ಸಿದ್ದರಾಮಯ್ಯ ಅವರೇ ಸಿಎಂ ಎಂದ ಪುತ್ರ ಯತೀಂದ್ರ| ಮುಖ್ಯಮಂತ್ರಿ ಸ್ಥಾನ ವಂಶದ ಆಸ್ತಿಯಲ್ಲ ಎಂದ ಈಶ್ವರಪ್ಪ| ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕ| ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದ ಈಶ್ವರಪ್ಪ| ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ರಾಜ್ಯದ ಜನತೆಯ ಆಶಯ’|
ಮಲ್ಲಿಕಾರ್ಜುನ ಹೊಸಮನಿ
ಬಾದಾಮಿ(ಫೆ.19): ತಂದೆ ಸಿದ್ದರಾಮಯ್ಯ ಅವರೇ ತಮ್ಮ ಪಾಲಿಗೆ ಮುಖ್ಯಮಂತ್ರಿ ಎಂಬ ಶಾಸಕ ಯತೀಂದ್ರ ಹೇಳಿಕೆಗೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಕೆಲವರು ಮುಖ್ಯಮಂತ್ರಿ ಸ್ಥಾನವನ್ನು ವಂಶದ ಆಸ್ತಿ ಎಂದು ತಿಳಿದಿದ್ದಾರೆ ಎಂದು ಯತೀಂದ್ರ ಅವರಿಗೆ ಕಿಚಾಯಿಸಿರುವ ಈಶ್ವರಪ್ಪ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಯಾರಾಗಬೇಕೆಂಬುದು ಜನತೆ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಬಾದಾಮಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಕೂಡ ಹೋದಲ್ಲಿ ಬಂದಲ್ಲಿ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ, ಇಂತಹ ಕೀಳು ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ಮಾಜಿ ಸಿಎಂ ಕಾಲೆಳೆದರು.
ಇದೇ ವೇಳೆ ಈಶ್ವರಪ್ಪ ತಲೆಯಲ್ಲಿ ಮೆದುಳಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ಸಿದ್ದರಾಮಯ್ಯ ಅವರ ಕುರಿತು ಹೇಳುವುದು ಬಹಳಷ್ಟಿದೆ, ಇನ್ನು ನಾಲ್ಕು ದಿನಗಳಲ್ಲಿ ಹೇಳಬೇಕಿರುವುದನ್ನೆಲ್ಲಾ ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ಇನ್ನು ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆಯಲ್ಲಿ ಕಮಲ ಅರಳುವುದು ಗ್ಯಾರಂಟೀ ಎಂದ ಈಶ್ವರಪ್ಪ, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬುದು ರಾಜ್ಯದ ಜನರ ಬಯಕೆಯಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದರು.