ಶಾಲಿನಿ ರಜನೀಶ್ ಕುರಿತ ಅಸಭ್ಯ ಹೇಳಿಕೆ: ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ವಿರುದ್ಧ FIR

Published : Jul 03, 2025, 08:20 PM IST
FIR on N Ravikumar

ಸಾರಾಂಶ

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲು. ಮಹಿಳಾ ಸಂಘಟನೆಗಳಿಂದ ತೀವ್ರ ಖಂಡನೆ.

ಬೆಂಗಳೂರು (ಜು.03): ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಮಹಿಳಾ ಅಧಿಕಾರಿ ಎನ್ನುವುದನ್ನೂ ನೋಡದೇ ಅಸಭ್ಯ ಹಾಗೂ ಅಸಂಸದೀಯ ಭಾಷೆ ಬಳಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಕುರಿತ ದೂರುವನ್ನು ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಸಲ್ಲಿಸಿದ್ದು, ಇದೀಗ ಈ ಪ್ರಕರಣವು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪ್ರಕರಣದ ಹಿನ್ನೆಲೆ:

2025ರ ಜುಲೈ 1ರಂದು ವಿಧಾನಸೌಧದ ಬಳಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪರಿಷತ್ ಸದಸ್ಯ ಎನ್. ರವಿಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಉದ್ದೇಶಿಸಿ, 'ರಾತ್ರಿ ಸರ್ಕಾರಕ್ಕೆ, ಹಗಲು ಸಿಎಂಗೆ ಕೆಲಸ ಮಾಡುತ್ತಾರೆ' ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ ಮಾತುಗಳು ಲೈಂಗಿಕವಾಗಿಯೂ ಅಪಾರ್ಥ ಹೊಂದಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.

ದೂರಿನ ವಿವರ:

ಈ ಹೇಳಿಕೆ ಟಿವಿಯಲ್ಲಿ ಪ್ರಸಾರವಾದಾಗ ನಾಗರತ್ನ ಎಂಬ ಮಹಿಳೆ ಮನೆಯಲ್ಲಿ ಕುಳಿತು ನೋಡುತ್ತಿದ್ದಾಗ ವಿಷಯ ತಿಳಿದು ಬಂತು. ಇದರಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಾಗರತ್ನ ಅವರು ತಮ್ಮ ದೂರುನಲ್ಲಿ, ರವಿಕುಮಾರ್ ಅವರ ಹೇಳಿಕೆಯಿಂದ ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅವಮಾನವಾಗಿದೆ. ಶಾಲಿನಿ ರಜನೀಶ್ ಅವರ ಖ್ಯಾತಿಗೆ ಧಕ್ಕೆ ಉಂಟಾಗಿದೆ. 'ಇದು ಮಹಿಳಾ ಸಮುದಾಯವನ್ನೇ ಅವಹೇಳನಗೊಳಿಸಿದ ಮಾತಾಗಿದೆ'ಎಂದು ಉಲ್ಲೇಖಿಸಿದ್ದಾರೆ. ಮಹಿಳೆಯರ ಗೌರವಕ್ಕೆ ಧಕ್ಕೆಯಾಗುವಂತಹ ಈ ಹೇಳಿಕೆಗೆ ಎನ್. ರವಿಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ಆಗ್ರಹಿಸಿದ್ದಾರೆ.

ಎಫ್‌ಐಆರ್ ದಾಖಲು:

ಈ ದೂರಿನಾಧಾರದ ಮೇಲೆ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯಾವುದೇ ಸಾರ್ವಜನಿಕ ಸ್ಥಾನದಲ್ಲಿರುವ ವ್ಯಕ್ತಿಯು ಮಹಿಳೆಯರ ಬಗ್ಗೆ ಅಪಮಾನಕಾರಿ ಶೈಲಿಯಲ್ಲಿ ಮಾತನಾಡುವುದು ನಿಷೇಧಿತವಾಗಿರುವ ಹಿನ್ನೆಲೆಯಲ್ಲಿ, ಇದರ ಬಗ್ಗೆ ಸೂಕ್ತ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಈ ಪ್ರಕರಣ ಇನ್ನಷ್ಟು ರಾಜಕೀಯ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಅಧಿಕಾರಿಗಳ ಗೌರವ ಮತ್ತು ಮಹಿಳಾ ಸಮುದಾಯದ ಭದ್ರತೆ ಕುರಿತು ಸಮಾಜದ ವರ್ಗಗಳು ಚಿಂತಿಸುತ್ತಿರುವ ಸಂದರ್ಭದಲ್ಲಿ, ನಿಂದನಾತ್ಮಕ ಹೇಳಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಮಹಿಳಾ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಂದ ಕೇಳಿ ಬರುತ್ತಿದೆ.

ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆ:

ದೂರುದಾರೆ ನಾಗರತ್ನ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದ್ದಾರೆ. ಲೈಂಗಿಕ‌ ದೌರ್ಜನ್ಯದ ರೀತಿಯಲ್ಲೆ ಅವರು ಮಾತಾಡಿದ್ದಾರೆ. ಹೆಣ್ಣು ಮಕ್ಕಳ ಭಗ್ಗೆ ಗೌರವಯುತವಾಗಿ ಮಾತಾಡಬೇಕು. ಅವರು ಮಾತಾಡುವಾಗ ಪೊಲೀಸರು ಅಲ್ಲೆ ಇದ್ದರು. ನಾನು ಟಿವಿಯಲ್ಲಿ ನೋಡಿದಾಗ ನನಗೆ ತುಂಬಾ ಬೇಜಾರಾಯ್ತು. ಅಂತಹ ದೊಡ್ಡ‌ ಸ್ಥಾನದಲ್ಲಿ ಇರೋರಿಗೆ ಇವರು ಗೌರವ ಕೊಡ್ತಿಲ್ಲ. ಈ ಹಿಂದೆ ಬಿಜೆಪಿ ಮತ್ತೊಬ್ಬ ನಾಯಕ ಸಿ.ಟಿ. ರವಿ ಕೂಡ ಇದೇ ರೀತಿ ಹೆಣ್ಮಕ್ಕಳ ಬಗ್ಗೆ ಮಾತಾಡಿದ್ದರು. ಇನ್ಮುಂದೆ ಈ ರೀತಿ ಪದ ಬಳಕೆ ಮಾಡಬಾರದು. ಸದ್ಯ‌ ನಾನು ವಿಧಾನಸೌದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಾಳೆ ಮಹಿಳಾ ಆಯೋಗಕ್ಕೆ ಹೋಗಿ‌ ದೂರು ದಾಖಲಿಸುತ್ತೇನೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹ ರಕ್ಷಕರು
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್