Karnataka Rains: 5 ಜಿಲ್ಲೆಗಳಲ್ಲಿ ಮಳೆ ಆರ್ಭಟ: ಐವರು ಬಲಿ

By Govindaraj SFirst Published Sep 2, 2022, 4:45 AM IST
Highlights

ರಾಜ್ಯದಲ್ಲಿ ಗಣೇಶ ಚತುರ್ಥಿಯ ಸಂಭ್ರಮದ ನಡುವೆಯೇ ಬುಧವಾರದಿಂದೀಚೆಗೆ ರಾಜ್ಯದ ಐದು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿ ಕಾರಣಗಳಿಗೆ ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ಐವರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ.

ಬೆಂಗಳೂರು (ಸೆ.02): ರಾಜ್ಯದಲ್ಲಿ ಗಣೇಶ ಚತುರ್ಥಿಯ ಸಂಭ್ರಮದ ನಡುವೆಯೇ ಬುಧವಾರದಿಂದೀಚೆಗೆ ರಾಜ್ಯದ ಐದು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿ ಕಾರಣಗಳಿಗೆ ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ಐವರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಗದಗ, ಬೆಳಗಾವಿ, ಯಾದಗಿರಿ, ಚಿತ್ರದುರ್ಗ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದರೆ, ವಿಜಯಪುರ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. 

ಧಾರವಾಡ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಮೈಸೂರು ಜಿಲ್ಲೆಗಳಲ್ಲಿ ಸಾಧಾರಣ ಮತ್ತು ತುಂತುರು ಮಳೆಯಾಗಿದೆ. ಗದಗ ಜಿಲ್ಲೆಯ ನರಗುಂದದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಶೋಕ ಊಫ್‌ರ್‍ ಈಶ್ವರಯ್ಯ ಈರಯ್ಯ ಶಿವಪ್ಪಯನಮಠ(56), ಚಿಕ್ಕನರಗುಂದ ಗ್ರಾಮದ ಮಾಲಾ ಮಲ್ಲಿಕಾರ್ಜುನ ಕೋನಣ್ಣವರ(31) ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಇನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಳಕುಸುಗಲ್ಲ ಗ್ರಾಮದಲ್ಲಿ ಗ್ರಾಪಂ ಸದಸ್ಯ ವಿರೂಪಾಕ್ಷಪ್ಪ ದ್ಯಾಮಪ್ಪ ಧಾರವಾಡ (48) ಸಿಡಿಲಿಗೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. 

ಹೊಸಪೇಟೆ: ಧಾರಾಕಾರ ಮಳೆಗೆ ಧರೆಗುರುಳಿದ ಹಂಪಿ ಶಿವಾಲಯ ಮಂಟಪ

ಬೆಳಗಾವಿ ಜಿಲ್ಲೆಯ ಸವದತ್ತಿ ಸಮೀಪ ಬುಧವಾರ ಸಂಜೆ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುವಾಗ ಕವಿತಾ ಸಿದ್ದಪ್ಪ ಕರಿಕಟ್ಟಿ(23) ಎಂಬ ಮಹಿಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯ ನಗರದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಶಿಥಿಲಗೊಂಡಿದ್ದ ಮನೆಯೊಂದರ ಗೋಡೆ ಕುಸಿದು ಪಾರ್ವತಿ ಬಾಯಿ(75) ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಮಡಿಕೇರಿ ನಗರದಲ್ಲಿ 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. 

ದಾವಣಗೆರೆಯಲ್ಲಿ 18 ಕಚ್ಚಾಮನೆಗಳು, ವಿಜಯಪುರದಲ್ಲಿ 16 ಕಚ್ಚಾ ಮನೆಗಳು ಹಾನಿಗೀಡಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದೀಚೆಗೆ ಸುರಿದ ಮಳೆಗೆ ಬಾರೀ ಅನಾಹುತಗಳಾಗಿವೆ. ಶಿರಸಿ ತಾಲೂಕಿನ ಹಳ್ಳಿಕಾನಿನಲ್ಲಿ ನೂರಾರು ವರ್ಷಗಳ ಮರ ಬುಡ ಸಮೇತ ಕಿತ್ತುಬಿದ್ದರಿಂದ ಮನೆ ಜಖಂಗೊಂಡು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿರಸಿ ತಾಲೂಕಿನ ಜೈನಮಠದ ದೇವಸ್ಥಾನ ಕಂಪೌಂಡ್‌ ಕುಸಿದು ಬಿದ್ದಿದೆ. ಬನವಾಸಿ ಹೋಬಳಿಯ ಹೆಬ್ಬತಿ ಹರಿಜನ ಕೇರಿಯಲ್ಲಿ ನೀರು ನುಗ್ಗಿದ್ದು ಇಲ್ಲಿನ 46 ಕುಟುಂಬಗಳ 211 ನಿವಾಸಿಗಳು ಅತಂತ್ರರಾಗಿದ್ದಾರೆ.

ಬಳ್ಳಾರಿ: ಆಂಧ್ರ ಗಡಿಭಾಗದಲ್ಲಿ ಭಾರೀ ಮಳೆ, ನದಿಯಲ್ಲಿ ಕೊಚ್ಚಿಹೋದ ಎತ್ತು

ಮಳೆಗೆ ಕಂಗೆಟ್ಟ ಶಿರಸಿ ಜನತೆ: ಗಣೇಶ ಹಬ್ಬದ ಖುಷಿಯಲ್ಲಿದ್ದ ಜನತೆಯನ್ನು ಮಳೆ ಆತಂಕಕ್ಕೆ ದೂಡಿದೆ. ಬುಧವಾರ ರಾತ್ರಿ ಸುರಿದ ಮಳೆಯಂತೂ ತಾಲೂಕಿನ ಜನಜೀವನವನ್ನು ಕಂಗೆಡಿಸಿದೆ. ನೂರಾರು ವರ್ಷಗಳ ಹಿಂದಿನ ಮರವೊಂದು ಬುಡಸಮೇತ ಕಿತ್ತು ಮನೆಯೊಂದರ ಮೇಲೆ ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ. ವಾಸವಿದ್ದ ಇಬ್ಬರಿಗೆ ಸಣ್ಣ ಪುಟ್ಟಗಾಯಗಳಾದ ಘಟನೆ ತಾಲೂಕಿನ ಹಳ್ಳಿ ಕಾನಿನಲ್ಲಿ ನಡೆದಿದೆ. ಎಲ್ಲರೂ ಹಬ್ಬದ ವಾತಾವರಣದಲ್ಲಿ ಮಲಗಿದ್ದ ಸಂದರ್ಭದಲ್ಲಿ ಹತ್ತಾರು ವರ್ಷಗಳಿಂದ ಮನೆಯ ಹಿಂಬದಿಯಲ್ಲಿ ಒಣಗಿ ನಿಂತಿದ್ದ ಮರ ಬುಡಸಮೇತ ಮನೆಯ ಮೇಲೆ ಬಿದ್ದಿದೆ. ಭಯಾನಕ ಶಬ್ದ ಕೇಳಿ ಗ್ರಾಮಸ್ಥರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಲಕ್ಷಾಂತರ ರು. ನಷ್ಟಆಗಿದೆ ಎಂದು ಅಂದಾಜಿಸಲಾಗಿದೆ.

click me!