ಪ.ಜಾತಿಯಲ್ಲಿ ನನ್ನ ಹೊರತು 7 ಬಾರಿ ಗೆದ್ದ ಪುಣ್ಯಾತ್ಮರು ಯಾರಿದ್ದಾರೆ? ನಾನ್ಯಾಕೆ ಸಿಎಂ ಆಗಬಾರದು: ಕೆಎಚ್‌ ಮುನಿಯಪ್ಪ

By Kannadaprabha News  |  First Published Nov 21, 2024, 10:42 AM IST

ಮುನಿಯಪ್ಪ ಮುಖ್ಯಮಂತ್ರಿ ಆಗಬೇಕು ಎಂಬುದು ಸಮಾಜದ ಸ್ವಾಮೀಜಿಯವರ ಕಳಕಳಿ. ಪರಿಶಿಷ್ಟ ಜಾತಿಯಲ್ಲಿ ನನ್ನ ಹೊರತು ಏಳು ಸಾರಿ ಗೆದ್ದ ಪುಣ್ಯಾತ್ಮರು ಯಾರಿದ್ದಾರೆ? ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಟ್ಟು ಬೇರೆ ಹಿರಿಯರು ಯಾರಿದ್ದಾರೆ?


ಮುಖಾಮುಖಿ - ಕೆ.ಎಚ್‌.ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು  ಸಚಿವ

ಸಂಪತ್ ತರೀಕೆರೆ

Latest Videos

undefined

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ಯೋಜನೆ, ಅನ್ನಭಾಗ್ಯ. ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಅಕ್ಕಿ ನೀಡುವ ಈ ಯೋಜನೆ ಕರ್ನಾಟಕವನ್ನು ಹಸಿವು ಮುಕ್ತಗೊಳಿಸುವ ದಿಸೆಯಲ್ಲಿ ಇಟ್ಟ ಪ್ರಮುಖ ಹೆಜ್ಜೆ. ಈ ಮಹತ್ವದ ಯೋಜನೆಯು ಸೇರಿ ಪಂಚ ಗ್ಯಾರಂಟಿಗಳು ಹುಟ್ಟಿಸಿದ ಅಲೆಯೇರಿ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಗದ್ದುಗೆಗೇರಿದೆ. ಗ್ಯಾರಂಟಿ ಅಧಿಕಾರವನ್ನೇನೋ ನೀಡಿತು. ಆದರೆ, ಅದರ ಹೊರೆಯ ಬಿಸಿ ಸರ್ಕಾರವನ್ನು ಕಾಡುತ್ತಿರುವುದು ಸುಳ್ಳಲ್ಲ. ಇಷ್ಟಾದರೂ ಗ್ಯಾರಂಟಿಗಳ ಮಾರ್ಪಾಡು ಮಾಡುವುದೇ ಇಲ್ಲ ಎಂದು ಬಿಂಬಿಸಿಕೊಳ್ಳುವ ಸರ್ಕಾರ ಇದೀಗ ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು ಪ್ರಮುಖ ಅಗತ್ಯವಾದ ಬಿಪಿಎಲ್‌ ಕಾರ್ಡುಗಳ ಪರಿಷ್ಕರಣೆ ಆರಂಭಿಸಿದೆ. ಇದು ಸಾಕಷ್ಟು ವಿವಾದ ಹುಟ್ಟುಹಾಕಿದ್ದು, ರಾಜಕೀಯವೂ ಮೇಳೈಸಿದೆ. ನಿಜಕ್ಕೂ ಈ ಪರಿಷ್ಕರಣೆಯೂ ಅನ್ನಭಾಗ್ಯ ಕಸಿಯುವ ಯತ್ನವೇ? ಅಥವಾ ಅನರ್ಹರೂ ಸರ್ಕಾರಿ ಯೋಜನೆಯ ದುರುಪಯೋಗ ಮಾಡುತ್ತಿರುವುದನ್ನು ತಡೆಗಟ್ಟುವ ಯತ್ನವೇ? ಈ ಯತ್ನದ ದೆಸೆಯಿಂದ ಅರ್ಹರೂ ಬಿಪಿಎಲ್‌ ಕಾರ್ಡು ವಂಚಿತರಾಗುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಎಷ್ಟು ತಥ್ಯವಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ.

ಏನಿದು ಬಿಪಿಎಲ್‌ ಕಾರ್ಡ್‌ ರದ್ದತಿ ಗೊಂದಲ ?

