
ಬೆಂಗಳೂರು(ಡಿ.22): ಕೊರೋನಾ ಸೋಂಕು ಆತಂಕದ ನಡುವೆ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ ಡಿ.22ರಂದು ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
"
ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಥರ್ಮಲ್ ಸ್ಕಾ್ಯನಿಂಗ್ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳ ನಡುವೆ ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ.
ರಾಜ್ಯದ 3,019 ಗ್ರಾಮ ಪಂಚಾಯ್ತಿಗಳಲ್ಲಿನ 43,238 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಒಟ್ಟಾರೆ 1,57,760 ಮಂದಿ ಸ್ಪರ್ಧಿಸಿದ್ದು, ಈ ಪೈಕಿ 4,377 ಮಂದಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 1,17,383 ಮಂದಿ ಕಣದಲ್ಲಿ ಉಳಿದಿದ್ದಾರೆ. ಮರು ಮತದಾನ ಅಗತ್ಯ ಇದ್ದರೆ ಗುರುವಾರ ನಡೆಯಲಿದ್ದು, ಡಿ.30ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 2ನೇ ಹಂತದ ಮತದಾನ ಡಿ.27ರಂದು ನಡೆಯಲಿದೆ.
11,935 ಚುನಾವಣಾಧಿಕಾರಿಗಳ ನೇಮಕ:
ಮೊದಲ ಹಂತದ ಚುನಾವಣೆ ಮತದಾನ ಪ್ರಕ್ರಿಯೆಗಾಗಿ 5847 ಚುನಾವಣಾಧಿಕಾರಿ ಮತ್ತು 6085 ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ಸಿಬ್ಬಂದಿ ಕೊರತೆ ಆಗದಂತೆ ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿ ಮತಗಟ್ಟೆಯ ಮತದಾರರ ಸಂಖ್ಯೆಯನ್ನು 1400ರಿಂದ 1000ಕ್ಕೆ ಇಳಿಸಲಾಗಿದೆ. ಥರ್ಮಲ್ ಸ್ಕಾ್ಯನಿಂಗ್, ಸ್ಯಾನಿಟೈಸರ್ ನೀಡಲು ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ರಜೆ ಘೋಷಣೆ:
ಗ್ರಾಮ ಪಂಚಾಯಿತಿ ಮತ ಕ್ಷೇತ್ರಗಳ ಮತದಾರರಿಗೆ ಮತದಾನ ಮಾಡಲು ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳ ಉದ್ಯೋಗಿಗಳು, ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆ ಸೇರಿ ಔದ್ಯಮಿಕ ಸಂಸ್ಥೆಗಳಲ್ಲಿ ಕಾಯಂ ಅಥವಾ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರಿಗೆ ವೇತನ ಸಹಿತ ರಜೆ ನೀಡಲಾಗಿದೆ.
ಮದ್ಯ ಮಾರಾಟ ನಿಷೇಧ:
ಮೊದಲ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಡಿ.20ರಿಂದಲೇ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಅಕ್ರಮ ಮದ್ಯ ಸಾಗಣೆಯಾಗದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಗಡಿಭಾಗದಲ್ಲಿರುವ ಗ್ರಾಮಗಳಲ್ಲಿ ಪೊಲೀಸರು ಕಣ್ಗಾವಲು ಹಾಕಿದ್ದಾರೆ. ಜತೆಗೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಗಾಗಿ ರಾಜ್ಯ ಸರ್ಕಾರ 1,853 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜನೆ ಮಾಡಿದೆ. ಮತಗಟ್ಟೆಸಿಬ್ಬಂದಿ ಹಾಗೂ ಮತದಾನ ಸಾಮಗ್ರಿಗಳನ್ನು ಕೊಂಡೊಯ್ಯಲು ಬಸ್ ಸೇವೆ ಕಲ್ಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