
ಬೆಂಗಳೂರು ನಗರದ ಈಜಿಪುರ ಫ್ಲೈಓವರ್ ಕಾಮಗಾರಿ ಕಳೆದ 8 ವರ್ಷಗಳಿಂದ ವಿಳಂಬವಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರಲ್ಲಿ ಅಸಹನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಾಮಗಾರಿ ಮುಗಿಸಿ ಕೊಡುವುದಕ್ಕೆ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈಜಿಪುರ ಫ್ಲೈಓವರ್ ಕಾಮಗಾರಿ 2017ರಲ್ಲಿ ಪ್ರಾರಂಭಗೊಂಡಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಕಾಮಗಾರಿ ವಿಳಂಬದಿಂದಾಗಿ ಸ್ಥಳೀಯರು ದೈನಂದಿನ ಸಂಚಾರ ದಟ್ಟಣೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, @BengaluruRains_ ಎಂಬ ಎಕ್ಸ್ ಖಾತೆಯಿಂದ, 'ಹಲೋ @realDonaldTrump, ದಯವಿಟ್ಟು ಬಿಬಿಎಂಪಿಯೊಂದಿಗೆ ಮಧ್ಯಸ್ಥಿಕೆ ವಹಿಸಿ ಈಜಿಪುರ ಫ್ಲೈಓವರ್ ಕಾಮಗಾರಿ ವೇಗವಾಗಿ ಪೂರ್ಣಗೊಳ್ಳುವಂತೆ ಮಾಡಿ. ನಾವು ಈ ಮೇಲ್ಸೇತುವೆಗೆ 'ಮೆಗಾ ಟ್ರಂಪ್ ಫ್ಲೈಓವರ್' ಎಂದು ಹೆಸರಿಡುತ್ತೇವೆ' ಎಂಬ ಪೋಸ್ಟ್ ಮಾಡಲಾಗಿದೆ.
ಈ ಪೋಸ್ಟ್ ನಂತರ, 'ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸುವುದು ದೊಡ್ಡ ವಿಷಯವಲ್ಲ. ಟ್ರಂಪ್ ಅವರು ತಮ್ಮ ನೈಪುಣ್ಯವನ್ನು ಸಾಬೀತುಪಡಿಸಲು ಈಜಿಪುರ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸುವಂತೆ ಮಾಡಿ' ಎಂಬ ಸವಾಲು ಹಾಕಲಾಗಿದೆ. ಈ ಹಾಸ್ಯಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ, ನಗರದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿಗಳ ವಿಳಂಬದ ವಿರುದ್ಧ ಸಾರ್ವಜನಿಕರ ಅಸಹನೆ ಮತ್ತು ನಿರಾಸೆಯನ್ನು ಪ್ರತಿಬಿಂಬಿಸುತ್ತದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಂಬಂಧಿತ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ಕ್ರಮ ಕೈಗೊಳ್ಳಬೇಕಾಗಿದೆ.
ಬೆಂಗಳೂರಿನ 2ನೇ ಅತಿ ಉದ್ದದ ಮೇಲ್ಸೇತುವೆ: ರಾಜಧಾನಿ ಬೆಂಗಳೂರಿನ ಎರಡನೇ ಅತಿ ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಹಿಡಿದಿರುವ ಗ್ರಹಣ ಬಿಡುವ ಲಕ್ಷಣಗಳೇ ಕಾಣುತ್ತಿಲ್ಲ. ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಗ್ಗಿಸಲು ಬಿಬಿಎಂಪಿಯು ಈಜಿಪುರ ಮುಖ್ಯರಸ್ತೆಯ ಒಳ ವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ಕೈಗೊಂಡಿದ್ದ 2.5 ಕಿ.ಮೀ. ಉದ್ದದ ಮೇಲ್ಸೇತುವೆಯ ಬಾಕಿ ಕಾಮಗಾರಿ ಪೂರ್ಣಕ್ಕೆ ಟೆಂಡರ್ ಆಹ್ವಾನಿಸಿ, ಹೈದರಾಬಾದ್ ಮೂಲದ ಬಿಎಸ್‌ಸಿಪಿಎಲ್ ಪ್ರೈವೇಟ್ ಲಿಮಿಟೆಡ್‌ಗೆ ಗುತ್ತಿಗೆ ನೀಡಿದೆ. 2023ರ ನ.15ರಂದೇ ಕಾರ್ಯಾದೇಶ ನೀಡಿ, 15 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ, ಈ ಕಂಪನಿಯೂ ಸರಿಯಾಗಿ ಕೆಲಸ ಮಾಡದ ಕಾರಣ ಗುತ್ತಿಗೆ ರದ್ದು ಮಾಡಲಾಗಿದೆ.
2017ರಲ್ಲಿ ಆರಂಭಗೊಂಡ ಕಾಮಗಾರಿ: 2017ರ ಮೇ 4ರಂದು ಆರಂಭವಾದ ಕಾಮಗಾರಿ 2019ರ ನ.4ಕ್ಕೆ ಪೂರ್ಣಗೊಳ್ಳಬೇಕೆಂದು ಯೋಜನೆ ರೂಪಿಸಲಾಗಿತ್ತು. ಒಟ್ಟು ₹203.20 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್ ಕಂಪನಿಗೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಕಾರಣಕ್ಕೆ ಗುತ್ತಿಗೆ ರದ್ದು ಪಡಿಸಿ ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಕ್ಕೆ ಹೊಸದಾಗಿ ಟೆಂಡರ್ ಆಹ್ವಾನಿಸಿ, 2023ರ ನವೆಂಬರ್‌ನಲ್ಲಿ ಬಿಎಸ್‌ಸಿಪಿಎಲ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಪೂರ್ಣಕ್ಕಾಗಿ ₹176.11 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಮೂಲ ವೆಚ್ಚಕ್ಕಿಂತ ₹48.02 ಕೋಟಿ ಹೆಚ್ಚುವರಿ ಮೊತ್ತ ಖರ್ಚು ಮಾಡಲಾಗುತ್ತಿದೆ. ಮೇಲ್ಸೇತುವೆಯ ಒಟ್ಟು 81 ಪಿಲ್ಲರ್‌ಗಳ ಪೈಕಿ 67 ಪಿಲ್ಲರ್‌ಗಳನ್ನು ಮಾತ್ರ ನಿರ್ಮಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