ತಪ್ಪು ವ್ಯಾಖ್ಯಾನ ಬೇಡ. ನಾವು ಬಿಪಿಎಲ್‌, ಎಪಿಎಲ್‌ ಸೇರಿ ಯಾವುದೇ ಕಾರ್ಡ್‌ ರದ್ದು ಮಾಡುತ್ತಿಲ್ಲ. ಕೇವಲ ಪರಿಷ್ಕರಣೆ ಮಾಡುತ್ತಿದ್ದೇವೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾದ ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.70ರಿಂದ 80ರಷ್ಟು ಮಂದಿ ಬಿಪಿಎಲ್‌ ಕಾರ್ಡು ಹೊಂದಿದ್ದಾರೆ ಎಂದರೆ ಎಲ್ಲೋ ತಪ್ಪು ನಡೆದಿರಬೇಕು. ಅನರ್ಹರು ದುರುಪಯೋಗ ಪಡೆಯುತ್ತಿರಬೇಕು. ಬಡವರ ಯೋಜನೆಯನ್ನು ಸ್ಥಿತಿವಂತರು ಪಡೆದಿರುವುದು ಸರಿಯಲ್ಲ. ಯಾರು ತೆರಿಗೆ ಪಾವತಿ ಮಾಡುತ್ತಾರೋ,, ಸರ್ಕಾರಿ ಕೆಲಸದಲ್ಲಿದ್ದಾರೋ, ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಾಗಿದೆಯೋ ಅಂತವರನ್ನು ಗುರುತಿಸಿ ಅವರು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಅದನ್ನು ಎಪಿಎಲ್‌ಗೆ ಪರಿವರ್ತನೆ ಮಾಡುತ್ತಿದ್ದೇವೆ ಅಷ್ಟೇ. ಒಬ್ಬೇ ಒಬ್ಬ ಅರ್ಹನಿಗೂ ಬಿಪಿಎಲ್‌ ಕಾರ್ಡು ಕೈ ತಪ್ಪಬಾರದು ಎಂಬುದೇ ಸರ್ಕಾರದ ಉದ್ದೇಶ.

ರಾಜ್ಯದ ಕ್ರೈಸ್ತರಿಗೆ ವಕ್ಫ್‌ ಬಿಸಿ ತಟ್ಟಿಲ್ಲ | ಮತಾಂತರ ನಡೆಯುತ್ತಿದ್ದರೆ ಕ್ರೈಸ್ತರ ಸಂಖ್ಯೆ ಏಕೆ ಕುಸಿದಿದೆ?: ಫಾ. ಸಲ್ಡಾನಾ

ಕಾರ್ಡ್‌ ಹಂಚಿಕೆಗೆ ನಿಗದಿತ ಮಾನದಂಡ ಇದ್ದರೂ ಬಿಪಿಎಲ್‌ ಕೊಟ್ಟಿದ್ದೇಕೆ? ಈಗ ಪರಿಷ್ಕರಣೆ ಏಕೆ?

ಕಳೆದ ಹತ್ತು ವರ್ಷಗಳಿಂದ ಬಿಪಿಎಲ್‌ ಕಾರ್ಡ್‌ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಸುಳ್ಳು ಮಾಹಿತಿ ಕೊಟ್ಟು ಅನರ್ಹರು ಕೂಡ ಬಿಪಿಎಲ್‌ ಪಡೆದಿದ್ದಾರೆ. ದಕ್ಷಿಣದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.70ರಿಂದ 80ರಷ್ಟು ಬಿಪಿಎಲ್‌ ಇದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯದಲ್ಲೆಲ್ಲೂ .50ಕ್ಕಿಂತ ಜಾಸ್ತಿ ಬಿಪಿಎಲ್‌ ಇಲ್ಲ. ನಾವು ಅಧಿಕಾರಕ್ಕೆ ಬಂದಾಗಲೇ ಈ ಬಗ್ಗೆ ಚಿಂತನೆ ನಡೆಸಿ ಹಂತ ಹಂತವಾಗಿ ಅನರ್ಹರು ಪಡೆದ ಬಿಪಿಎಲ್‌ ಅನ್ನು ಎಪಿಎಲ್‌ ಆಗಿ ಪರಿವರ್ತಿಸುತ್ತಿದ್ದೇವೆ.

ಬಿಪಿಎಲ್‌ ಕಾರ್ಡ್‌ ಎಪಿಎಲ್‌ಗೆ ಬದಲಾವಣೆಗೆ ಗ್ಯಾರಂಟಿ ಯೋಜನೆ ಕಾರಣವೇ?

