ಕಚ್ಚಾವಸ್ತು ಕೊರತೆ, ಪಟಾಕಿ ಬಳಕೆಗೆ ಹಲವು ನಿರ್ಬಂಧ, ಹೆಚ್ಚಾಗಿರುವ ಉತ್ಪಾದನಾ ವೆಚ್ಚ ಇತ್ಯಾದಿ ಕಾರಣಗಳಿಂದ ‘ಪಟಾಕಿ ಕಾಶಿ’ ತಮಿಳುನಾಡಿನ ಶಿವಕಾಶಿಯಲ್ಲಿ ಈ ಬಾರಿ ಪಟಾಕಿ ಉತ್ಪಾದನೆ ಕಡಿಮೆಯಾಗಿದೆ.
ರಾಕೇಶ್ ಎನ್.ಎಸ್
ಬೆಂಗಳೂರು (ಅ.19): ಕಚ್ಚಾವಸ್ತು ಕೊರತೆ, ಪಟಾಕಿ ಬಳಕೆಗೆ ಹಲವು ನಿರ್ಬಂಧ, ಹೆಚ್ಚಾಗಿರುವ ಉತ್ಪಾದನಾ ವೆಚ್ಚ ಇತ್ಯಾದಿ ಕಾರಣಗಳಿಂದ ‘ಪಟಾಕಿ ಕಾಶಿ’ ತಮಿಳುನಾಡಿನ ಶಿವಕಾಶಿಯಲ್ಲಿ ಈ ಬಾರಿ ಪಟಾಕಿ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಈ ವರ್ಷ ಪಟಾಕಿ ಇನ್ನಷ್ಟು ದುಬಾರಿಯಾಗಿ ಜನರ ಜೇಬು ಸುಡಲಿದೆ. ವರ್ಷದಿಂದ ವರ್ಷಕ್ಕೆ ಜನರಲ್ಲಿ ಪಟಾಕಿ ಬಳಕೆಯಿಂದ ಆಗುತ್ತಿರುವ ವಾಯು, ಶಬ್ದ ಮಾಲಿನ್ಯದ ಬಗ್ಗೆ ಜಾಗೃತಿ ಮೂಡುತ್ತಿರುವ ಪರಿಣಾಮ ಪಟಾಕಿ ಖರೀದಿಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದರ ಪರಿಣಾಮ ಬೇಡಿಕೆ ಕಡಿಮೆಯಾಗಿ, ಉತ್ಪಾದನೆ ಪ್ರಮಾಣ ಸಹ ಕುಸಿಯುತ್ತಿದೆ.
ಪಟಾಕಿಗಳಲ್ಲಿ ಮಾಲಿನ್ಯಕಾರಕ ಬೇರಿಯಂ ನೈಟ್ರೆಟ್ ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ 2019ರಲ್ಲಿ ನೀಡಿದ ಆದೇಶವನ್ನು ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಪಟಾಕಿ ಸಿಡಿಸುವ ಬಗ್ಗೆ ತಮ್ಮದೇ ಆದ ನಿಯಮಾವಳಿ ರೂಪಿಸಿವೆ. ಇದೆಲ್ಲದರ ಪರಿಣಾಮ ಅಪಾರ ನಷ್ಟಕ್ಕೆ ಒಳಗಾಗಿರುವ ಶಿವಕಾಶಿಯ ಪಟಾಕಿ ಉತ್ಪಾದಕರು ತಮ್ಮ ಕಾರ್ಖಾನೆಗಳನ್ನು ಮುಚ್ಚುತ್ತಿರುವುದರಿಂದ ಪಟಾಕಿ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.
ಕರ್ನಾಟಕದಲ್ಲಿ ಈ ಬಾರಿ ದೀಪಾವಳಿಗೆ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ
ಬೇರಿಯಂ ನೈಟ್ರೇಟ್‌ಗೆ ಪರ್ಯಾಯವಾಗಿ ಬಳಸುವ ಸ್ಟೊ್ರೕಂಟಿಯಂ ನೈಟ್ರೇಟ್ ದುಬಾರಿಯಾಗಿದ್ದು, ಇದನ್ನು ಬಳಸಿದರೆ ಉತ್ಪಾದನಾ ವೆಚ್ಚ ಶೇ.50ಕ್ಕಿಂತ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಈ ರಾಸಾಯನಿಕವನ್ನು ಸ್ಪೇನ್, ಚೀನಾ ಮುಂತಾದ ದೇಶಗಳಿಂದ ಆಮದು ಮಾಡಿಕೊಳ್ಳಬೇಕಿದೆ. ಆದರೆ ಚೀನಾದಿಂದ ಈ ರಾಸಾಯನಿಕವನ್ನು ತರಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನು ಪೊಟಾಸಿಯಂ ನೈಟ್ರೇಟ್ ಬಳಸಬಹುದು ಎಂದು ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಸ್ಥೆ (ನೀರಿ) ಹೇಳಿದ್ದರೂ ಕೂಡ ಬಳಕೆಯ ಸೂತ್ರವನ್ನು ಅದು ಮುಕ್ತವಾಗಿ ಹಂಚಿಕೊಂಡಿಲ್ಲ ಎಂದು ಪಟಾಕಿ ತಯಾರಕರು ಹೇಳುತ್ತಾರೆ.
