗಳ ಮನೆಗೆ ಪೂರೈಸಲಾಗಿತ್ತು ಎಂದರು.

ಇದೇ ವೇಳೆ ರಾಜ್ಯದಲ್ಲಿ ಏಡ್ಸ್‌ ನಿಯಂತ್ರಣದಲ್ಲಿ ಉತ್ತಮ ಕಾರ್ಯಾಚರಣೆ ನಡೆಸಿದ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಮತ್ತು ಏಡ್ಸ್‌ ನಿಯಂತ್ರಣ ಸೊಸೈಟಿ ಸಿಬ್ಬಂದಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಶಾಸಕ ಡಾ.ಉದಯ್‌ ಬಿ.ಗರುಡಾಚಾರ್‌, ಆರೋಗ್ಯ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜಾವೇದ್‌ ಅಖ್ತರ್‌, ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

10 ವರ್ಷದೊಳಗೆ ಏಡ್ಸ್‌ ನಿರ್ಮೂಲನೆ ಗುರಿ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದಲ್ಲಿ 2030 ವೇಳೆ ಏಡ್ಸ್‌ ನಿರ್ಮೂಲನೆ ಮಾಡಬೇಕು ಎಂಬ ಸಂದೇಶ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಜತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.
  
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿ ಸಹಯೋಗದಲ್ಲಿ ಮಂಗಳವಾರ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮವನ್ನು ​​ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಉದ್ಘಾಟಿಸಿದರು. ಶಾಸಕ ಉದಯ್‌ ಬಿ.ಗರುಡಾಚಾರ್‌, ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

click me!