ಗ್ಯಾರಂಟಿ ಕಾರಣದಿಂದ ಕಾರ್ಡ್‌ ರದ್ದು ಮಾಡುತ್ತಿಲ್ಲ. ತೆರಿಗೆ ಕಟ್ಟುವುದರಲ್ಲಿ ಮಹಾರಾಷ್ಟ್ರದ ನಂತರದ 2ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಅಂದ ಮೇಲೆ ಇಲ್ಲಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು. ಬಡತನ ರೇಖೆಗಿಂತ ಕಡಿಮೆ ಇರುವವರ ಸಂಖ್ಯೆ ಬಹಳ ಕಡಿಮೆ ಇರಬೇಕು. ಅದಕ್ಕೆ ಪರಿಷ್ಕರಣೆ ಮಾಡುತ್ತಿದ್ದೇವೆ.

ಏಕಾಏಕಿ ಬಿಪಿಎಲ್‌ ಕಾರ್ಡ್‌ ತೆಗೆಯುವುದರಿಂದ ಅನ್ಯಾಯ ಆಗಲ್ಲವೇ?

ಒಬ್ಬ ಬಿಪಿಎಲ್‌ ಕಾರ್ಡುದಾರನಿಗೂ ಅನ್ಯಾಯವಾಗಲು ಅವಕಾಶವಿಲ್ಲ. ಎಪಿಎಲ್‌ ಮಾಡುವಂತ ಕಾಲದಲ್ಲಿ ಒಂದಿಬ್ಬರು ಬಿಪಿಎಲ್‌ನವರು ಬಿಟ್ಟುಹೋದರೆ ತಕ್ಷಣವೇ ಅವರನ್ನು ಬಿಪಿಎಲ್‌ಗೆ ವಾಪಸ್‌ ದೊರೆಯುವಂತೆ ಎಚ್ಚರ ವಹಿಸುತ್ತೇವೆ. ಎಪಿಎಲ್‌ ಒಂದೋ ಎರಡೋ ಬಿಟ್ಟುಹೋದರೆ ಪರವಾಗಿಲ್ಲ. ಆದರೆ ಬಿಪಿಎಲ್‌ಗೆ ಅರ್ಹರಾದ ಒಬ್ಬರಿಗೂ ಅನ್ಯಾಯವಾಗಬಾರದು. ಅದು ಕಾಂಗ್ರೆಸ್ ಮತ್ತು ನಮ್ಮ ಸರ್ಕಾರದ ಉದ್ದೇಶ. 

ಆಹಾರ ಇಲಾಖೆಯ ಸರ್ವೆಯಲ್ಲಿ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ಗೆ ಅರ್ಹರಾದವರ ಅಂಕಿಅಂಶಗಳು ಇವೆಯೇ?

ಆಹಾರ ಇಲಾಖೆಯಲ್ಲಿ ಇರುವ ಬಿಪಿಎಲ್‌, ಅಂತ್ಯೋದಯ ಮತ್ತು ಎಪಿಎಲ್‌ ಕಾರ್ಡ್‌ಗಳ ಅಂಕಿ ಅಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ. ಈ ಕುರಿತು ಅಧಿಕಾರಿಗೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ. ಏಕಾಏಕಿ ಪರಿಷ್ಕರಣೆ ಕಾರ್ಯ ಆರಂಭಿಸಿಲ್ಲ. 64 ಸಾವಿರ ತೆರಿಗೆ ಪಾವತಿದಾರರು ಇವತ್ತು ಬಿಪಿಎಲ್‌ ಪಡೆದಿದ್ದಾರೆ. 3 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರ ಪಡೆದ ಬಿಪಿಎಲ್‌ ಪರಿವರ್ತನೆ ಮಾಡುತ್ತಿದ್ದೇವೆ.

ಕಾರ್ಡ್‌ ಪರಿವರ್ತನೆ ಹಿಂದೆ ಗ್ಯಾರಂಟಿ ಯೋಜನೆಗೆ ಹಣದ ಕೊರತೆ ಪ್ರಮುಖ ಕಾರಣವೇ?

