ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಹೈಕೋರ್ಟ್‌ಗೆ! ಕಾರಣ ಇಲ್ಲಿದೆ

By Kannadaprabha News  |  First Published Jun 25, 2024, 6:36 AM IST

ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ ರಾಜ್ಯ ಸರ್ಕಾರದ ನಡೆಯನ್ನು ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.


ಬೆಂಗಳೂರು (ಜೂ.25): ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ ರಾಜ್ಯ ಸರ್ಕಾರದ ನಡೆಯನ್ನು ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.ಆಯೋಗವು ಸರ್ಕಾರದ ವಿರುದ್ಧ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸೋಮವಾರ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರು ಮಾಡಿದ ಮನವಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿದೆ. ಇದಕ್ಕೂ ಮುನ್ನ ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗ(karnataka Election Commission)ದ ಪರ ಹಿರಿಯ ವಕೀಲರು, ಈ ಹಿಂದೆ ರಾಜ್ಯ ಸರ್ಕಾರ(Karnataka government) ಹೈಕೋರ್ಟ್‌(Karnataka highcourt)ಗೆ ನೀಡಿದ್ದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಮೀಸಲಾತಿ ಅಂತಿಮಗೊಳಿಸಿಲ್ಲ. ಇದರಿಂದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್‌ ಜನರಲ್ ಪ್ರತಿಮಾ ಹೊನ್ನಾಪುರ, ಈ ವಿಚಾರವಾಗಿ ರಾಜ್ಯ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆ ಮನವಿ ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.

Tap to resize

Latest Videos

ರಾಜ್ಯದಲ್ಲಿ ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ಡಿಸಿಎಂ ಹುದ್ದೆ ಚರ್ಚೆಗೆ ಬಿರುಸು!

ಪ್ರಕರಣದ ಹಿನ್ನೆಲೆ:  ರಾಜ್ಯದಲ್ಲಿ ಅವಧಿ ಮುಗಿದ ಜಿ.ಪಂ., ತಾ.ಪಂ.ಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹಾಗೂ ರಾಜ್ಯದಲ್ಲಿ ತಾ.ಪಂ. ಮತ್ತು ಜಿ.ಪಂ. ಕ್ಷೇತ್ರ ಮರುವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ಗೆ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅರ್ಜಿಯು 2023ರ ಡಿ.19ರಂದು ವಿಚಾರಣೆ ಬಂದಿದ್ದ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ರಾಜ್ಯದ ಜಿ.ಪಂ., ತಾ.ಪಂ. ಕ್ಷೇತ್ರಗಳ ಚುನಾವಣೆ ನಡೆಸಲು ಮೀಸಲು ಮತ್ತು ಕ್ಷೇತ್ರ ಭೌಗೋಳಿಕ ಗಡಿಗಳನ್ನು ನಿರ್ಧರಿಸುವ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ 30 ಜಿಲ್ಲೆಗಳ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆಯನ್ನು 2023ರ ಡಿ.19ರಂದು ಪ್ರಕಟಿಸಲಾಗುವುದು. ನಂತರದ ಏಳು ದಿನಗಳಲ್ಲಿ ಕೊಡಗು ಜಿಲ್ಲೆಯ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆ ಪ್ರಕಟಿಸಲಾಗುವುದು. ಅದಾದ ಏಳು ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗುವುದು. ಮೀಸಲಾತಿ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡಲಾಗುವುದು. ಅದಾದ ಎರಡು ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು ಸರ್ಕಾರಿ ವಕೀಲರು ತಿಳಿಸಿದ್ದರು.

ರಾಜ್ಯದ 27 ಎಂಪಿಗಳು ಕನ್ನಡದಲ್ಲಿ, ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ!

ಈ ಹೇಳಿಕೆ ದಾಖಲಿಸಿಕೊಂಡು ಅರ್ಜಿ ಇತ್ಯರ್ಥಪಡಿಸಿದ್ದ ಹೈಕೋರ್ಟ್‌, ನ್ಯಾಯಾಲಯಕ್ಕೆ ನೀಡಿರುವ ಭರವಸೆಯಂತೆ ಸರ್ಕಾರ ನಡೆದುಕೊಳ್ಳದಿದ್ದರೆ ಪುನಃ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಆಯೋಗಕ್ಕೆ ತಿಳಿಸಿತ್ತು. ಇದೀಗ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿರುವ ಆಯೋಗ, ನ್ಯಾಯಾಲಯಕ್ಕೆ ನೀಡಿರುವ ಭರವಸೆಯಂತೆ ರಾಜ್ಯ ಸರ್ಕಾರ ನಡೆದುಕೊಂಡಿಲ್ಲ. ಇದರಿಂದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದೆ.

click me!