ಕೌಟುಂಬಿಕ ಸಮಸ್ಯೆಯಲ್ಲಿ ರಾಜಕೀಯ ಷಡ್ಯಂತ್ರ ,ಮಗನ ವಿರುದ್ಧದ ಆರೋಪಕ್ಕೆ ಪ್ರಭು ಚವಾಣ್ ಸ್ಪಷ್ಟನೆ

Published : Jul 18, 2025, 05:32 PM IST
prabhu chauhan

ಸಾರಾಂಶ

ಮಾಜಿ ಸಚಿವ ಪ್ರಭು ಚವ್ಹಾಣ್ ಅವರ ಪುತ್ರನ ಮೇಲೆ ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಇದನ್ನು ಚವ್ಹಾಣ್ ರಾಜಕೀಯ ಷಡ್ಯಂತ್ರ ಎಂದಿದ್ದಾರೆ. ನಿಶ್ಚಿತಾರ್ಥ ಮುರಿದುಬಿದ್ದ ನಂತರ ಯುವತಿಯ ಕುಟುಂಬವನ್ನು ಬಳಸಿಕೊಂಡು ತಮ್ಮನ್ನು ರಾಜಕೀಯವಾಗಿ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬೀದರ್ : ಬೀದರ್ ಯುವತಿಯೊಬ್ಬರು ನನ್ನ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವುದು ವಿರೋಧಿಗಳ ರಾಜಕೀಯ ಷಡ್ಯಂತ್ರವಾಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನನ್ನ ಮಗನೊಂದಿಗೆ ವರ್ಷದ ಹಿಂದೆ ನಿಶ್ಚಿತಾರ್ಥವಾಗಿರುವುದು ನಿಜ. ನಂತರ ಯುವತಿಯ ಪೋಷಕರು ಮತ್ತು ಸಮಾಜದ ಪಂಚರ ಸಮ್ಮುಖದಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಸಂಬಂಧ ಮುರಿದು ಬಿದ್ದಿದೆ. ಯಾವ ಕಾರಣಕ್ಕಾಗಿ ಸಂಬಂಧ ಮುರಿದು ಬಿತ್ತು ಎನ್ನುವುದನ್ನು ಯುವತಿಯ ಭವಿಷ್ಯದ ಹಿತದೃಷ್ಟಿಯಿಂದ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವುದಿಲ್ಲ. ಕಾರಣಗಳು ಮತ್ತು ಸಾಕ್ಷ್ಯವನ್ನು ಈಗಾಗಲೇ ಯುವತಿಯ ಪಾಲಕರಿಗೆ ಮನವರಿಕೆ ಮಾಡಿ ಕೊಡಲಾಗಿದೆ ಎಂದಿದ್ದಾರೆ.

ನಾಲ್ಕು ಗೋಡೆಗಳ ಮಧ್ಯ ಬಗೆಹರಿಯುವಂತಹ, ಬಗೆಹರಿಯಬೇಕಿದ್ದ ಕೌಟುಂಬಿಕ ಸಮಸ್ಯೆಯನ್ನು ವ್ಯವಸ್ಥಿತವಾಗಿ ಷಡ್ಯಂತ್ರದ ರೂಪ ನೀಡಿ ಆ ಕುಟುಂಬವನ್ನು ಬಳಕೆ ಮಾಡಿಕೊಂಡು ಸಮಸ್ಯೆ ಸೃಷ್ಟಿಸುತ್ತಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ಮೂರನೇಯವರು ಈ ಕುಟುಂಬವನ್ನು ಬಳಕೆ ಮಾಡಿಕೊಂಡು ಅವರ ಕುಟುಂಬಕ್ಕೆ ಮಸಿ ಬಳಿಯುವುದರ ಮೂಲಕ ನಮ್ಮ ಕುಟುಂಬದ ಗೌರವಕ್ಕೆ ನನ್ನ ರಾಜಕೀಯ ಜೀವನಕ್ಕೆ ಧಕ್ಕೆ ತರುವ ಹುನ್ನಾರ ನಡೆಸಿದ್ದಾರೆ.

ನನ್ನನ್ನು ತೇಜೋವಧೆ ಮಾಡಬೇಕು ಮತ್ತು ಮಾನಸಿಕವಾಗಿ ಕುಗ್ಗಿಸಬೇಕೆಂಬ ಉದ್ದೇಶದಿಂದ ನನ್ನ ವಿರೋಧಿ ತಂಡವು ಸುಮಾರು 10 ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಿದೆ. ಜುಲೈ 6ರಂದು ಕ್ಷೇತ್ರದ ಮಹಾಜನತೆ ನನ್ನ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಇದನ್ನು ಅರಿತ ವಿರೋಧಿಗಳು ಯುವತಿಯ ಮನೆಗೆ ಹೋಗಿ ಅವರೆಲ್ಲ ನನ್ನ ಮನೆಗೆ ಬಂದು ಗಲಾಟೆ ಮಾಡುವಂತೆ ಮತ್ತು ದೂರುಗಳನ್ನು ನೀಡುವಂತೆ ಪ್ರಚೋದನೆ ನೀಡಿದ್ದರು.

ರಾಜಕೀಯ ಏಳಿಗೆ ಸಹಿಸದ ವಿರೋಧಿಗಳು ದುರುದ್ದೇಶದಿಂದ ನನ್ನ ಕೌಟುಂಬಿಕ ವಿಚಾರಗಳನ್ನು ಸಾರ್ವಜನಿಕ ಗೊಳಿಸುವ ಪ್ರಯತ್ನ‌ ಪದೆ ಪದೇ ಮಾಡುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯತ್ನಿಸಿದ್ದರು. ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅಡ್ಡಿಪಡಿಸಲು ಹರಸಾಹಸ ಮಾಡಿದ್ದರು. ಈಗ ಮಹಿಳಾ ಆಯೋಗಕ್ಕೆ ದೂರು ನೀಡುವ ಮೂಲಕ ಮತ್ತೊಮ್ಮೆ ಕಿರುಕುಳ ನೀಡುವ ಪ್ರಯತ್ನ‌ ಮಾಡಿದ್ದಾರೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದೇ ಈ ರೀತಿಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದಿದ್ದಾರೆ.

ಅದೆಷ್ಟೋ ಹೆಣ್ಣು ಮಕ್ಕಳ ಮದುವೆಯನ್ನು ಮುಂದೆ ನಿಂತು ಮಾಡುವ ನಾನು ಯಾರೊಬ್ಬರ ಕೇಡು ಬಯಸುವುದಿಲ್ಲ. ಈ ಯುವತಿ ಕೂಡ ನನಗೆ ಮಗಳಿದ್ದಂತೆ. ನನ್ನ ಬಗ್ಗೆ ಕ್ಷೇತ್ರ ಮತ್ತು ಜಿಲ್ಲೆಯ ಜನತೆಗೆ ಸರಿಯಾಗಿ ಗೊತ್ತಿದೆ ಎಂದು ಹೇಳಿದ್ದಾರೆ. ಮಹಿಳಾ ಆಯೋಗದಿಂದ ನೋಟಿಸ್‌ ಬಂದಲ್ಲಿ ಅದಕ್ಕೆ ಸಾಕ್ಷಿ ಸಮೇತವಾಗಿ ಮಾಹಿತಿಯನ್ನು ಆಯೋಗಕ್ಕೆ ಒದಗಿಸಲಾಗುತ್ತದೆ. ಯುವತಿಯ ಮತ್ತು ಅವರ ಹಿಂದಿರುವ ಕಾಣದ ಕೈಗಳ ಎಲ್ಲ ಆರೋಪಗಳಿಗೂ ಕಾನೂನಾತ್ಮಕವಾಗಿಯೇ ಉತ್ತರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆ ಹಿನ್ನೆಲೆ:

ಮಾಜಿ ಸಚಿವ ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ದೈಹಿಕ ಸಂಪರ್ಕ ನಡೆಸಿ ಮೋಸ ಮಾಡಿದ್ದಾರೆಂದು  ಸಂತ್ರಸ್ತ ಯುವತಿ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಇದೀಗ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಎರಡೂ ಕುಟುಂಬದ ಸಮ್ಮುಖದಲ್ಲಿ 2023ರ ಡಿಸೆಂಬರ್ 25ರಂದು ಪ್ರತೀಕ್ ಚೌಹಾಣ್ ನಿವಾಸದಲ್ಲಿ ಇಬ್ಬರ ನಿಶ್ಚಿತಾರ್ಥ   ನಡೆದಿತ್ತು.  ಇದಾದ ನಂತರ ಇಬ್ಬರ  ಮಧ್ಯೆ ಹೊಂದಾಣಿಕೆ ಇರಲಿ ಎಂದು, ಪ್ರತೀಕ್ ಅವರ ಕುಟುಂಬದವರ ಇಚ್ಚೆಯಂತೆ   ಇಬ್ಬರನ್ನೂ ವಿವಿಧ ಸ್ಥಳಗಳಿಗೆ  ಕಳಿಸಿತು. ಪ್ರತೀಕ್, ಮಹಾರಾಷ್ಟ್ರದ ಲಾತೂರಿಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸಿದರೆ ತಪ್ಪೇನಿಲ್ಲವೆಂದು ಹೇಳಿದ್ದು ಅವರ  ಒತ್ತಾಯಕ್ಕೆ ಮಣಿದು ಸಹಕರಿಸಿದ್ದೇನೆ. ನಂತರ, 2024ರ ಮೇ 13ರಂದು ನಾವು ನಾಲ್ವರು ಶಿರಡಿಗೆ ವಿಮಾನದಲ್ಲಿ ತೆರಳಿ, ಖಾಸಗಿ ಹೋಟೆಲ್‌ನಲ್ಲಿ  ತಂಗಿದ್ದಾಗಲೂ ಪ್ರತೀಕ್  ದೈಹಿಕ ಸಂಪರ್ಕ ನಡೆಸಿದ್ದಾನೆ. ಮದುವೆಯ ಕುರಿತು ಒತ್ತಾಯಿಸಿದಾಗ ನಿರಂತರವಾಗಿ ಮುಂದೂಡುತ್ತಲೇ ಬಂದರು.  ನನ್ನ ಕನ್ಯತ್ವವನ್ನೂ ಪ್ರಶ್ನಿಸಿ ಮಾನಸಿಕ ನೋವುಂಟು ಮಾಡಿದ್ದಾಬೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