ಸರ್ಕಾರಕ್ಕೆ ಗ್ಯಾರಂಟಿ ಹೊರೆಯಾಗಿಲ್ಲ. ಅಂತಹ ಅನುಮಾವಿದ್ದರೆ ತಲೆಯಿಂದ ತೆಗೆದುಹಾಕಿಬಿಡಿ. ಬಜೆಟ್‌ನಲ್ಲಿ 8 ಸಾವಿರ ಕೋಟಿ ಅನುದಾನ ಕೊಡಲಾಗಿದೆ. ಪ್ರತಿ ತಿಂಗಳು 650ರಿಂದ 700 ಕೋಟಿ ರು.ಗಳನ್ನು ಡಿಬಿಟಿ ಮಾಡುತ್ತಿದ್ದೇವೆ. ಕೇಂದ್ರ ನೀಡುವ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿಯಾಗಿ ರಾಜ್ಯವೂ 5 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದ್ದೇವು. ಆದರೆ, ಕೇಂದ್ರ ಸರ್ಕಾರ ಈ ಹಿಂದೆ ನಮಗೆ ಅಕ್ಕಿ ಕೊಡದ ಕಾರಣ ಡಿಬಿಟಿ ಮೂಲಕ ಅಕ್ಕಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕುತ್ತಿದ್ದೇವೆ.

ಕೇಂದ್ರ ಸರ್ಕಾರ ಇನ್ನೂ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಿದೆಯೇ?

ಎಫ್‌ಸಿಐ ಮೂಲಕ ಅಕ್ಕಿ ಕೊಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭರವಸೆ ನೀಡಿದ್ದಾರೆ. . ಹೀಗಾಗಿ, ಕೇಂದ್ರದ ಮಾನದಂಡದ ಅಡಿಯಲ್ಲಿ ಬರದ ಸುಮಾರು 16 ಲಕ್ಷ ಹೆಚ್ಚುವರಿ ಬಿಪಿಎಲ್‌ ಕಾರ್ಡುದಾರರು ರಾಜ್ಯದಲ್ಲಿ ಇದ್ದಾರೆ. ಅವರಿಗೂ ಅಕ್ಕಿ ಕೊಡುವುದು ಸರ್ಕಾರದ ನಿಶ್ಚಯ. ಹೀಗಾಗಿ ಹೆಚ್ಚುವರಿಯಾಗಿರುವ 16 ಲಕ್ಷ ಪ್ರತಿ ಕೆಜಿಗೆ 28 ರು.ನಂತೆ ಅಕ್ಕಿ ಖರೀದಿಸಲಿದ್ದೇವೆ. ಆದರೆ, ಇದಕ್ಕೆ ಹಣದ ಕೊರತೆ ಇಲ್ಲ. ಸಕಾಲಕ್ಕೆ ಹಣ ಕೊಡುತ್ತಿದ್ದೇವೆ. ಇದಕ್ಕಾಗಿ ಬಜೆಟ್‌ನಲ್ಲಿ ಕಳೆದ ಬಾರಿ 10 ಸಾವಿರ ಕೋಟಿ ರು. ಇಡಲಾಗಿತ್ತು. ಆದರೆ ಸಂಪೂರ್ಣ ಖರ್ಚು ಆಗಿರಲಿಲ್ಲ. ಆದ್ದರಿಂದ ಈ ಬಾರಿ 8 ಸಾವಿರ ಕೋಟಿ ರು.ಗಳನ್ನು ಬಜೆಟ್‌ನಲ್ಲಿ ಇಡಲಾಗಿದೆ.

 ಫಲಾನುಭವಿಗಳ ಖಾತೆಗೆ ಸಮರ್ಕವಾಗಿ ಡಿಬಿಟಿ ಮೂಲಕ ದುಡ್ಡು ಹೋಗುತ್ತಿಲ್ಲ ಎಂಬ ಆರೋಪವಿದೆ?

ಬಿಜೆಪಿಯವರು ಸರ್ಕಾರದ ಬಳಿ ದುಡ್ಡು ಇಲ್ಲ, ಕೊಡಲು ಆಗುತ್ತಿಲ್ಲ ಎಂದು ಆರೋಪ ಮಾಡುತ್ತಿರುವುದು ಕೇವಲ ರಾಜಕೀಯ ಕಾರಣಕ್ಕೆ. ಇದು ಅಪ್ಪಟ್ಟ ಸುಳ್ಳು. ದುಡ್ಡು ಇಲ್ಲ ಅಂದರೆ, ಪ್ರತಿ ತಿಂಗಳು ಡಿಬಿಟಿ ದುಡ್ಡು ಖಾತೆಗೆ ಹೋಗುತ್ತಿದೆಯಲ್ಲ. ಅದು ಸುಳ್ಳೇ? 1.25 ಕೋಟಿ ಜನರಿಗೆ ಡಿಬಿಟಿ ಮೂಲಕ ಹಣ ಸಂದಾಯವಾಗಿದೆ. ಇದೆಲ್ಲಾ ರಾಜಕೀಯವಾಗಿ ಆರೋಪ ಮಾಡುತ್ತಿದ್ದಾರೆ ಅಷ್ಟೆ. ಇದನ್ನು ಹೆಚ್ಚು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ.

ಕಣ್ಣೀರು ಹೇಳಿ ಕೇಳಿ ಬರುವುದಿಲ್ಲ, ಚನ್ನಪಟ್ಟಣವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ: ನಿಖಿಲ್‌ ಕುಮಾರಸ್ವಾಮಿ

ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ, ಮುನಿಯಪ್ಪ ಅವರನ್ನು ಸಿಎಂ ಮಾಡಿ ಎಂದು ಆಗ್ರಹಿಸಿದ್ದಾರಲ್ಲ?

ಮುನಿಯಪ್ಪ ಮುಖ್ಯಮಂತ್ರಿ ಆಗಬೇಕು ಎಂಬುದು ಸಮಾಜದ ಸ್ವಾಮೀಜಿಯವರ ಕಳಕಳಿ. ಪರಿಶಿಷ್ಟ ಜಾತಿಯಲ್ಲಿ ನನ್ನ ಹೊರತು ಏಳು ಸಾರಿ ಗೆದ್ದ ಪುಣ್ಯಾತ್ಮರು ಯಾರಿದ್ದಾರೆ? ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಟ್ಟು ಬೇರೆ ಹಿರಿಯರು ಯಾರಿದ್ದಾರೆ?

ಮುಖ್ಯಮಂತ್ರಿ ಸ್ಥಾನದ ಕುರಿತು ಪ್ರಸ್ತಾಪವಾಗುತ್ತಿರುವುದರ ಹಿಂದೆ ಸಿಎಂ ಸ್ಥಾನದ ಬದಲಾವಣೆ ಚರ್ಚೆ ಏನಾದರು ಇದೆಯೇ?

ಸಿಎಂ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ಐದು ವರ್ಷ ಅವರೇ ಮುಂದುವರೆಯುತ್ತಿದ್ದಾರೆ. ನಾನು ಕಾಂಗ್ರೆಸ್‌ ಪಕ್ಷದ ಶಿಸ್ತಿನ ಸಿಪಾಯಿ. ಮುಂದೆ ಪಕ್ಷದಲ್ಲಿ ಯಾವತ್ತಾದರೂ ಪರಿಶಿಷ್ಟ ಜಾತಿಯವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂಬ ಚರ್ಚೆ ಬಂದಾಗ ಈ ಬೇಡಿಕೆ ಇಡುತ್ತೇವೆ. ಯಾವತ್ತು ಕೊಡುತ್ತಾರೋ ಅದು ಹೈಕಮಾಂಡ್‌ಗೆ ಬಿಟ್ಟದ್ದು.

ಪರಿಶಿಷ್ಟ ಜಾತಿಯವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂಬುದು ನಿಮ್ಮ ಬೇಡಿಕೆಯೇ?

ರಾಜ್ಯದಲ್ಲಿ ಶೇ.25ರಷ್ಟು ಪರಿಶಿಷ್ಟ ಜಾತಿ ಮತ್ತು ವರ್ಗದವರು ಇದ್ದೇವೆ. ಅವರಲ್ಲಿ ಶೇ.75ರಷ್ಟು ಓಟುಗಳನ್ನು ಕಾಂಗ್ರೆಸ್‌ ಹಾಕುತ್ತಿದ್ದಾರೆ. ದಲಿತರಲ್ಲಿ ಯಾರಾದರು ಸಿಎಂ ಆಗಲಿ. ಪರಿಶಿಷ್ಟ ಜಾತಿ, ವರ್ಗದವರು ಸಿಎಂ ಆಗಲು ಅರ್ಹರಲ್ಲವೇ ? ಅದನ್ನು ಕೇಳುವುದರಲ್ಲಿ ತಪ್ಪೇನು?

ಕಾಂಗ್ರೆಸ್‌ ಶಾಸಕರನ್ನು ಖರೀದಿಸಿ, ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳಿವೆ?

ಕಾಂಗ್ರೆಸ್‌ ಪಕ್ಷದ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. 136 ಮಂದಿ ಶಾಸಕರು ಇದ್ದೇವೆ. ಶಾಸಕರನ್ನು ಖರೀದಿ ಮಾಡುತ್ತಾರೆನ್ನುವ ವಿಷಯ ನನಗೆ ಗೊತ್ತಿಲ್ಲ.
 

click me!