
ಬೆಂಗಳೂರು (ಸೆ.21): ಹಣಕಾಸು ಇಲಾಖೆಯ ಸ್ಪಷ್ಟ ಆಕ್ಷೇಪಣೆ ಮೀರಿ ಲೋಕೋಪಯೋಗಿ ಇಲಾಖೆಯಲ್ಲಿ ಕೆಟಿಪಿಪಿ ಕಾಯ್ದೆ ನಿಯಮಗಳನ್ನು ಪಾಲಿಸದೆ ಬರೋಬ್ಬರಿ 1000 ಕೋಟಿಗೂ ಅಧಿಕ ಮೊತ್ತದ ರಸ್ತೆ ಕಾಮಗಾರಿಗಳ ಟೆಂಡರ್ ಅನ್ನು ಎರಡನೇ ಕಡಿಮೆ ಮೊತ್ತದ ಬಿಡ್ಡರ್‌ಗೆ (ಎಲ್ 2) ನೀಡಿರುವ ಆರೋಪಗಳು ಕೇಳಿಬಂದಿವೆ.
ಜಾರಿ ನಿರ್ದೇಶನಾಲಯವು(ಇ.ಡಿ) ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಸಹಚರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯ ವೇಳೆ ನಿಯಮ ಉಲ್ಲಂಘಿಸಿ ಟೆಂಡರ್ ನೀಡಿರುವ ಕುರಿತ ದಾಖಲೆಗಳು ಬಯಲಾಗಿದ್ದವು. ಕಡಿಮೆ ಮೊತ್ತ ನಮೂದಿಸಿದ ಮೊದಲ(ಎಲ್1) ಬಿಡ್ಡರ್‌ಗೆ ಟೆಂಡರ್ ನೀಡದಿದ್ದಾಗ ನಿಯಮ ಪ್ರಕಾರ ಹೊಸ ಟೆಂಡರ್ ಕರೆಯಬೇಕಾಗುತ್ತದೆ. ಆದರೆ, 1054 ಕೋಟಿ ರು. ಮೊತ್ತದ ರಸ್ತೆ ಟೆಂಡರ್ ಕಾಮಗಾರಿಗಳಲ್ಲಿ ಇದನ್ನು ಪಾಲಿಸಿಲ್ಲ ಎಂದು ಇ.ಡಿ ಹೇಳಿತ್ತು.
ಈ ಸಂಬಂಧ ಹಣಕಾಸು ಇಲಾಖೆಯು ಲೋಕೋಪಯೋಗಿ ಇಲಾಖೆ ಟೆಂಡರ್ ಪ್ರಕ್ರಿಯೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿ ‘ಕನ್ನಡಪ್ರಭ’ಗೆ ಲಭ್ಯವಾಗಿದೆ. ಸಿದ್ದರಾಮಯ್ಯ ನೇತೃತ್ವದ ಮೊದಲ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಅವರೇ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಾಗ ಈ ನಿಯಮ ಉಲ್ಲಂಘನೆ ಆಗಿರುವ ಆರೋಪವಿದ್ದು, ಇದರಿಂದ ಸಚಿವರೇ ನಿಯಮ ಮೀರಿ ಎಲ್2 ಬಿಡ್ಡರ್‌ಗೆ ಟೆಂಡರ್ ನೀಡಲು ಕಾರಣರಾದರಾ? ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ ರಸ್ತೆ ಟೆಂಡರ್ ಪ್ಯಾಕೇಜ್ ಅನ್ನು ಆರಂಭದಲ್ಲಿ ಕಡಿಮೆ ಬಿಡ್ಡರ್‌ಗೆ (ಎಲ್ 4) ನೀಡಲು ಮುಂದಾಗಿತ್ತು. ಇದಕ್ಕೆ ಆಕ್ಷೇಪ ಬಂದು ಅನರ್ಹಗೊಳಿಸಿದ ನಂತರ ಇಲಾಖೆಯು ಕೋಲ್ಕತ್ತಾ ಮೂಲದ 12 ಬಿಡ್ಡರ್‌ಗಳಿಗೆ ಒಪ್ಪಂದ ನೀಡಲು ಒತ್ತಾಯಿಸಿತು ಎಂದು ಹೇಳಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಕ್ಷರಕ್ಷಣಾ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ನಿಯಮಗಳ ಪ್ರಕಾರ, ಯಾವುದೇ ಕಾಮಗಾರಿಗೆ ಹಣಕಾಸು ಬಿಡ್ ತೆರೆದಾಗ ಎಲ್1 ಬಿಡ್ಡರ್ ಅನ್ನು ಯಾವುದೇ ಕಾರಣಗಳಿಂದ ಅನರ್ಹಗೊಳಿಸಿದ ನಂತರ, ಹೊಸ ಟೆಂಡರ್ ಕರೆಯಬೇಕಾಗುತ್ತದೆ.
