ಸಚಿವ ಶ್ರೀರಾಮುಲು ಹೆಸರಿನಲ್ಲಿ ವಂಚನೆ: ಮಾಜಿ ಆಪ್ತ ಅರೆಸ್ಟ್‌!

By Kannadaprabha NewsFirst Published Aug 31, 2021, 7:28 AM IST
Highlights

* ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ 5 ಲಕ್ಷ ರು. ಮೋಸ

* ಸಚಿವ ಶ್ರೀರಾಮುಲು ಹೆಸರಿನಲ್ಲಿ ವಂಚನೆ: ಮಾಜಿ ಆಪ್ತ ಬಂಧನ

ಬೆಂಗಳೂರು(ಆ.31): ಸಚಿವ ಶ್ರೀರಾಮುಲು ಅವರ ಸಹೋದರ ಸಂಬಂಧಿ ಎಂದು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿದ ಆರೋಪದಡಿ ರಾಮುಲು ಅವರ ಮಾಜಿ ಆಪ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಕೊಡಿಗೇಹಳ್ಳಿ ನಿವಾಸಿ ಧರ್ಮತೇಜ್‌ ಎಂಬಾತ ಬಂಧಿತ. ಪ್ರದೀಪ್‌ ಎಂಬುವರು ಕೊಟ್ಟದೂರಿನ ಮೇರೆಗೆ ಆರೋಪಿಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಮೂರು ದಿನಗಳ ಕಾಲ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

5 ಲಕ್ಷ ರು. ಪಡೆದು ವಂಚನೆ:

ಧರ್ಮತೇಜ್‌ ನನಗೆ ಹಲವು ವರ್ಷಗಳಿಂದ ಸ್ನೇಹಿತನಾಗಿದ್ದು, ತನ್ನನ್ನು ಶ್ರೀರಾಮುಲು ಅವರ ಸಹೋದರ ಸಂಬಂಧಿ ಎಂದು ಪರಿಚಯಿಸಿಕೊಂಡಿದ್ದ. ನನಗೆ ಸಚಿವರ ಆಪ್ತ ಸಹಾಯಕ ಸೇರಿದಂತೆ ಎಲ್ಲರೂ ಬಹಳ ಆಪ್ತರಾಗಿದ್ದಾರೆ ಎಂದು ಹೇಳಿಕೊಂಡಿದ್ದು, ಸರ್ಕಾರಿ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದ. 2021ರ ಜನವರಿಯಲ್ಲಿ ಧರ್ಮತೇಜ ಕರೆ ಮಾಡಿ, ಸಹಕಾರ ನಗರದ ಮುಖ್ಯರಸ್ತೆ ಬಳಿ ಕರೆಸಿಕೊಂಡಿದ್ದ. ಈ ವೇಳೆ ವಿಧಾನಸೌಧದಲ್ಲಿ ಸರ್ಕಾರಿ ಕೆಲಸ ಕೊಡಿಸಲಾಗುವುದು ಎಂದು ಹೇಳಿ ಐದು ಲಕ್ಷ ರು. ಪಡೆದುಕೊಂಡಿದ್ದ ಎಂದು ಪ್ರದೀಪ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಚಿವರೊಂದಿಗೆ ಓಡಾಡುವುದನ್ನು ನಂಬಿದ ನಾನು ಧರ್ಮತೇಜ್‌ಗೆ ಐದು ಲಕ್ಷ ರು. ನೀಡಿದ್ದೆ. ಹಲವು ತಿಂಗಳು ಕಳೆದರೂ ಯಾವುದೇ ರೀತಿಯ ಕೆಲಸ ಕೊಡಿಸಲಿಲ್ಲ. ಹೀಗಾಗಿ ನನ್ನ ಹಣ ವಾಪಸ್‌ ನೀಡುವಂತೆ ಆರೋಪಿಗೆ ಕೇಳಿಕೊಂಡಿದ್ದೆ. ಇದಕ್ಕೆ ಆರೋಪಿ ಸ್ವಲ್ಪ ದಿನ ಅವಕಾಶ ಕೊಡುವಂತೆ ಕೇಳಿಕೊಂಡಿದ್ದ. ಕೆಲಸ ಕೊಡಿಸುವುದಿಲ್ಲ ಎಂದು ಗೊತ್ತಾದಾಗ ನಾನು ಗಟ್ಟಿಧ್ವನಿಯಿಂದ ಹಣ ವಾಪಸ್‌ ನೀಡುವಂತೆ ಆತನ ಬಳಿ ಕೇಳಿದ್ದೆ. ಈ ವೇಳೆ ಆರೋಪಿ ‘ಸಚಿವರ ಸೋದರ ಸಂಬಂಧಿ ನಾನು, ನಿನಗೆ ಏನು ಬೇಕಾದರೂ ಮಾಡಬಲ್ಲೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾರೆ.

‘ನೀನು ನನಗೆ ಹಣ ನೀಡಿರುವುದಕ್ಕೆ ಯಾವುದೇ ಸಾಕ್ಷಿ ಆಧಾರಗಳಿಲ್ಲ. ಇದೇ ರೀತಿ ಹಣ ವಾಪಸ್‌ ನೀಡುವಂತೆ ಕೇಳಿದರೆ ನಿನ್ನ ವಿರುದ್ಧವೇ ದೂರು ದಾಖಲಿಸುತ್ತೇನೆ. ಅಲ್ಲದೆ, ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಸಚಿವರ ಹೆಸರು ಹೇಳಿಕೊಂಡು ವಂಚನೆ ಮಾಡಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರದೀಪ್‌ ದೂರು ನೀಡಿದ್ದಾರೆ. ಆರೋಪಿ ಇದೇ ರೀತಿ ಹಲವು ಮಂದಿಗೆ ಸಚಿವರ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾನೆ ಎಂಬ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಶ್ರೀರಾಮುಲು ಅವರೊಂದಿಗೆ ಓಡಾಡಿಕೊಂಡಿದ್ದ ಎಂಬ ಬಗ್ಗೆ ಮಾಹಿತಿ ಇದೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಪ್ರಕರಣಕ್ಕೂ ಸಚಿವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

click me!