ಬೆಂಗಳೂರು ಗಲಭೆ: 2 ದಿನದಲ್ಲಿ ಡಿ.ಜೆ.ಹಳ್ಳಿಗೆ ಭೇಟಿ, ಸಿದ್ದರಾಮಯ್ಯ

By Kannadaprabha NewsFirst Published Aug 30, 2020, 8:55 AM IST
Highlights

ಸಿದ್ದರಾಮಯ್ಯ ಭೇಟಿ ಮಾಡಿದ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ|ಗಲಭೆ ಕುರಿತು ಮಾತುಕತೆ| ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು| ಅಖಂಡ ಭೇಟಿ ಬಳಿಕ ವಿಪಕ್ಷ ನಾಯಕನ ಆಗ್ರಹ| 
 

ಬೆಂಗಳೂರು(ಆ.30): ನಗರದಲ್ಲಿ ಇತ್ತೀಚೆಗೆ ಗಲಭೆ ನಡೆದ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿಗೆ ಎರಡು ದಿನಗಳಲ್ಲಿ ಭೇಟಿ ನೀಡುವುದಾಗಿ ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರ ತಮ್ಮ ಆರೋಗ್ಯ ವಿಚಾರಿಸಲು ನಿವಾಸಕ್ಕೆ ಆಗಮಿಸಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರೊಂದಿಗೆ ಚರ್ಚಿಸಿದ ವೇಳೆ ಗಲಭೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರು ಗಲಭೆ ಘಟನೆ ಹಾಗೂ ಈ ವೇಳೆ ತಮಗೆ ಆದ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಡಿ.ಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದ ಘಟನೆ ಖಂಡನೀಯ, ಸರ್ಕಾರ ತ್ವರಿತವಾಗಿ ಕ್ರಮ ಕೈಗೊಂಡಿದ್ದರೆ ಈ ರೀತಿ ನಡೆಯುತ್ತಿರಲಿಲ್ಲ. ಅಖಂಡ ಶ್ರೀನಿವಾಸ್‌ಮೂರ್ತಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಿದ್ದರು. ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಈ ಘಟನೆಯ ಹಿಂದೆ ಯಾರೇ ಇದ್ದರೂ ಕ್ರಮ ಆಗಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಹೇಳಿದರು.
ಆಯುಕ್ತರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದೇನೆ. ಡಿ.ಜೆ. ಹಳ್ಳಿಯಲ್ಲಿ ಡ್ರಗ್ಸ್‌ ಮಾಫಿಯಾ ತಳುಕು ಹಾಕಿಕೊಂಡಿದ್ದರೆ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎಂದರು.

ಬೆಂಗಳೂರು ಗಲಭೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಸಮೀವುದ್ದೀನ್ ಫೋನ್‌ನಲ್ಲಿ ಸ್ಫೋಟಕ ಮಾಹಿತಿ!

ಇನ್ನೂ ನೋವಿನಲ್ಲಿ ಇದ್ದೇನೆ: ಅಖಂಡ

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದೇನೆ. ನಮ್ಮ ಸಮಸ್ಯೆಗಳನ್ನೂ ಅವರ ಗಮನಕ್ಕೆ ತಂದಿದ್ದೇನೆ. ಅವರು ನಮ್ಮ ನಾಯಕರು. ಅವರೇ ನಮ್ಮನ್ನು ಪಕ್ಷಕ್ಕೆ ಕರೆ ತಂದಿದ್ದರು. ಎರಡೂ ಮೂರು ದಿನದಲ್ಲಿ ಅಲ್ಲಿಗೆ ಭೇಟಿ ನೀಡುತ್ತಾರೆ ಎಂದು ಹೇಳಿದರು.

ಬಡವರು ಎಂಬ ಕಾರಣಕ್ಕೆ ಜಮೀರ್‌ ಪರಿಹಾರ

ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ಖಾನ್‌ ಅವರು ಗಲಭೆಯ ಆರೋಪಿಗಳನ್ನು ಅಮಾಯಕರು ಎಂದಿಲ್ಲ. ಗಲಭೆಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು ತೀರ ಬಡವರು ಎಂಬ ಕಾರಣಕ್ಕೆ ಪರಿಹಾರ ನೀಡಿರಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ತನಿಖಾ ವರದಿ ಬರುವ ಮೊದಲೇ ಯಾರು ತಪ್ಪಿತಸ್ಥರು ಎಂದು ಹೇಳಲಾಗುವುದಿಲ್ಲ. ಗೃಹ ಸಚಿವರೂ ಸಹ ಇಂತಹ ಹೇಳಿಕೆ ನೀಡಬಾರದು. ತನಿಖೆ ಬಳಿಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದರು ಒತ್ತಾಯಿಸಿದರು.
 

click me!