BMTCಯಿಂದಲೇ ಕೊರೋನಾ ಸೋಂಕು ಹರಡುವ ಆತಂಕ!

By Kannadaprabha NewsFirst Published Apr 29, 2020, 8:05 AM IST
Highlights

 ಬಿಎಂಟಿಸಿಯಿಂದಲೇ ಕೊರೋನಾ ಸೋಂಕು ಹರಡುವ ಆತಂಕ!| ಇಟಿಎಂ ಯಂತ್ರಗಳ ಹಿಂಪಡೆದು ಹಳೆ ಮಾದರಿ ಟಿಕೆಟ್‌ ಹಂಚಿಕೆ| ಕಂಡೆಕ್ಟರ್‌ಗಳು ಎಂಜಲು ಮೆತ್ತಿ ಟಿಕೆಟ್‌ ನೀಡುವ ಸಾಧ್ಯತೆ

ಬೆಂಗಳೂರು(ಏ.29): ಕೊರೋನಾ ಮಹಾಮಾರಿ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿರುವ ಈ ಸಂದರ್ಭದಲ್ಲಿ ಬಿಎಂಟಿಸಿಯು ನಿರ್ವಾಹಕರಿಂದ ಇಟಿಎಂ (ಎಲೆಕ್ಟ್ರಾನಿಕ್‌ ಟಿಕೆಟ್‌ ಮಷನ್‌) ಟಿಕೆಟ್‌ ಯಂತ್ರಗಳನ್ನು ಹಿಂಪಡೆದು ಹಳೇ ಮಾದರಿಯ ಕಾಗದದ ಟಿಕೆಟ್‌ಗಳನ್ನು ನೀಡಿರುವುದು ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ಎಂಜಲು ಮೆತ್ತಿ ಟಿಕೆಟ್‌ ನೀಡುತ್ತಿರುವ ನಿರ್ವಾಹಕ ಹಾಗೂ ಟಿಕೆಟ್‌ ಪಡೆಯುವ ಪ್ರಯಾಣಿಕ ಇಬ್ಬರೂ ಕೊರೋನಾ ಸೋಂಕು ಹರಡುವ ಸಂದರ್ಭ ನಿರ್ಮಾಣವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಲಾಕ್‌ಡೌನ್‌ ನಡುವೆಯೂ ತುರ್ತು ಹಾಗೂ ಅಗತ್ಯ ಸೇವಾ ಕ್ಷೇತ್ರಗಳ ಸಿಬ್ಬಂದಿ ಸಂಚಾರಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿರುವ ಕೆಲ ಬಸ್‌ಗಳಲ್ಲಿ ಇದುವರೆಗೂ ಇಟಿಎಂ ಯಂತ್ರದ ಮೂಲಕ ಟಿಕೆಟ್‌ ನೀಡಲಾಗುತ್ತಿತ್ತು. ಆದರೆ, ಸೋಮವಾರ ಏಕಾಏಕಿ ಹಳೇ ಮಾದರಿಯ ಕಾಗದದ ಟಿಕೆಟ್‌ ವಿತರಣೆಗೆ ಮುಂದಾಗಿದ್ದಾರೆ. ಎಂಜಲು ಮೆತ್ತಿ ಟಿಕೆಟ್‌ ನೀಡುವ ಪ್ರವೃತ್ತಿ ಇರುವ ಕಾರಣ ಇಂತಹ ಟಿಕೆಟ್‌ ನೀಡಿಕೆಯನ್ನೇ ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇಟಿಎಂ ಟಿಕೆಟ್‌ ಯಂತ್ರಗಳು ಸುಸ್ಥಿತಿಯಲ್ಲಿವೆ. ಕೆಲ ಡಿಪೋಗಳಲ್ಲಿ ನಿರ್ವಾಹಕರಿಂದ ಇಟಿಎಂ ಯಂತ್ರ ಹಿಂಪಡೆದು ಹಳೇ ಮಾದರಿಯ ಟಿಕೆಟ್‌ ಕೊಟ್ಟಿರುವುದು ಗಮನಕ್ಕೆ ಬಂದಿದೆ. ಆ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

- ಸಿ.ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ

click me!