ಖಾಕಿ ಹೈ ಅಲರ್ಟ್‌ನಲ್ಲೂ ಆರ್‌ಸಿಬಿ ಸಂಭ್ರಮಾಚರಣೆ; ಪಟಾಕಿ ಸಿಡಿಸಿ ಕುಣಿದ ಅಭಿಮಾನಿಗಳು

Published : Jun 01, 2026, 05:36 AM IST
RCB vs GT Final 2026

ಸಾರಾಂಶ

ಆರ್‌ಸಿಬಿ-ಜಿ.ಟಿ ಐಪಿಎಲ್‌ ಫೈನಲ್ ಪಂದ್ಯದ ವೇಳೆ, ಕಳೆದ ವರ್ಷದ ದುರಂತದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ನಗರದಾದ್ಯಂತ ಹೈ ಅಲರ್ಟ್ ಘೋಷಿಸಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಈ ನಿಯಮಗಳ ನಡುವೆಯೂ ಆರ್‌ಸಿಬಿ ಗೆಲ್ಲುತ್ತಿದ್ದಂತೆ ರಾಜ್ಯಾದ್ಯಂತ ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್‌ ಟೈಟಾನ್ಸ್‌ (ಜಿ.ಟಿ) ಫೈನಲ್‌ ಪಂದ್ಯಾವಳಿ ವೇಳೆ ನಗರದಾದ್ಯಂತ ಪೊಲೀಸರು ಹೈ ಅಲರ್ಟ್‌ ಆಗಿದ್ದರು. ಪೊಲೀಸರ ಕಟ್ಟುನಿಟ್ಟಿನ ಕ್ರಮದ ಮಧ್ಯೆಯೂ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಐಪಿಎಲ್‌ ಫೈನಲ್‌ ಪಂದ್ಯಾವಳಿಯ ವೇಳೆ ಅಹಿತಕರ ಘಟನೆ ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಿದ್ದರು. ಅಲ್ಲದೇ ನಗರದ ಮಾಲ್‌ಗಳಲ್ಲಿ ಓಪನ್‌ ಸ್ಕ್ರೀನಿಂಗ್‌ನಲ್ಲಿ ಪಂದ್ಯ ವೀಕ್ಷಣೆಗೂ ಪೊಲೀಸರು ನಿಷೇಧಿಸಿದ್ದರು.

ಕಳೆದ ವರ್ಷ ಆರ್‌ಸಿಬಿ ಫೈನಲ್‌ ಪಂದ್ಯಾ ಗೆದ್ದ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆ ಸಾವಿರಾರು ಕ್ರಿಕ್ರೇಟ್‌ ಪ್ರೇಮಿಗಳು ಜಮಾಯಿಸಿದ್ದರು. ಚಿನ್ನಸ್ವಾಮಿ ಗೇಟ್‌ ಬಳಿ ತಳ್ಳಾಟ ಮತ್ತು ನೂಕಾಟ ಉಂಟಾಗಿ 11 ಮಂದಿ ಮೃತಪಟ್ಟಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್‌ ಇಲಾಖೆ ಆರ್‌ಸಿಬಿ ಅಂತಿಮ ಪಂದ್ಯದ ವೇಳೆ ಸಂಭ್ರಮಾಚರಣೆ ಮಾಡದಂತೆ ತೀವ್ರ ಕಟ್ಟೆಚ್ಚರ ವಹಿಸಿತ್ತು.

ನಿಯಮ ಮೀರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದರು. ಅಲ್ಲದೇ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಕೋರಮಂಗಲ, ಇಂದಿರಾನಗರ, ಮಾರತ್ತಹಳ್ಳಿ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ಹೆಚ್ಚಾಗಿ ಪಬ್‌, ಬಾರುಗಳು ಇರುವ ಕಡೆ ಪೊಲೀಸರು ರೌಂಡ್ಸ್‌ (ಗಸ್ತು ) ತಿರುಗುತ್ತಿದ್ದರು. ಆಯಾ ವಲಯದ ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತು ಒದಗಿಸಲಾಗಿತ್ತು. ಸಂಚಾರ ಪೊಲೀಸರನ್ನೂ ಕೂಡ ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗಿತ್ತು. ಮುನ್ನೇಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ಪ್ಲೈಓವರ್‌ಗಳನ್ನು ಬಂದ್‌ ಮಾಡಲಾಗಿತ್ತು. ನಿಯಮ ಮೀರಿ ರಸ್ತೆಗೆ ಇಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಕೆಲವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿದ್ದಾರೆ.

