ರೈತರಿಗೆ ಬಿಸಿತುಪ್ಪವಾದ ಎತ್ತಿನಹೊಳೆ ಯೋಜನೆ: ಪರಿಹಾರವೂ ಇಲ್ಲ, ನೆಮ್ಮದಿಯೂ ಇಲ್ಲ!

By Kannadaprabha News  |  First Published Jul 6, 2023, 3:21 PM IST

ಯೋಜನೆ ಬರದ ನಾಡೆಂದೆ ಪ್ರಸಿದ್ಧಿಯಾಗಿರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸುವ ಮಹತ್ವಾಕಾಂಕ್ಷೆ ನೀರಾವರಿ ಯೋಜನೆಯಾಗಿದೆ. ಸದರಿ ಯೋಜನೆಗೆ ಭೂಮಿ ಬಿಟ್ಟುಕೊಟ್ಟಿರುವ ಕಲ್ಪತರು ನಾಡಿನ ಭೂ ಸಂತ್ರಸ್ತ ರೈತರಿಗೆ ಈ ಯೋಜನೆ ಒಂದು ರೀತಿಯಲ್ಲಿ ಬಿಸಿತುಪ್ಪವಾಗಿ ಪರಿಣಮಿಸಿದೆ.


ತಿಪಟೂರು (ಜು.6) : ರಾಜ್ಯ ಸರ್ಕಾರ ರೈತರ ನೀರಾವರಿ ಹಾಗೂ ಜನಸಾಮಾನ್ಯರಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವ ಸಲುವಾಗಿ ಹತ್ತು ಹಲವಾರು ಸಣ್ಣ ಹಾಗೂ ಬೃಹತ್‌ ನೀರಾವರಿ ಯೋಜನೆಗಳನ್ನು ರೂಪಿಸುವುದು ಸರ್ವೆ ಸಾಮಾನ್ಯ. ಇಂತಹ ಯೋಜನೆಗಳಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯೂ ಒಂದು ಪ್ರಮುಖ ಬೃಹತ್‌ ಯೋಜನೆಯಾಗಿದೆ. ಈ ಯೋಜನೆಗೆ ಕಳೆದ ಆರೇಳು ವರ್ಷಗಳಿಂದ ಸಾವಿರಾರು ಕೋಟಿ ರು. ಗಳು ಖರ್ಚಾಗಿದ್ದರೂ ತಿಪಟೂರು ತಾಲೂಕಿನ ಭೂಸಂತ್ರಸ್ತ ರೈತರಿಗೆ ನಯಾಪೈಸೆ ಹಣ ಬಿಡುಗಡೆಯಾಗಿಲ್ಲದಿರುವುದು ಒಂದು ಕಡೆಯಾದರೆ ಕಾಮಗಾರಿ ಬಹುತೇಕ ನಿಂತ ನೀರಿನಂತಾಗಿದ್ದು ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿರುವ ಬಜೆಟ್‌ನಲ್ಲಾದರೂ ಭೂಸಂತ್ರಸ್ತ ರೈತರಿಗೆ ಹಣ ಒದಗಿಸಿ ಕೂಡಲೇ ಪರಿಹಾರ ಕೊಡುವರೇ ಎಂದು ಇಲ್ಲಿನ ಭೂಸಂತ್ರಸ್ತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಈ ಯೋಜನೆ ಬರದ ನಾಡೆಂದೆ ಪ್ರಸಿದ್ಧಿಯಾಗಿರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸುವ ಮಹತ್ವಾಕಾಂಕ್ಷೆ ನೀರಾವರಿ ಯೋಜನೆಯಾಗಿದೆ. ಸದರಿ ಯೋಜನೆಗೆ ಭೂಮಿ ಬಿಟ್ಟುಕೊಟ್ಟಿರುವ ಕಲ್ಪತರು ನಾಡಿನ ಭೂ ಸಂತ್ರಸ್ತ ರೈತರಿಗೆ ಈ ಯೋಜನೆ ಒಂದು ರೀತಿಯಲ್ಲಿ ಬಿಸಿತುಪ್ಪವಾಗಿ ಪರಿಣಮಿಸಿದೆ.

