ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಕೂಲ್ ಕೂಲ್| ಕೆರೂರು, ಗುಳೇದಗುಡ್ಡ ಪಟ್ಟಣದಲ್ಲಿ ಜನಸಂಪರ್ಕ ಸಭೆಯೊಂದಿಗೆ ಸಂಚಾರ| ಹೆದ್ದಾರಿಯಲ್ಲಿ ಸಿದ್ದರಾಮಯ್ಯನ ವಾಹನ ಅಡ್ಡಗಟ್ಟಿದ ಮಹಿಳೆಯರು| ಸಾರ್ವಜನಿಕ ಸಭೆಯಲ್ಲಿ ನಿವೃತ್ತಿ ಮಾತುಗಳನ್ನಾಡಿ ಅಚ್ಚರಿ ಮೂಡಿಸಿದ ಸಿದ್ದರಾಮಯ್ಯ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಜ18): ರಾಜ್ಯ ರಾಜಕೀಯ ಜಂಜಾಟದ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಸ್ವಕ್ಷೇತ್ರ ಬಾದಾಮಿಯಲ್ಲಿ ಒಂದು ದಿನದ ಪ್ರವಾಸದಲ್ಲಿದ್ದರು.
ಎಲ್ಲೇ ಹೋದರೂ ಕೂಲ್ ಕೂಲ್ ಆಗಿದ್ದ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಅರ್ಜಿ ಸ್ವೀಕರಿಸುವುದರಲ್ಲಿ ಮಗ್ನರಾಗಿದ್ದರು. ಈ ಮಧ್ಯೆ ಬಹಿರಂಗ ಸಭೆಯಲ್ಲೇ ತಮ್ಮ ರಾಜಕೀಯ ನಿವೃತ್ತಿ ಮಾಡುಗಳನ್ನಾಡುವ ಮೂಲಕ ನೆರೆದವರಲ್ಲಿ ಅಚ್ಚರಿ ಮೂಡಿಸಿದರು.
ಹೀಗೆ ನಿರಾಳತೆಯಿಂದ ಕ್ಷೇತ್ರದಲ್ಲಿ ಸಂಚರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನೂ ಕೂಡ ಉತ್ತರ ಕರ್ನಾಟಕದವನೇ, ನನ್ನ ಗೆಲ್ಲಿಸಿದ್ದಕ್ಕೆ ಋಣ ತೀರಿಸೋ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಒಂದು ದಿನದ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ನೇರವಾಗಿ ಕೆರೂರ ಪಟ್ಟಣಕ್ಕೆ ಆಗಮಿಸಿದರು. ಪಟ್ಟಣಕ್ಕೆ ಆಗಮಿಸುವ ವೇಳೆ ಹೆದ್ದಾರಿಯಲ್ಲೇ ಸಿದ್ದರಾಮಯ್ಯನವರ ವಾಹನ ಅಡ್ಡಗಟ್ಟಿದ ಮಹಿಳೆಯರು, ಕುಡಿಯುವ ನೀರು ಮತ್ತು ರಸ್ತೆ ಸಮಸ್ಯೆ ಕುರಿತು ಕೈಮುಗಿದು ಗೋಳಿಟ್ಟರು. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಸ್ಥಳದಲ್ಲೇ ತಹಶೀಲ್ದಾರರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಇದಾದ ಬಳಿಕ ಸಿದ್ದರಾಮಯ್ಯ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ, ಮಾಜಿ ಸಿಎಂ ಜನರ ಅಹವಾಲು ಸ್ವೀಕರಿಸಿದರು. ಈ ವೇಳೆ ಕಾರ್ಯಕರ್ತನೋರ್ವ ನೀವು ಸಿಎಂ ಆಗಬೇಕು ಎಂದಾಗ ಎಲ್ಲಿಯದಪ್ಪಾ, ನನಗೂ ವಯಸ್ಸಾಗ್ತಾ ಬಂತು, ಈಗ ಗೆಲ್ಲಿಸಿದ್ದೀರಿ, ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೇನೆ, ಜೆಡಿಎಸ್ ಕಾಂಗ್ರೆಸ್ ಸಚಿವರು ನನ್ನ ಮಾತು ಕೇಳ್ತಾರೆ ಹೀಗಾಗಿ ನಿಮ್ಮ ಋಣ ತೀರಿಸ್ತೀನಿ, ಮುಂದಿನ ಎಲೆಕ್ಷನ್ ಗೆ ನೋಡೋಣ ಎಂದರು.
ಒಟ್ಟಿನಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ ಬೆನ್ನಲ್ಲೆ ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಸಂಚರಿಸಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದಾದ ಬಳಿಕ ಬೆಳಗಾವಿಗೆ ತೆರಳಿದರು.