ಬೇರಿಯಂ ಬಳಸುವ ಪಟಾಕಿ ನಿಷೇಧಗೊಳ್ಳುತ್ತಿದ್ದಂತೆ ಹಲವು ಪಟಾಕಿ ಕಂಪನಿಗಳು ಮುಚ್ಚಿವೆ. ಉಳಿದ ಕಂಪನಿಗಳು ತಮ್ಮ ಸಾಮರ್ಥ್ಯದ ಶೇ.50ರಷ್ಟುಮಾತ್ರ ಕಾರ್ಯನಿರ್ವಹಿಸುತ್ತಿವೆ. ಕಾರ್ಖಾನೆಗಳು ಮುಚ್ಚುವ ಭೀತಿಯಿಂದ ಕಾರ್ಮಿಕರು ಬೇರೆ ಕೆಲಸಗಳನ್ನು ಅರಸುತ್ತ ಗುಳೆ ಹೋಗಿದ್ದಾರೆ. ಪಟಾಕಿ ನಿಷೇಧದ ಪೂರ್ವದಲ್ಲಿ ವಾರ್ಷಿಕ ಸುಮಾರು 6 ಸಾವಿರ ಕೋಟಿ ರು.ಗಳ ಪಟಾಕಿ ವ್ಯವಹಾರ ನಡೆಯುತ್ತಿದ್ದರೆ ಇದೀಗ 2-3 ಸಾವಿರ ಕೋಟಿಗೆ ವಹಿವಾಟು ಇಳಿದಿದೆ. ಇದೆಲ್ಲದರ ಪರಿಣಾಮ ಪಟಾಕಿ ಉದ್ದಿಮೆಯ ಅಸ್ತಿತ್ವವೇ ಅಲುಗಾಡುತ್ತಿದೆ.
ತಮಿಳುನಾಡು ಫೈರ್‌ವರ್ಕ್ಸ್ ಮತ್ತು ಅಮೊರ್ಸೆಸ್ ಮ್ಯಾನ್ಯು ಫ್ಯಾಕ್ಚರ್ಸ್ ಅಸೋಸಿಯೇಷನ್ ಅಧ್ಯಕ್ಷ ಗಣೇಸನ್ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಬೇರಿಯಂ ನಿಷೇಧ ನಮ್ಮ ಉದ್ದಿಮೆಗೆ ಮರ್ಮಾಘಾತ ನೀಡಿದೆ. ಬೇರಿಯಂ ಬಳಸದಿದ್ದರೆ ಪಟಾಕಿ ವಿಫಲಗೊಳ್ಳುವುದು ಹೆಚ್ಚು. ಇದರಿಂದ ಪಟಾಕಿ ಕೊಳ್ಳಲು ಜನ ಉತ್ಸಾಹ ತೋರುತ್ತಿಲ್ಲ. ಆದ್ದರಿಂದ ನಾವು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದೇವೆ. ಭಾರಿ ಪ್ರಮಾಣದಲ್ಲಿ ಆಲ್ಲದಿದ್ದರೂ ಅಲ್ಪ ಪ್ರಮಾಣದಲ್ಲಿ ಬೇರಿಯಂ ಬಳಕೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಮುಂದಿನ ದೀಪಾವಳಿಯ ಹೊತ್ತಿಗಾದರೂ ಬೇರಿಯಂ ಬಳಸಿದ ಪಟಾಕಿಗಳಿಗೆ ಸುಪ್ರೀಂಕೋರ್ಟ್ ಅವಕಾಶ ನೀಡಬಹುದು ಎಂಬ ವಿಶ್ವಾಸವಿದೆ. ಬೇರಿಯಂ ಬಳಕೆಗೆ ಅವಕಾಶ ಸಿಕ್ಕರೆ ನಮ್ಮ ಉದ್ಯಮ ಮತ್ತೆ ಚಿಗಿತುಕೊಳ್ಳುತ್ತದೆ ಎಂದು ಹೇಳುತ್ತಾರೆ.
ಬೆಲೆ ಏರಿಕೆಯಿಂದ ಕುಗ್ಗಿದ ಹಬ್ಬದ ಸಡಗರ : ಹಸಿರು ಪಟಾಕಿಗಳನ್ನೇ ಬಳಸಲು ತಾಕೀತು
ಗೊಂದಲದಲ್ಲಿ ವ್ಯಾಪಾರಸ್ಥರು: ಇತ್ತ ಪಟಾಕಿ ವ್ಯಾಪಾರಿಗಳಿಗೂ ಸರ್ಕಾರದ ನೀತಿ ನಿಯಮಗಳಿಂದಾಗುವ ಗೊಂದಲಗಳ ಭಯವಿದೆ. ಪಟಾಕಿಗೆ ನಾವು ಏಪ್ರಿಲ್, ಮೇ ತಿಂಗಳಲ್ಲೇ ಆರ್ಡರ್ ನೀಡಬೇಕು. ಆರ್ಡರ್ ನೀಡಬೇಕು ಎಂದಾದರೆ ನಮಗೆ ವ್ಯಾಪಾರದ ಬಗ್ಗೆ ಖಚಿತತೆ ಇರಬೇಕಾಗುತ್ತದೆ. ಆರ್ಡರ್ ನೀಡಿದಷ್ಟುಪಟಾಕಿ ಪೂರೈಕೆ ಆಗುತ್ತಿಲ್ಲ. ಆದ್ದರಿಂದ ಈ ಬಾರಿಯಂತೂ ಪಟಾಕಿ ದುಬಾರಿ ಆಗಲಿದೆ ಎಂದು ರಾಜಾಜಿನಗರದ ಪಟಾಕಿ ವ್ಯಾಪಾರಿ ವೆಂಕಟೇಶ್ ಹೇಳುತ್ತಾರೆ.