ಬಾಲಕಿಯ ಸಮಯಪ್ರಜ್ಞೆ, ನೀರಲ್ಲಿ ಮುಳು​ಗಿ​ದ ಯುವ​ತಿಗೆ ಮರು​ಜ​ನ್ಮ: ವಿಡಿಯೋ ವೈರಲ್!

By Suvarna NewsFirst Published Jun 23, 2020, 5:09 PM IST
Highlights

ಬಾಲಕಿಯ ಸಮಯಪ್ರಜ್ಞೆ: ನೀರಲ್ಲಿ ಮುಳು​ಗಿ​ದ ಯುವ​ತಿಗೆ ಮರು​ಜ​ನ್ಮ| ಎನ್‌​ಸಿ​ಸಿ​ಯಲ್ಲಿ ಕಲಿತ ಪ್ರಥಮ ಚಿಕಿತ್ಸೆ ಅಪ​ಘಾ​ತದ ಸಂದರ್ಭ ನೆರ​ವಿಗೆ ಬಂತು

ಬಾರ್ಕೂರುಜೂ.23): ಬಾಲಕಿಯೊಬ್ಬಳ ಸಮಯಪ್ರಜ್ಞೆಯಿಂದಾಗಿ ಅಪಘಾತದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿ ಬದುಕಿದ ಘಟನೆ ಭಾನುವಾರ ಇಲ್ಲಿನ ಚೌಳಿಕೆರೆ ಎಂಬಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಉದ್ಯಮಿ ವಕ್ವಾಡಿ ಸಂತೋಷ್‌ ಶೆಟ್ಟಿ(40), ಖಾಸಗಿ ಸಂಸ್ಥೆ ಉದ್ಯೋಗಿ ಶ್ವೇತಾ (23) ಅವರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಕಾರು ನಿಯಂತ್ರಣ ತಪ್ಪಿ ಆವರಣ ಗೋಡೆ ಇಲ್ಲದ ಚೌಳಿ ಕೆರೆಗೆ ಬಿತ್ತು. ತಕ್ಷಣ ಸ್ಥಳೀಯರು ಹರಸಾಹಸ ಪಟ್ಟು ಕಾರಿನಲ್ಲಿದ್ದ ಇಬ್ಬರನ್ನು ಹೊರಗೆ ತೆಗೆದಿದ್ದರು. ಆದರೆ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದರು.

ಕಾರು ಕೆರೆಗೆ ಬಿದ್ದ ಶಬ್ದ ಕೇಳಿ ಸಮೀಪದ ಮನೆಯ 10ನೇ ತರಗತಿಯ ನಮನಾ (15), ಮನೆಯವರೊಂದಿಗೆ ಕೆರೆಯ ಬಳಿ ಓಡಿ ಬಂದರು. ಪ್ರಜ್ಞೆ ಕಳೆದುಕೊಂಡಿದ್ದ ಯುವತಿ ಶ್ವೇತಾ ಅವರನ್ನು ನೋಡಿ, ತಕ್ಷಣ ಅವರ ಎದೆಯನ್ನು ಕೈಗಳಿಂದ ಒತ್ತಿ ಕೃತಕ ಉಸಿರಾಟವಾಗುವಂತೆ ಮಾಡಿದರು. ನಂತರ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ದಾರಿ ಮಧ್ಯೆ ಸಂತೋಷ್‌ ಶೆಟ್ಟಿಕೊನೆಯುಸಿರೆಳೆದಿದ್ದಾರೆ. ಶ್ವೇತಾ ಮಣಿಪಾಲದ ಕೆಎಂಸಿಯಲ್ಲಿ ಚೇತರಿಸಿಕೊಂಡಿದ್ದಾರೆ.

ಶ್ವೇತಾ ಅವರಿಗೆ ಸಕಾಲದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಅವರು ಬದುಕಿದರು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ನಮನಾ ಅವರೀಗ ಸಾರ್ವಜನಿಕ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಆಕೆ ಪ್ರಥಮ ಚಿಕಿತ್ಸೆ ನೀಡಿದ ವಿಡಿಯೋ ಈಗ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗು​ತ್ತಿ​ವೆ.

ತಾನು ಶಾಲೆಯಲ್ಲಿ ಎನ್‌ಸಿಸಿಯಲ್ಲಿ ಪ್ರಥಮ ಚಿಕಿತ್ಸೆ ಕಲಿತ್ತಿದ್ದರಿಂದ ತನಗೆ ಸಮಯಕ್ಕೆ ಸರಿಯಾಗಿ ಶ್ವೇತಾ ಅವರಿಗೆ ಉಸಿರಾಟಕ್ಕೆ ಸಹಾಯ ಮಾಡಲು ಸಾಧ್ಯವಾಯಿತು ಎಂದು ನಮನಾ ತಿಳಿಸಿದ್ದಾರೆ.

click me!