ಗ್ರಾ.ಪಂ. ಚುನಾವಣೆ ಮುಂದೂಡಿಕೆ ಅಸಾಧ್ಯ, ಎಲ್ಲ ಸಿದ್ಧತೆ ಆಗಿದೆ: ಚು.ಆಯೋಗ!

By Kannadaprabha NewsFirst Published Oct 17, 2020, 7:20 AM IST
Highlights

ಗ್ರಾ.ಪಂ. ಚುನಾವಣೆ ಮುಂದೂಡಿಕೆ ಅಸಾಧ್ಯ| ಸರ್ಕಾರ, ಪಕ್ಷಗಳು ಮುಂದೂಡಿಕೆ ಕೋರಿವೆ| ಆದರೆ, ಎಲ್ಲ ಸಿದ್ಧತೆ ಆಗಿದೆ: ಚು.ಆಯೋಗ| 

ಬೆಂಗಳೂರು(ಅ.17): ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಸಂಭಾವ್ಯ ವೇಳಾಪಟ್ಟಿಸಹ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಅವಧಿ ಮುಗಿದ ಗ್ರಾಮ ಪಂಚಾಯತಿಗಳಿಗೆ ಶೀಘ್ರ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೋವಿಡ್‌ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ರಾಜ್ಯ ಸರ್ಕಾರ ಅ.3ರಂದು ಬರೆದ ಪತ್ರದ ಎಲ್ಲ ಅಂಶವನ್ನು ಚರ್ಚಿಸಿದ ಬಳಿಕ ಚುನಾವಣೆ ಮುಂದೂಡದಿರಲು ತೀರ್ಮಾನಿಸಿ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಆಯೋಗದ ಪರ ವಕೀಲ ಕೆ.ಎನ್‌.ಫಣೀಂದ್ರ ನ್ಯಾಯಪೀಠಕ್ಕೆ ತಿಳಿಸಿದರು.

ಅಲ್ಲದೆ, ಗ್ರಾಮ ಪಂಚಾಯತಿ ಚುನಾವಣೆಗಳನ್ನು ಮುಂದೂಡುವಂತೆ ಕೋರಿ ರಾಜ್ಯ ಸರ್ಕಾರ ಅ.15ರಂದು ಮತ್ತೊಂದು ಪತ್ರ ಬರೆದಿದೆ. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸಹ ಚುನಾವಣೆ ಮುಂದೂಡುವಂತೆ ಪತ್ರ ಬರೆದಿವೆ. ಆದರೆ ಈಗಾಗಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಭಾವ್ಯ ವೇಳಾಪಟ್ಟಿಯನ್ನೂ ಸಹ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ನ್ಯಾಯಪೀಠ ಪ್ರತಿಕ್ರಿಯಿಸಿ, ಆಯೋಗ ತನ್ನ ನಿಲುವು ಸ್ಪಷ್ಟಪಡಿಸಿದೆ. ಈಗಾಗಲೇ ನ್ಯಾಯಾಲಯಕ್ಕೆ ಸಂಭಾವ್ಯ ವೇಳಾಪಟ್ಟಿಯನ್ನೂ ಸಲ್ಲಿಸಿದೆ. ಹೀಗಾಗಿ, ಆಯೋಗ ಚುನಾವಣೆ ನಡೆಸಬಹುದಲ್ಲವೇ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.

ಸರ್ಕಾರಿ ವಕೀಲರು ಉತ್ತರಿಸಿ, ಈ ವಿಚಾರದಲ್ಲಿ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ವಾದ ಮಂಡಿಸಲಿದ್ದಾರೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ ವಿಚಾರಣೆಯನ್ನು ಅ.21ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪ್ರೊ.ರವಿವರ್ಮ ಕುಮಾರ್‌, ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಹೀಗಾಗಿ, ಗ್ರಾಮ ಪಂಚಾಯತಿಗಳ ಚುನಾವಣೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಅಥವಾ ಮಧ್ಯಪ್ರವೇಶ ಮಾಡುವುದಕ್ಕೆ ಅವಕಾಶವೇ ಇಲ್ಲ. ಆದ್ದರಿಂದ ಚುನಾವಣೆ ನಡೆಸುವಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.

click me!