ಕನ್ನಡದ ಅಭ್ಯರ್ಥಿಗಳಿಗೆ ಕೆಪಿಎಸ್ಸಿ ಅನ್ಯಾಯ!

By Kannadaprabha NewsFirst Published Oct 21, 2019, 10:06 AM IST
Highlights

ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಖಾಲಿಯಿರುವ ‘ಸಮಾಜ ವಿಜ್ಞಾನ’ ವಿಷಯದ ಶಿಕ್ಷಕರ ಹುದ್ದೆಗಳಿಗೆ ಆಂಗ್ಲ ಮಾಧ್ಯಮ ಪದವಿ ಕಡ್ಡಾಯ ಎಂಬ ಷರತ್ತನ್ನು ಕೆಪಿಎಸ್‌ಸಿ ವಿಧಿಸಿದೆ.

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು (ಅ.21):  ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಕಥೆ ಕೇಳಿ ಆಯ್ತು. ಇದೀಗ ಕರ್ನಾಟಕ ಲೋಕಸೇವಾ ಆಯೋಗವೇ ಕನ್ನಡಿಗರಿಗೆ ಅನ್ಯಾಯ ಮಾಡಲು ಮುಂದಾಗಿರುವ ಪ್ರಸಂಗ ಬಹಿರಂಗವಾಗಿದೆ.

ಹೌದು, ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಖಾಲಿಯಿರುವ ‘ಸಮಾಜ ವಿಜ್ಞಾನ’ ವಿಷಯದ ಶಿಕ್ಷಕರ ಹುದ್ದೆಗಳಿಗೆ ಆಂಗ್ಲ ಮಾಧ್ಯಮ ಪದವಿ ಕಡ್ಡಾಯ ಎಂಬ ಷರತ್ತನ್ನು ಕೆಪಿಎಸ್‌ಸಿ ವಿಧಿಸಿದೆ.

ವಿಚಿತ್ರ ಸಂಗತಿಯೆಂದರೆ, ಇಂತಹದೊಂದು ಷರತ್ತು ಇದೆ ಎಂದು ಆಯೋಗವು ಪರೀಕ್ಷೆ ನಡೆಸಿದಾಗ ಹೇಳಿಲ್ಲ. ಪರೀಕ್ಷೆ ಪೂರ್ಣಗೊಂಡು ಇನ್ನೇನು ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸುವ ಹಂತಬಂದಾಗ ತಾನು ಈ ಹಿಂದೆ ಕೈಬಿಟ್ಟಿದ್ದ ಈ ಷರತ್ತನ್ನು ಹಠಾತ್‌ ಮತ್ತೆ ಮುಂದೊಡ್ಡಿದೆ. ತನ್ಮೂಲಕ ಕನ್ನಡದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಉದ್ಯೋಗದಿಂದ ದೂರವಿಡುವ ಹುನ್ನಾರ ನಡೆಸಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಸುಮಾರು 1 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಹೆಚ್ಚು ಜನ ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದಿರುವವರಾಗಿದ್ದರು. ಈಗ ನೇಮಕಾತಿಯ ಅಂತಿಮ ಹಂತದಲ್ಲಿ ಕೆಪಿಎಸ್‌ಸಿ ವಿಧಿಸಿರುವ ಈ ವಿಪರೀತದ ಷರತ್ತಿನಿಂದಾಗಿ ದಾಖಲೆ ಪರಿಶೀಲನೆಗೆ ಒಳಗಾಗಿರುವ ಸುಮಾರು 500ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿ ಅತಂತ್ರವಾಗಲಿದೆ.

ರಾಜ್ಯದ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಖಾಲಿಯಿದ್ದ ಶಿಕ್ಷಕರು ಸೇರಿದಂತೆ ವಿವಿಧ 3 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ 2017ರ ಜೂನ್‌ ತಿಂಗಳಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಕನ್ನಡ ಮತ್ತು ಆಂಗ್ಲ ಭಾಷಾ ಶಿಕ್ಷಕರನ್ನು ಹೊರತುಪಡಿಸಿ ಇತರೆ ವಿಷಯಗಳನ್ನು ಬೋಧಿಸುವವರು ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂಬ ಷರತ್ತು ವಿಧಿಸುವ ಚಿಂತನೆ ಹೊಂದಿತ್ತು. ಆದರೆ, ಕನ್ನಡ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರಿಂದ ಆಕ್ಷೇಪ ವ್ಯಕ್ತಪಡಿಸಿದಾಗ ಈ ನಿರ್ಧಾರವನ್ನು ಕೈಬಿಟ್ಟಿತ್ತು. ಕನ್ನಡ ಪದವೀಧರರು ಸೇರಿದಂತೆ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.

