
ಬೆಂಗಳೂರು (ಡಿ.09): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ್ ಬಂದ್‌ಗೆ ಕೈಜೋಡಿಸಿದ್ದ ರೈತ ಸಂಘಟನೆಗಳು, ಬುಧವಾರ ಹಾಗೂ ಗುರುವಾರ ವಿಧಾನಸೌಧ ಮತ್ತು ರಾಜಭವನಕ್ಕೆ ಮುತ್ತಿಗೆ ಹಾಕಿ ‘ಬಾರುಕೋಲು ಚಳವಳಿ’ ನಡೆಸುವುದಾಗಿ ಘೋಷಿಸಿವೆ.
"
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬುಧವಾರ (ಡಿ.9) ಬೆಳಗ್ಗೆ 11 ಗಂಟೆಗೆ ಸಿಟಿ ರೈಲ್ವೆ ನಿಲ್ದಾಣದಿಂದ ವಿಧಾನಸೌಧದ ವರೆಗೆ ಜಾಥಾ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿವೆ. ಗುರುವಾರ (ಡಿ.10) ಮೌರ್ಯ ವೃತ್ತದಿಂದ ಮೆರವಣಿಗೆ ನಡೆಸಿ ರಾಜಭವನ ಮುತ್ತಿಗೆ ಹಾಕಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಈ ಕುರಿತು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಬಾರುಕೋಲು ಬೀಸುವ ಮೂಲಕ ಹೋರಾಟ ಆರಂಭ ಮಾಡಲಾಗುತ್ತದೆ. ದಪ್ಪ ಚರ್ಮದ ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗಕ್ಕೆ ಬಾರುಕೋಲು ಏಟು ಏಕೆ ಬೀಳಲಿದೆ ಎಂಬುದನ್ನು ಸಾಂಕೇತಿಕವಾಗಿ ತೋರಿಸಲಿದ್ದೇವೆ. ಬಾರುಕೋಲು ಚಳವಳಿ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದರು.
"
ಗೋಹತ್ಯೆ ತಡೆ ಮಸೂದೆ ನಾಳೆ ಮಂಡನೆ ಸಂಭವ! ...
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು, ಭಾರತ್ ಬಂದ್ ಅಂಗವಾಗಿ ಹಮ್ಮಿಕೊಂಡಿರುವ ಹೋರಾಟ ಅನಿರ್ದಿಷ್ಟಾವಧಿವರೆಗೆ ನಡೆಸಲಾಗುತ್ತದೆ. ಹೋರಾಟದ ಮುಂದುವರಿದ ಭಾಗವಾಗಿ ಗುರುವಾರ ರಾಜಭವನ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
"
ಇಂದು ಕರವೇ ಕಾಲ್ನಡಿಗೆ ಜಾಥಾ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಪೋರೇಷನ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಕಾರ್ಪೋರೇಷನ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ಬಳಿಕ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಕಳುಹಿಸಲಾಗುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