ಮಾಲ್‌ಗಳಲ್ಲಿ ಐಪಿಎಲ್‌ ಫೈನಲ್‌ ಲೈವ್ ಸ್ಕ್ರೀನಿಂಗ್‌ಗೆ ನಿಷೇಧ 

ನಗರದಲ್ಲಿ ಓಪನ್‌ ಸ್ಕ್ರೀನಿಂಗ್‌ಗೆ ಹಾಗೂ ಮಾಲ್‌ಗಳಲ್ಲಿ ಲೈವ್ ಸ್ಕ್ರೀನಿಂಗ್‌ನಲ್ಲಿ ಪಂದ್ಯ ವೀಕ್ಷಣೆಗೂ ಪೊಲೀಸರು ನಿಷೇಧಿಸಿದ್ದರು. ಲೈವ್ ಸ್ಕ್ರೀನಿಂಗ್‌ ಮಾಡದಂತೆ ಪೊಲೀಸರು ಮಾಲ್‌ಗಳಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಹೀಗಾಗಿ ಲೈವ್ ಸ್ಕ್ರೀನಿಂಗ್‌ ಮಾಡಲು ಮಾಲ್‌ನವರು ಹಿಂದೇಟು ಹಾಕಿದ್ದರು.

ಕಳೆದ ಸಲ ಹುಚ್ಚಾಟ ಮಾಡಿದ್ದ ಆರ್‌ಸಿಬಿಯ ಅಭಿಮಾನಿಗಳು

ಕಳೆದ ವರ್ಷ ಆರ್‌ಸಿಬಿ ಅಂತಿಮ ಪಂದ್ಯ ಗೆದ್ದ ಸಂದರ್ಭದಲ್ಲಿ ಆರ್‌ಸಿಬಿ ಅಭಿಮಾನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಟೀ ಶರ್ಟ್‌ ಕಳಚಿ ತಿರುಗಿಸುವುದು, ಮದ್ಯಪಾನ ಮಾಡಿ ಕೂಗಾಟ ಮಾಡುವುದು, ರಸ್ತೆ ಮಧ್ಯದಲ್ಲಿಯೇ ಸಂಭ್ರಮಾಚರಣೆ ಮಾಡುವುದು, ಪೊಲೀಸ್‌ ಬ್ಯಾರಿಕೇಡ್‌ಗಳನ್ನು ವಾಹನಗಳಿಗೆ ಕಟ್ಟಿಕೊಂಡು ಎಳೆದುಕೊಂಡು ಹೋಗುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಪೊಲೀಸರು ಈ ಬಾರಿ ಆ ರೀತಿಯ ಹುಚ್ಚಾಟಗಳಿಗೆ ಬ್ರೇಕ್‌ ಹಾಕಿದ್ದರು. ಪೊಲೀಸರ ಕಟ್ಟುನಿಟ್ಟಿನ ಕ್ರಮದ ಮಧ್ಯಯೂ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆಯನ್ನು ನಡೆಸಿದ್ದಾರೆ.

ಐಪಿಎಲ್‌ ಫೈನಲ್‌ ಪಂದ್ಯಾವಳಿ ವೇಳೆ ನಗರದಾದ್ಯಂತ ಪೊಲೀಸರು ಹೈ ಅಲರ್ಟ್‌ ಆಗಿದ್ದರು. ಆಯಾ ವಲಯದ ಡಿಸಿಪಿಗಳು ನೇತೃತ್ವದಲ್ಲಿ ಜನನಿಬಿಡ ಪ್ರದೇಶದಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ಫ್ಲೈಓವರ್‌ಗಳ ಮೇಲೆ ಸಂಚಾರ ನಿರ್ಬಂಧಿಸಲಾಗಿತ್ತು. ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ರಾಜ್ಯದ ಎಲ್ಲಾ ಭಾಗದಲ್ಲಿಯೂ ಸಂಭ್ರಮ

ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಟಾಟಾ ಐಪಿಎಲ್‌ ಪಂದ್ಯವನ್ನು ಗೆದ್ದ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲೂ ಅಭಿಮಾನಿಗಳು ಭಾನುವಾರ ತಡರಾತ್ರಿ ಸಂಭ್ರಮಿಸಿದ್ದಾರೆ. ರಸ್ತೆಗೆ ಇಳಿದ ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂತೋಷ ವ್ಯಕ್ತಪಡಿಸಿದರು.

ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಗುಜರಾತ್‌ ಟೈಟಾನ್ಸ್‌ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಭಾನುವಾರ ರಾತ್ರಿ 11.30ರ ವೇಳೆಗೆ ಅರ್‌ಸಿಬಿ ಕೊನೆಯಲ್ಲಿ ಸಿಕ್ಸರ್‌ ಸಿಡಿಸಿ ವಿಜಯದ ನಗೆ ಬೀರಿತು. ಇದರೊಂದಿಗೆ ಟೀವಿ, ಮೊಬೈಲ್‌ಗಳಲ್ಲಿ ಕ್ರಿಕೆಟ್‌ ನೋಡುತ್ತಿದ್ದ ಅಭಿಮಾನಿಗಳು ಹರ್ಷೋದ್ಘಾರ ಮಾಡಿದರು. ತಕ್ಷಣವೇ ರಸ್ತೆಗೆ ಇಳಿದ ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು. ಪೊಲೀಸರು ತಡರಾತ್ರಿಯಲ್ಲಿ ಹೆಚ್ಚಿನ ಅನಾಹುತ ಆಗದಂತೆ ಭಾರೀ ಭದ್ರತೆ ವ್ಯವಸ್ಥೆ ಕೈಗೊಂಡಿದ್ದರು. ಅಲ್ಲದೆ ರಸ್ತೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲು ನಿಷೇಧ ಹೇರಿದ್ದರು. ಆದರೆ ಉದ್ರಿಕ್ತ ಅಭಿಮಾನಿಗಳು ನಿಯಮವನ್ನು ಲೆಕ್ಕಿಸದೆ ರಸ್ತೆಗಳಿದರು.

ಬೆಂಗಳೂರು, ಧಾರವಾಡ, ಹಾಸನ, ಬೆಳಗಾವಿ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಸೇರಿದಂತೆ ವಿವಿಧೆಡೆ ಸಂಭ್ರಮಿಸಿದರು. ಧಾರವಾಡದ ಕೆಸಿಡಿ ಮೈದಾನದಲ್ಲಿ ಕೇಕೆ ಹಾಕಿ ಪಟಾಕಿ ಸಿಡಿದರು. ಹಾಸನದ ಖಾಸಗಿ ಹೋಟೆಲ್‌ನಲ್ಲಿ ಎಲ್‌ಇಡಿಯಲ್ಲಿ ಕ್ರಿಕೆಟ್‌ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಬೆಳಗಾವಿಯಲ್ಲಿ ಆರ್‌ಪಿಡಿ ವೃತ್ತದಲ್ಲಿ ಸಾವಿರಾರು ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಿಕ್ಕಮಗಳೂರಿನ ರಾಜಾ ಪಾರ್ಕ್‌ನಲ್ಲಿ ನೂರಾರು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಕೋಲಾರ ಜಿಲ್ಲೆ ಮಾಲೂರು ಕ್ರೀಡಾಂಗಣದಲ್ಲಿ ಶಾಸಕ ನಂಜೇಗೌಡ ನೇತೃತ್ವದಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆಯಲ್ಲಿ ಎಲ್‌ಇಡಿ ಪರದೆಯಲ್ಲಿ ಕ್ರಿಕೆಟ್‌ ವೀಕ್ಷಿಸಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: ಖಾಕಿ ಹೈ ಅಲರ್ಟ್‌ನಲ್ಲೂ ಆರ್‌ಸಿಬಿ ಸಂಭ್ರಮಾಚರಣೆ; ಪಟಾಕಿ ಸಿಡಿಸಿ ಕುಣಿದ ಅಭಿಮಾನಿಗಳು
ಸತೀಶ್ ಜಾರಕಿಹೊಳಿ ಭೇಟಿ ಮಾಡಿದ 21 ಮಠಾಧೀಶರು: ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಸ್ವಾಮೀಜಿಗಳ ಪಟ್ಟು!