2017ರ ಡಿಸೆಂಬರ್‌ ತಿಂಗಳಲ್ಲಿ ಎಲ್ಲ ಹುದ್ದೆಗಳ ಭರ್ತಿಗೆ ರಾಜ್ಯಾಧ್ಯಂದ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 2018ರ ಡಿಸೆಂಬರ್‌ ತಿಂಗಳಲ್ಲಿ ದಾಖಲೆಗಳನ್ನು ಪರೀಲನೆ ನಡೆಸಲಾಗಿದೆ. ಆದರೆ, ‘ಸಮಾಜ ವಿಜ್ಞಾನ’ ವಿಷಯಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಪದವಿ ಪಡೆದಿರುವ ಕುರಿತು ವಿಶ್ವವಿದ್ಯಾಲಯಗಳ ಕುಲಸಚಿವರಿಂದ ಪತ್ರ ತರಬೇಕು ಎಂಬ ವಿಚಿತ್ರ ನಿರ್ದೇಶನವನ್ನು ನೀಡಿದೆ.

ಕನ್ನಡದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಪದವಿ ಪಡೆದಿದ್ದಾರೆ ಎಂದು ಯಾವ ವಿಶ್ವವಿದ್ಯಾಲಯವೂ ಪತ್ರ ನೀಡಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತಹ ನಿರ್ದೇಶನವನ್ನು ಕೆಪಿಎಸ್ಸಿ ಅಧಿಕಾರಿಗಳು ನೀಡಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸುತ್ತಾರೆ. ಇದೆಲ್ಲದರ ಒಟ್ಟಾರೆ ಪರಿಣಾಮ ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದು ‘ಸಮಾಜ ವಿಜ್ಞಾನ’ ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಅರ್ಹತೆಯಿದ್ದರೂ ಇಂಗ್ಲಿಷ್‌ ಪದವಿ ಇಲ್ಲ ಎಂಬ ಕಾರಣಕ್ಕೆ ಹುದ್ದೆ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.

ಸಿಎಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ:

ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದು ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾಗಿದ್ದು, ನೇಮಕಾತಿ ಆದೇಶದ ನಿರೀಕ್ಷೆಯಲ್ಲಿರುವ ಹಲವು ಅಭ್ಯರ್ಥಿಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿರುವ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ನೇಮಕಾತಿ ಅಧಿಸೂಚನೆ:

ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಶಿಕ್ಷರು ಸೇರಿದಂತೆ ಇತರೆ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದ ಕೆಪಿಎಸ್‌ಸ್ಸಿ 234 ಕನ್ನಡ ಭಾಷೆ, 288 ಆಂಗ್ಲ ಭಾಷಾ, 191 ಹಿಂದಿ, 165 ಗಣಿತ, 271 ವಿಜ್ಞಾನ, 239 ಸಮಾಜ ವಿಜ್ಞಾನ, 189 ದೈಹಿಕ ಶಿಕ್ಷಣ, 226 ಕಂಪ್ಯೂಟರ್‌, 465 ಪ್ರಥಮ ದರ್ಜೆ ಸಹಾಯಕರು, 517 ವಾರ್ಡ್‌ನ್‌ಗಳು ಮತ್ತು 263 ಶುಶ್ರೂಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು.

ಪ್ರತಿಕ್ರಿಯೆ ನೀಡಲು ಕೆಪಿಎಸ್ಸಿ ತಯಾರಿಲ್ಲ!

ಲಿಖಿತ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಆಗ್ಲಭಾಷೆಯಲ್ಲಿ ಪದವಿ ಪಡೆಯುವುದು ಕಡ್ಡಾಯ ಎಂಬುದಾಗಿ ಷರತ್ತು ವಿಧಿಸಿರುವ ಕುರಿತು ಪ್ರತಿಕ್ರಿಯೆ ನೀಡಲು ಕೆಪಿಎಸ್ಸಿಯ ಯಾವ ಅಧಿಕಾರಿಯೂ ತಯಾರಿಲ್ಲ. ಈ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿ ಸತ್ಯವತಿ ಅವರನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನ ನಡೆಸಿದರೂ ಮೇಡಂ ಬ್ಯುಸಿ ಎಂಬ ಉತ್ತರವೇ ಅವರ ಆಪ್ತ ಸಿಬ್ಬಂದಿಯಿಂದ ಲಭ್ಯವಾಯಿತು.

ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗಿಂತ ಕಡಿಮೆ ಅಂಕ ಪಡೆದಿರುವ ಆಂಗ್ಲ ಮಾಧ್ಯಮದಲ್ಲಿ ಪದವಿ ಪಡೆದವರನ್ನು ನೇಮಿಸಲು ಮುಂದಾಗುತ್ತಿದ್ದಾರೆ. ಇದರಿಂದ ಕನ್ನಡ ಮಾಧ್ಯಮದವರಿಗೆ ಅನ್ಯಾಯ ಮಾಡಿದಂತಾಗುತ್ತದೆ.

- ಹೆಸರು ಬಹಿರಂಗ ಪಡಿಸಲಿಚ್ಛಿಸದ ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆ ಆಕಾಂಕ್ಷಿ

click me!