Latest Videos

undefined

 

ಎತ್ತಿನಹೊಳೆ ಜಿ.ಎಸ್‌.ಪರಮಶಿವಯ್ಯರ ಕನಸು: ಮಾಧವ

2019ಕ್ಕೆ ಸದರಿ ಯೋಜನೆಯ ಕಾಮಗಾರಿ ಮುಗಿದು ಯೋಜನೆಯ ಸಂಪೂರ್ಣ ವ್ಯಾಪ್ತಿಗೆ ನೀರು ಹರಿಯಬೇಕಿತ್ತಾದರೂ, ಸರ್ಕಾರಗಳ ಬದಲಾವಣೆ ಹಾಗೂ ಅವುಗಳ ನಿರಾಸಕ್ತಿ ಜೊತೆಗೆ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಗಳೇ ಸರಿಯಾಗಿ ನಡೆಯುತ್ತಿಲ್ಲ. ಬೃಹತ್‌ ನೀರಾವರಿ ಯೋಜನೆಗೆ ಮುಖ್ಯವಾಗಿ ಭೂಸ್ವಾಧೀನವೇ ಪ್ರಧಾನವಾಗಿದ್ದು, ಯೋಜನೆ ಪ್ರಾರಂಭವಾಗಿ 6-7 ವರ್ಷಗಳಾದರೂ ಭೂಸ್ವಾಧೀನದಂತಹ ಪ್ರಮುಖ ಸಮಸ್ಯೆಯನ್ನೇ ಸರ್ಕಾರ ಮುಗಿಸಿ ಪರಿಹಾರ ನೀಡಲು ದಿವ್ಯ ನಿರ್ಲಕ್ಷ್ಯ ತೋರಿಸುತ್ತಿರುವುದು ನಾಚಿಕೆಗೇಡಿನ ಕೆಲಸವಾಗಿದ್ದು, ಇಲ್ಲಿನ ಭೂಸಂತ್ರಸ್ತರಲ್ಲಿ ದೊಡ್ಡಮಟ್ಟದ ಆಕ್ರೋಶ ಹುಟ್ಟಿಸಿದೆ. ಸರ್ಕಾರದ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಪ್ರತಿಷ್ಠೆಯಾಗಿಸಿ ಹನಿಹನಿ ನೀರಿಗಾಗಿ ಪರಿತಪಿಸುತ್ತಿರುವ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಗಳ ಜನತೆಗೆ ಈಗಾಗಲೆ ಸಾಕಷ್ಟುಕನಸುಗಳನ್ನೂ ಸಹ ಬಿತ್ತಿದೆ. ಎತ್ತಿನಹೊಳೆ ನೀರು ನಮ್ಮ ಭಾಗದ ಕೆರೆಗಳಿಗೆ ಹರಿದರೆ ಅಂತರ್‌ಜಲ ಅಭಿವೃದ್ಧಿಯಾಗಿ ಕೃಷಿಗೆ ಉತ್ತಮ ಆಯಾಮ ಸಿಗಲಿದೆ ಎಂಬ ಭರವಸೆಯಲ್ಲೇ ಕಳೆದ 4-5 ವರ್ಷಗಳಿಂದಲೂ ಜನರು ಜಾತಕ ಪಕ್ಷಿಯಂತೆ ಕಾಯ್ದು ಕುಳಿತಿದ್ದಾರೆ.

