
ಬೆಂಗಳೂರು (ಜು.02): ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸದೇ ಇರುವ ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ತೆಗೆದು ಹಾಕಲು ಭಾರತ ಚುನಾವಣಾ ಆಯೋಗ ನಿರ್ಧರಿಸಿದೆ. ಈ ಬಗ್ಗೆ ವಿಚಾರಣೆಯನ್ನು ಜುಲೈ 18, 2025 ರಂದು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ, ಇವರ ಕಛೇರಿಯಲ್ಲಿ ನಡೆಸಲಾಗುವುದು ಎಂದು ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಜಗದೀಶ.ಜಿ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕರಣ 29(ಎ)ರಡಿ ರಾಜಕೀಯ ಪಕ್ಷಗಳು ನೋಂದಣಿ ಮಾಡಿಕೊಂಡಿವೆ. ಆದರೆ, ಸಕ್ರಿಯವಾಗಿ ಕಾರ್ಯನಿರ್ವಹಿಸದ ಹಾಗೂ ವಿಳಾಸ ಪತ್ತೆ ಹಚ್ಚಲು ಸಾಧ್ಯವಿಲ್ಲದ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಾದ ನಮ್ಮ ಕಾಂಗ್ರೆಸ್, ಪ್ರಜಾ ರೈತ ರಾಜ್ಯ ಪಕ್ಷ, ಕಲ್ಯಾಣ ಕ್ರಾಂತಿ ಪಾರ್ಟಿ, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ, ರಕ್ಷಕ ಸೇನೆ, ಮಹಿಳಾ ಪ್ರಧಾನ ಪಕ್ಷ, ಅಂಬೇಡ್ಕರ್ ಜನತಾ ಪಾರ್ಟಿ ಹಾಗೂ ಕರ್ನಾಟಕ ಪ್ರಜಾ ವಿಕಾಸ ಪಾರ್ಟಿಗಳು ಕಳೆದ 6 ವರ್ಷಗಳಿಂದ ಯಾವುದೇ ಲೋಕಸಭೆ, ವಿಧಾನಸಭೆ ಹಾಗೂ ಉಪ ಚುನಾವಣೆಗಳಲ್ಲಿ ಸ್ಪರ್ಧಿಸಿಲ್ಲ. ಈ ಹಿನ್ನಲೆಯಲ್ಲಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರಡಿಯಲ್ಲಿ ನೋಂದಣಿಯಾದ ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗೆದು ಹಾಕಲು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಕಾರಣ ಕೇಳುವ ನೋಟಿಸನ್ನು ಜಾರಿಗೊಳಿಸಿರುತ್ತಾರೆ.
ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ತೆಗದು ಹಾಕುವ ಮುನ್ನ ಈ ರಾಜಕೀಯ ಪಕ್ಷಗಳಿಗೆ ತಮ್ಮ ಹೇಳಿಕೆ ದಾಖಲಿಸಲು ಒಂದು ಅವಕಾಶವನ್ನು ಕಲ್ಪಿಸಲಾಗಿದೆ. ದಿನಾಂಕ 18-07-2025 ರಂದು ಪಕ್ಷದ ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿಗಳ ಪ್ರಮಾಣ ಪತ್ರ, ಇತರೆ ದಾಖಲೆಗಳು ಹಾಗೂ ಮನವಿಯೊಂದಿಗೆ ಪಕ್ಷದ ಮುಖ್ಯಸ್ಥರು/ ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿಗಳು ಕಡ್ಡಾಯವಾಗಿ ವಿಚಾರಣೆಗೆ ಹಾಜರಿರಬೇಕು.
ಒಂದು ವೇಳೆ ನಿಗದಿತ ಸಮಯದೊಳಗೆ ಪಕ್ಷದಿಂದ ಯಾವುದೇ ಲಿಖಿತ ಮನವಿ ಸ್ವೀಕೃತವಾಗದೇ ಇದ್ದಲ್ಲಿ ಪಕ್ಷದ ಯಾವುದೇ ಹೇಳಿಕೆ ಇರುವುದಿಲ್ಲವೆಂದು ಪರಿಗಣಿಸಿ, ಪಕ್ಷವನ್ನು ಸಂಪರ್ಕಿಸದೇ ಚುನಾವಣಾ ಆಯೋಗದಿಂದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಜಗದೀಶ.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