
ಬೆಂಗಳೂರು (ಮಾ.3): ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣದ ಆರೋಪಿಯ ಬಗ್ಗೆ ಕೆಲವು ಪ್ರಮುಖವಾದ ಕುರುಹುಗಳು ಸಿಕ್ಕಿದ್ದು, ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಈವರೆಗಿನ ತನಿಖೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ವಿಚಾರಗಳನ್ನು ಚರ್ಚಿಸಲಾಗಿದೆ. ಆರೋಪಿ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪರಿಶೀಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದರು.
ಎನ್‌ಐಎ, ಎನ್‌ಎಸ್‌ಜಿ ಅಧಿಕಾರಿಗಳು ಸಹ ತಮ್ಮದೇ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಬ್ಬೊಬ್ಬರಿಗೆ ಸಹಕಾರದಿಂದ ಪ್ರಕರಣವನ್ನು ಪತ್ತೆಹಚ್ಚುತ್ತೇವೆ. ಯಾರು ಆತಂಕಪಡುವ ಅಗತ್ಯವಲ್ಲ ಎಂದು ಬೆಂಗಳೂರು ನಗರದ ಜನತೆಗೆ ಮನವಿ ಮಾಡುತ್ತೇನೆ. ನಗರವನ್ನು ಸೇಫ್‌ಸಿಟಿ ಮಾಡಲು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದೇವೆ. ಪೊಲೀಸರು ಗಸ್ತು ತಿರುಗುವುದು, ಸೂಕ್ಷ್ಮ ಚಲನವಲನಗಳ ಮೇಲೆ ನಿಗಾವಹಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಎಲ್ಲ ವಿಭಾಗದ ಡಿಸಿಪಿಗಳಿಗೆ ಸೂಚಿಸಿದ್ದೇನೆ. ತನಿಖೆಗೆ ತೊಂದರೆಯಾಗುವುದರಿಂದ ಟೆಕ್ನಿಕಲ್ ಮಾಹಿತಿಯನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ತಿಳಿಸಿದರು.
ಮಾ.8ರಂದು ರಾಮೇಶ್ವರಂ ಕೆಫೆ ಮರು ಆರಂಭ; ಬಾಂಬ್ ಸಿಡಿಸಿದರೆ ನಾವು ಬೆದರೊಲ್ಲ ಎಂದ ಸ್ಥಳೀಯರು!
ವರದಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ: ಇನ್ನು ವಿಧಾನಸೌಧದ ಆವರಣದಲ್ಲಿ ಘೋಷಣೆ ಕೂಗಿದ ಆರೋಪದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಎಫ್‌ಎಸ್‌ಎಲ್‌ನ ವೈಜ್ಞಾನಿಕ ವರದಿಗಾಗಿ ಕಾಯುತ್ತಿದ್ದು, ಸಂಪೂರ್ಣ ವರದಿ ಬಂದ ನಂತರ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಮುಲಾಜಿಲ್ಲದೇ, ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಮಾತನ್ನು ಸದನದಲ್ಲಿಯೂ ಹೇಳಿದ್ದೇನೆ. ಯಾವುದೇ ಎಫ್‌ಎಸ್‌ಎಲ್ ವರದಿ ಸ್ಪಷ್ಟಿಕರೀಣ ಪ್ರಶ್ನೆ ಬರುವುದಿಲ್ಲ. ಒಮ್ಮೆ ವರದಿ ಬಂದರೆ ಮುಗಿಯಿತು. ಎರಡನೇ ವರದಿ, ಮೂರನೇ ವರದಿ ಕೊಡುವಂತೆ ನಾವು ಹೇಳಲು ಹೋಗುವುದಿಲ್ಲ. ವರದಿ ಮುಚ್ಚಿಡುವ ಅಗತ್ಯವೇ ಇಲ್ಲ. ಬಿಜೆಪಿಯವರು ಆರೋಪ ಮಾಡಿಕೊಳ್ಳಲಿ, ನಾವು ಉತ್ತರ ನೀಡುತ್ತೇವೆ. ನಾನು ಅಧಿಕೃತವಾಗಿ ಹೇಳುತ್ತಿದ್ದೇನೆ, ವರದಿ ಕೈ ಸೇರಿದ ತಕ್ಷಣ ಕ್ರಮ ಜರುಗಿಸಲಾಗುವುದು ಎಂದರು.
ಬಾಂಬ್ ಇಟ್ಟ ನಂತರ ಶಂಕಿತ ಕಾಲ್ ಮಾಡಿದ್ಯಾರಿಗೆ..? ಎಲ್ಲಿಗೆ ಬಂತು ಬಾಂಬ್ ಬ್ಲಾಸ್ಟ್ ತನಿಖೆ..? ಆರೋಪಿ ಎಲ್ಲಿ..?
ಇನ್ನು ಗೃಹ ಇಲಾಖೆಯ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ, ಗುಪ್ತಚರ ದಳದ ಎಡಿಜಿಪಿ ಶರತ್ ಚಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್, ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಸೇರಿದಂತೆ ನಗರದ ಎಲ್ಲ ವಿಭಾಗದ ಡಿಸಿಪಿಗಳು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