ಭೂಸಂತ್ರಸ್ತರ ಗೋಳು:

ಎತ್ತಿನಹೊಳೆ ಯೋಜನೆಗೆ ತಿಪಟೂರು ತಾಲೂಕಿನಲ್ಲಿ ಸಾವಿರಾರು ಎಕರೆ ಉತ್ತಮ ಗುಣಮಟ್ಟದ ರೈತರ ಕೃಷಿ ಜಮೀನುಗಳು ಬಳಕೆಯಾಗುತ್ತಿವೆ. ಆದರೆ ಕಳೆದ 4-5 ವರ್ಷಗಳ ಹಿಂದೆ ಕಾಮಗಾರಿಗೆ ಅವಶ್ಯವಿರುವ ಜಮೀನುಗಳನ್ನು ಸರ್ಕಾರದ ಪರವಾಗಿ ಖಾಸಗಿ ಕಂಪನಿಯೊಂದು ಗುರ್ತಿಸಿತ್ತು. ನಂತರ ಸರ್ವೆ ಇಲಾಖೆ ಭೂಸ್ವಾಧೀನವಾಗುವಷ್ಟುಜಮೀನುಗಳ ವಿಸ್ತೀರ್ಣವನ್ನು ಗುರ್ತಿಸಿ ಮಾರ್ಕ್ ಮಾಡಲಾಗಿತ್ತು. ಇದಾದ ಬಳಿಕ ಸದರಿ ಯೋಜನೆಯ ಭೂಸ್ವಾಧೀನ ಇಲಾಖೆಯಿಂದ ಸಂಬಂಧಿಸಿದ ರೈತರಿಗೆ ನೋಟಿಸ್‌ ನೀಡಿ ಭೂಸ್ವಾಧೀನವಾಗುವ ಜಮೀನುಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಅಥವಾ ಅವುಗಳ ಹಕ್ಕುಗಳನ್ನು ಬದಲಾಯಿಸಬಾರದು. ಯಾವುದೇ ರೀತಿಯ ಬೆಳೆಗಳನ್ನು ಬೆಳೆಯಬಾರದು ಎಂದು ತಿಳಿಸಿತ್ತು. ಆದರೆ ಇದಾಗಿ 3-4 ವರ್ಷಗಳೇ ಕಳೆದರೂ ಭೂಸ್ವಾಧೀನಾಧಿಕಾರಿಗಳು ಮುಂದಿನ ಕ್ರಮಗಳನ್ನು ಜರುಗಿಸದ ಕಾರಣ ಭೂಸಂತ್ರಸ್ತ ರೈತರಿಗೆ ಯೋಜನೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಸ್ವಾಧೀನವಾಗಲಿರುವ ಜಮೀನನ್ನು ರೈತರು ಮಾರಾಟ ಮಾಡುವ ಹಾಗೂ ಇಲ್ಲ. ತಮ್ಮ ಜಮೀನುಗಳ ಶಾಶ್ವತ ಅಭಿವೃದ್ಧಿಗೆ ಬಂಡವಾಳವನ್ನೂ ಹಾಕುವಂತಿಲ್ಲ. ಬೆಳೆಗಳನ್ನು ಬೆಳೆಯುವಂತಿಲ್ಲ. ಇರುವ ಬೆಳೆಗಳನ್ನು ಉಳಿಸಿಕೊಳ್ಳೋಣ ಅಂದರೆ ಇಂದೋ, ನಾಳೆಯೋ ಯೋಜನೆಯ ಪಾಲಾಗಿಬಿಡಲಿವೆ ಏನು ಮಾಡುವುದು ಎಂಬ ಯೋಚನೆ, ಚಿಂತೆಗಳಲ್ಲೇ ತಾಲೂಕಿನ ಭೂ ಸಂತ್ರಸ್ಥರು ತಮ್ಮ ಜಮೀನುಗಳನ್ನು ಹಾಳುಬಿಟ್ಟು ಇತ್ತ ಬೆಲೆಯೂ ಇಲ್ಲ, ಅತ್ತ ಪರಿಹಾರವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಬೆಲೆ ನಿಗದಿಗೊಳಿಸಿಲ್ಲ: ಯೋಜನೆಗೆ ಒಳಪಡುವ ಭೂ ಸಂತ್ರಸ್ತ ರೈತರ ಜಮೀನುಗಳಿಗೆ ಯಾವ ಆಧಾರದಲ್ಲಿ, ಯಾವ ಲೆಕ್ಕಾಚಾರದಲ್ಲಿ ಬೆಲೆ ಕಟ್ಟಿಹಣ ನೀಡುವರು ಎಂಬ ಬಹುದೊಡ್ಡ ಗೊಂದಲದಲ್ಲಿ ಈಗಾಗಲೇ ಭೂ ಸಂತ್ರಸ್ತ ರೈತ ಕುಟುಂಬಗಳು ಮುಳುಗಿವೆ. ಜಿಲ್ಲಾಧಿಕಾರಿಗಳಾಗಲಿ, ಭೂಸ್ವಾಧೀನಾಧಿಕಾರಿಗಳಾಗಲಿ ಈವರೆಗೂ ಭೂಸಂತ್ರಸ್ಥರ ಸಭೆಯನ್ನು ಗ್ರಾಮ ಮಟ್ಟದಲ್ಲಿ ಕರೆದು ಸಂತ್ರಸ್ತರಲ್ಲಿರುವ ಹತ್ತಾರು ಗೊಂದಲಗಳಿಗೆ ಸರಿಯಾದ ಉತ್ತರವನ್ನೂ ನೀಡಿಲ್ಲ. ಒಟ್ಟಾರೆ ಭೂಸಂತ್ರಸ್ತರು ಅಂತೆಕಂತೆಗಳ ಮಾತುಗಳನ್ನು ಕೇಳಿಕೊಂಡು ಕಷ್ಟಪಟ್ಟು ಸಂಪಾದಿಸಿ ಜೋಪಾನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಮೀನುಗಳು ಎತ್ತಿನಹೊಳೆ ಯೋಜನೆಗೆ ಬಲಿಯಾಗುತ್ತಿದ್ದು, ಭವಿಷ್ಯದ ಜೀವನ ಹೇಗೆಂದು ತಾಲೂಕಿನ ಭೂ ಸಂತ್ರಸ್ತ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ತುಂಬಾ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಕೆಲ ರೈತರು ಗುತ್ತಿಗೆದಾರರಿಂದ ಖಾಸಗಿಯಾಗಿ ಬೆಳೆ ಪರಿಹಾರ ಮಾತ್ರ ಪಡೆದು ಕಾಮಗಾರಿ ನಡೆಸಲು ಭೂಮಿಯನ್ನು ಬಿಟ್ಟುಕೊಟ್ಟು ಸರ್ಕಾರ ನೀಡುವ ಪರಿಹಾರಕ್ಕೆ ಜಾತಕಪಕ್ಷಿಗಳಂತೆ ಕಾಯುತ್ತಿದ್ದರೆ, ಸರ್ಕಾರ ಮಾತ್ರ ಪರಿಹಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇದರಿಂದ ಭೂಮಿ ಕಳೆದುಕೊಂಡ ರೈತರ ಪಾಡು ಹೇಳತೀರದಾಗಿದೆ. ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇರುವ ಭೂಮಿಯನ್ನು ಕೊಟ್ಟು ಸುಮ್ಮನೆ ಕೂರುವಂತಾಗಿದೆ. ಸರ್ವೆ ಮಾಡಿದ ಭೂಮಿಯಲ್ಲಿ ಬೆಳೆ ಬೆಳೆದರೆ ಯಾವಾಗ ಬಂದು ಕೆಲಸ ಪ್ರಾರಂಭಿಸುತ್ತಾರೋ ಎಂಬ ಭಯದಲ್ಲಿ ತಾಲೂಕಿನ ಸಂತ್ರಸ್ತ ರೈತರು ತಮ್ಮ ಭೂಮಿಯನ್ನೇ ಹಾಳು ಬಿಡುವಂತಾಗಿದೆ. ಸರ್ಕಾರದ ಈ ನಡೆಯಿಂದ ತಾಲೂಕಿನ ನೂರಾರು ರೈತರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಈ ಸಂಬಂಧ ಜನಪ್ರತಿನಿಧಿಗಳ ಬಳಿ ಕೇಳಿದರೆ ಅದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಮಾತನಾಡುತ್ತಾರೆ ಎಂಬುದು ಭೂ ಸಂತ್ರಸ್ತ ರೈತರ ಆಕ್ರೋಶವಾಗಿದೆ.

