
ಮೈಸೂರು(ಮೇ.17): ‘ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿನ ತಿಮಿಂಗಿಲ ಯಾರೆಂದು ಗೊತ್ತಿದ್ದರೆ ಬಹಿರಂಗಪಡಿಸಲಿ. ಮಾಹಿತಿ ಇದ್ದರೂ ಹೇಳದಿರುವುದು ದೊಡ್ಡ ತಪ್ಪು’ ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ದೊಡ್ಡ ತಿಮಿಂಗಿಲ ಯಾವುದು ಎಂದು ನನಗಿಂತ ಚೆನ್ನಾಗಿ ಗೃಹ ಸಚಿವ ಪರಮೇಶ್ವರ ಅವರಿಗೇ ಗೊತ್ತಿದೆ. ಅವರು ತಿಮಿಂಗಿಲವನ್ನು ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ. ಎಸ್‌ಐಟಿ ಸರಿಯಾಗಿ ತನಿಖೆ ನಡೆಸಿದ್ದರೆ ದೊಡ್ಡ ತಿಮಿಂಗಿಲ ಹತ್ತೇ ನಿಮಿಷದಲ್ಲಿ ಸಿಗುತ್ತಿತ್ತು’ ಎಂದು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಡನೆ ಮಾತನಾಡಿ, ದೊಡ್ಡ ತಿಮಿಂಗಿಲವನ್ನು ಅವರು ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದಾರೆ. ತಿಮಿಂಗಿಲ ಹಿಡಿಯೋದು ಬಿಟ್ಟು ನನ್ನನ್ನು ಕೇಳಿದರೆ ಹೇಗೆ? ಆ ತನಿಖೆ ಸರಿಯಾಗಿ ನಡೆದಿದ್ದರೆ ಹತ್ತೇ ನಿಮಿಷದಲ್ಲಿ ಆ ತಿಮಿಂಗಿಲ ಸಿಕ್ಕಿಹಾಕಿಕೊಳ್ಳುತ್ತಿತ್ತು. ಸರಿಯಾಗಿ ತನಿಖೆ ನಡೆಯುತ್ತಿದೆಯೇ ಎಂದು ಗೃಹ ಸಚಿವರೇ ಹೇಳಬೇಕು ಎಂದು ವ್ಯಂಗ್ಯವಾಡಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತಿಮಿಂಗಿಲ ಯಾರೆಂದು ಎಚ್‌ಡಿಕೆಯೇ ಹೇಳಲಿ: ಪರಮೇಶ್ವರ
ನಿಮ್ಮ ತಂಗಿ, ತಾಯಂದಿರನ್ನಾದರೂ ನೆನಪು ಮಾಡಿಕೊಂಡು ಹೆಣ್ಣು ಮಕ್ಕಳ ಮರ್ಯಾದೆ ತೆಗೆಯದೆ ಈ ತನಿಖೆಯನ್ನು ಸರಿಯಾಗಿ ಮಾಡಿ ಎಂದು ನಮ್ಮ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.
ವಿಡಿಯೋ ಜಗಜ್ಜಾಹೀರು ಮಾಡಿ ಬೀದಿಗೆ ತಂದವರ ಬಗ್ಗೆ ತನಿಖೆ ನಡೆದಿದೆಯೇ? ಜಗಜ್ಜಾಹೀರು ಮಾಡಿದವನು ಆರಾಮವಾಗಿ ಖಾಸಗಿ ಚಾನೆಲ್ ಮುಂದೆ ಸಂದರ್ಶನ ಕೊಡುತ್ತಿದ್ದಾನೆ. ಒಂದು ವಾರದಲ್ಲಿ ಸೂತ್ರದಾರ ಸಿಗುತ್ತಾನೆ ಎಂದು ಮಂಡ್ಯ ಶಾಸಕ ಹೇಳಿದ್ದಾರೆ. ಬಹುಶಃ ತನಿಖಾ ವರದಿ ಮಂಡ್ಯ ಶಾಸಕರಿಗೆ ಹೋಗುತ್ತಿದೆಯೇ ಹೊರತು ಪರಮೇಶ್ವರ್‌ಗೆ ಅಲ್ಲ. ಗೃಹ ಸಚಿವರ ಕೆಲಸವನ್ನು ಪರಮೇಶ್ವರ್ ಅವರ ಪಕ್ಕದಲ್ಲಿ ಕೂತಿರುವವರು ನೋಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಜ್ವಲ್ ಪಾಸ್‌ಪೋರ್ಟ್ ರದ್ದುಪಡಿಸಿ:
ಪ್ರಜ್ವಲ್ ಪಾಸ್‌ಪೋರ್ಟ್ ಯಾಕೆ ರದ್ದುಪಡಿಸುವುದಿಲ್ಲ? ಈ ಕೆಲಸವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ಮಾಡಬೇಕು. ಕೂಡಲೇ ತನಿಖಾ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಆಗ ಪಾಸ್‌ಪೋರ್ಟ್ ರದ್ದಾಗುತ್ತದೆ ಎಂದರು.
ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ನಮಗೆ ಗೊತ್ತಿಲ್ಲ: ಜಿಟಿ ದೇವೇಗೌಡ
ಈಗ ಬಂಧನ ಯಾಕೆ?:
ಬಿಜೆಪಿಯ ದೇವರಾಜೇಗೌಡರನ್ನು ಬಂಧಿಸಿ ಅವರಿಂದ ಏನು ಉತ್ತರ ಬಯಸುತ್ತಿದ್ದೀರಾ? ಅವರನ್ನು ಬಂಧಿಸಿರುವುದು ಸುಳ್ಳು ಆರೋಪದ ಮೇಲೆ. ಅತ್ಯಾಚಾರ ಮಾಡಿದ್ದಾರೆಂದು ದೂರಲಾಗಿದೆ. ಎಫ್‌ಐಆರ್ ದಾಖಲಿಸಿ ಒಂದು ತಿಂಗಳಾಗಿದೆ. ಒಂದು ತಿಂಗಳ ಹಿಂದೆ ಕೇಸ್ ದಾಖಲಾಗಿದ್ದರೂ ಈಗ ಬಂಧಿಸಿರುವುದು ಏಕೆ? ದೇವರಾಜೇಗೌಡರಿಂದ ಅತ್ಯಾಚಾರಕ್ಕೆ ಸಂಬಂಧಿಸಿದ ಮಾಹಿತಿ ಬೇಕೋ? ಪ್ರಕರಣದ ಕುರಿತು ಆಡಿಯೋ ತುಣುಕು ಬಿಡುಗಡೆ ಮಾಡಿದ್ದರಲ್ವ, ಅದರ ಕುರಿತು ಮಾಹಿತಿ ಬೇಕೋ? ಎಂದು ಹಾಸನ ಎಸ್ಪಿಯವರನ್ನು ಕೇಳಬಯಸುತ್ತೇನೆ ಎಂದರು.
ನನ್ನ ಸಂಪರ್ಕದಲ್ಲಿ ಪ್ರಜ್ವಲ್ ರೇವಣ್ಣ ಇಲ್ಲ
ಸಂಸದ ಪ್ರಜ್ವಲ್ ರೇವಣ್ಣ ರಾಜ್ಯದಲ್ಲಿದ್ದಾಗಲೇ ನನ್ನ ಸಂಪರ್ಕದಲ್ಲಿ ಇರಲಿಲ್ಲ. ಇನ್ನು ವಿದೇಶಕ್ಕೆ ಹೋದ ಮೇಲೆ ನನ್ನ ಸಂಪರ್ಕಕ್ಕೆ ಸಿಗಲು ಹೇಗೆ ಸಾಧ್ಯ? ಆತನ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಎಸ್‌ಐಟಿಯವರು ಬೇಕಿದ್ದರೆ ಅವರ ಪಾಸ್‌ಪೋರ್ಟ್ ರದ್ದುಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