ಯಾವುದೇ ಕಾರಣಕ್ಕೂ ಎಲ್ 2 ಬಿಡ್ಡರ್ ಅನ್ನು ಪರಿಗಣಿಸುವಂತಿಲ್ಲ. ಲೋಕೋಪಯೋಗಿ ಇಲಾಖೆಯು ಎಲ್ 2 ಬಿಡ್ಡರ್ ಅನ್ನು ಪರಿಗಣಿಸಿದ ಕ್ರಮವನ್ನು ಹಣಕಾಸು ಇಲಾಖೆ ಬಲವಾಗಿ ವಿರೋಧಿಸಿರುವುದಲ್ಲದೆ, ನಿಯಮಾನುಸಾರ ಹೊಸ ಟೆಂಡರ್ ಕರೆಯುವುದೊಂದೇ ಇರುವ ಮಾರ್ಗ ಎಂದು 2016ರ ಮಾರ್ಚ್ 31ರ ಟಿಪ್ಪಣಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಅಷ್ಟೇ ಅಲ್ಲ, ಇದಾದ ನಂತರವೂ ಲೋಕೋಪಯೋಗಿ ಇಲಾಖೆಯು ಹಣಕಾಸು ಇಲಾಖೆಯ ಈ ಆಕ್ಷೇಪಗಳ ಬಗ್ಗೆ ಹಾಗೂ ಬಿಡ್‌ದಾರರ ಮರು ಮೌಲ್ಯಮಾಪನ ವಿಚಾರವನ್ನು ಸಚಿವ ಸಂಪುಟ ಮುಂದೆ ಇಡಬಹುದೇ ಎಂದು ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದೆ. ಇದಕ್ಕೂ ಹಣಕಾಸು ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಅವರ ನೇತೃತ್ವದ ಹಣಕಾಸು ಇಲಾಖೆ ಹೊರಡಿಸಿದ ನಿಯಮಗಳು ಮತ್ತು ಸುತ್ತೋಲೆಗಳ ಬಗ್ಗೆ ಪಿಡಬ್ಲ್ಯುಡಿ ಇಲಾಖೆ, ಕಾನೂನು ಇಲಾಖೆಯ ಅಭಿಪ್ರಾಯ ಕೇಳಲು ಸಾಧ್ಯವಿಲ್ಲ. 12 ಬಿಡ್‌ಗಳನ್ನು ಹೊಸದಾಗಿ ಆರಂಭಿಸುವುದು ಬಿಟ್ಟು ಬೇರೆ ಯಾವ ದಾರಿಯೂ ಇಲ್ಲ ಎಂದು ಎಚ್ಚರಿಕೆಯನ್ನೂ ನೀಡಿದೆ.
ಇದರ ಹೊರತಾಗಿಯೂ ಸರ್ಕಾರ ಈ ಬಿಡ್‌ಗಳಿಗೆ ಸಂಬಂಧಿಸಿದ ಫೈಲ್ ಅನ್ನು ಮುಂದುವರೆಸಿ ಪಿಡಬ್ಲ್ಯುಡಿ ಇಲಾಖೆ ಎಲ್2 ಬಿಡ್ಡರ್‌ಗೆ ಟೆಂಡರ್ ನೀಡಲು ದಾರಿ ಮಾಡಿಕೊಟ್ಟಿತು ಎಂದು ಹೇಳಲಾಗಿದೆ. ಇದೆಲ್ಲವೂ ನಡೆದಿರುವುದು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು.
ಈ ಮಧ್ಯೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ, ಇಲಾಖೆಯ ಯಾವುದೇ ರಸ್ತೆ ಟೆಂಡರ್‌ಗಳಲ್ಲಿ ನಿಯಮ ಉಲ್ಲಂಘಿಸಿಲ್ಲ. ಹಣಕಾಸು ಮತ್ತು ಕಾನೂನು ಇಲಾಖೆ ಅನುಮೋದನೆ ಮತ್ತು ಅಭಿಪ್ರಾಯ ಪಡೆದೇ ಡೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