ಬಿಜೆಪಿ ಸರ್ಕಾರಕ್ಕೆ ಎತ್ತಿನಹೊಳೆ ಯೋಜನೆ ಅನುಷ್ಠಾನದಲ್ಲಿ ಕಾಳಜಿ ಇಲ್ಲ: ರಾಜೇಂದ್ರ

ನಮ್ಮ 4 ಎಕರೆ ಜಮೀನು ಎತ್ತಿನಹೊಳೆ ಯೋಜನೆಗೆ ಹೋಗುತ್ತಿದ್ದು, ಕಳೆದ 3 ವರ್ಷದಲ್ಲಿ ನೋಟಿಸ್‌ ನೀಡಿದ್ದಾರೆ. ನಂತರ ಸರ್ವೆಗೆ ಬಂದ ಅಧಿಕಾರಿಗಳು ಜಮೀನಿಗೆ ಎಷ್ಟುಹಣ ನೀಡುತ್ತೇವೆ ಎಂಬುದನ್ನು ತಿಳಿಸಿಲ್ಲ. ಜಮೀನಿನಲ್ಲಿರುವ ಗಿಡಮರಗಳಿಗೂ ಯಾವ ಬೆಲೆ ನೀಡುತ್ತಾರೆ ಎಂಬುದು ಸಹ ತಿಳಿದಿಲ್ಲ. ಜಮೀನು ಕಳೆದುಕೊಳ್ಳುತ್ತೇವಲ್ಲ ಎಂಬ ಭಯ ಒಂದು ಕಡೆಯಾದರೆ ಸೂಕ್ತ ಬೆಲೆ ನೀಡುತ್ತಾರೊ ಇಲ್ಲವೋ ಎಂಬ ಆತಂಕದಲ್ಲಿ ಬದುಕುತ್ತಿದ್ದೇವೆ. ಹೊಸ ಸರ್ಕಾರ ಬಂದು 2 ತಿಂಗಳಾಗುತ್ತಾ ಬಂದಿದ್ದರೂ ಎತ್ತಿನಹೊಳೆ ಯೋಜನೆ ಭೂಪರಿಹಾರದ ಬಗ್ಗೆ ಏನೂ ಮಾತನಾಡಿಲ್ಲ.

- ಸ್ವಾಮಿ ಮಾರುಗೊಂಡನಹಳ್ಳಿ, ಭೂ ಸಂತ್ರಸ್ಥ ರೈತ.

ನಾನಾ ಕಾರಣಗಳಿಂದ ಎತ್ತಿನಹೊಳೆ ಯೋಜನೆಗೆ ಬೇಕಾಗಿರುವ ಜಮೀನುಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು, ಭೂ ಸಂತ್ರಸ್ತರಿಗೆ ಸೂಕ್ತಪರಿಹಾರ ನೀಡಿ ಬಿಡಿಸಿಕೊಂಡು ನಮ್ಮ ಸಂಸ್ಥೆಗೆ ಹಸ್ತಾಂತರಿಸಲಾಗಿಲ್ಲ. ಅವರು ಭೂಮಿಯನ್ನು ನಮಗೆ ಬಿಡಿಸಿಕೊಟ್ಟತಕ್ಷಣವೇ ಕಾಮಗಾರಿ ಆರಂಭಿಸಲು ಕಾಯುತ್ತಿದ್ದೇವೆ.

ಅನಿಲ್‌ರೆಡ್ಡಿ ಗುತ್ತಿಗೆದಾರರು, ಎತ್ತಿನಹೊಳೆ ಯೋಜನೆ, ತಿಪಟೂರು.

click me!